ಕೋಲ್ಕತಾ: ಮಹಾತ್ಮಾ ಗಾಂಧಿಯನ್ನು ಹೋಲುವ 'ಅಸುರ': ಹಿಂದೂ ಮಹಾಸಭಾ ಮುಖ್ಯಸ್ಥನ ವಿರುದ್ಧ ಎಫ್‌ಐಆರ್

Update: 2022-10-03 17:47 GMT
Photo: India Today

ಕೋಲ್ಕತಾ, ಅ. 3: ನೈಋತ್ಯ ಕೋಲ್ಕತ್ತಾದಲ್ಲಿ ದುರ್ಗಾ ಪೂಜೆ ಪೆಂಡಾಲ್‌ನಲ್ಲಿ ಮಹಾತ್ಮಾ ಗಾಂಧಿ ಅವರನ್ನು ಹೋಲುವ ಮಹಿಷಾಸುರನ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಅಖಿಲ ಭಾರತ ಹಿಂದೂ ಮಹಾ ಸಭಾದ ಮುಖ್ಯಸ್ಥನ ವಿರುದ್ಧ ಕೋಲ್ಕತ್ತಾ ಪೊಲೀಸರು ಸೋಮವಾರ ಎಫ್‌ಐಆರ್ ದಾಖಲಿಸಿದ್ದಾರೆ. 

ಗಾಂಧಿಯನ್ನು ಹೋಲುವ ಮಹಿಷಾಸುರನ ವಿಗ್ರಹ ಸ್ಥಾಪಿಸಿರುವ ಬಗ್ಗೆ ಹಲವು ರಾಜಕಾರಣಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾದ ಬಳಿಕ  ಕೋಲ್ಕತಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.  
ಈ ಬೆಳವಣಿಗೆ ಕುರಿತಂತೆ ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್, ‘‘ಇದು ಬಿಜೆಪಿಯ ನಿಜವಾದ ಮುಖ. ಮಹಾತ್ಮಾ ಗಾಂಧಿ ಅವರು ರಾಷ್ಟ್ರಪಿತ. ಜಗತ್ತೇ ಗಾಂಧಿ ಹಾಗೂ ಅವರ ಸಿದ್ಧಾಂತಕ್ಕೆ ಗೌರವ ನೀಡುತ್ತದೆ. ಮಹಾತ್ಮ ಗಾಂಧಿಗೆ ಈ ರೀತಿ ಅವಮಾನ ಮಾಡುತ್ತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಾವು ಇದನ್ನು ತೀವ್ರವಾಗಿ ಖಂಡಿಸುತ್ತೇವೆ’’ ಎಂದಿದ್ದಾರೆ.  
‘‘ಇದು ಕಾಕತಾಳೀಯವಲ್ಲ. ಇದು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ರಾಕ್ಷಸರಂತೆ ಬಿಂಬಿಸುವ ಉದ್ದೇಶಪೂರ್ವಕ ಪ್ರಯತ್ನ. ಒಂದು ರಾಷ್ಟ್ರವಾಗಿ ನಾವು ನಿಜವಾಗಿಯೂ ನಮ್ಮ ನೈತಿಕ ದಿಕ್ಸೂಚಿಯನ್ನು ಕಳೆದುಕೊಂಡಿದ್ದೇವೆ’’ ಎಂದು ಶಿವಸೇನೆಯ ಪ್ರಿಯಾಂಕ ಚತುರ್ವೇದಿ ಅವರು ಆರೋಪಿಸಿದ್ದಾರೆ.  
ಮಹಾತ್ಮಾ ಗಾಂಧಿ ಅವರಿಗೆ ಈ ರೀತಿ ಅವಮಾನ ಮಾಡುವುದು ಇಡೀ ಜಗತ್ತಿಗೇ ಅವಮಾನ ಮಾಡಿದಂತೆ ಎಂದು ಕಾಂಗ್ರೆಸ್ ವಕ್ತಾರೆ ಸೌಮ್ಯಾ ಐಚ್ ರಾಯ್ ಅವರು ಹೇಳಿದ್ದಾರೆ. ಈ ನಡುವೆ, ಅಖಿಲ ಭಾರತ ಹಿಂದೂ ಮಹಾ ಸಭಾ ಬೋಳು ತಲೆಯ, ಬಿಳಿ ದೋತಿ ಹಾಗೂ ದುಂಡಗಿನ ಕನ್ನಡಕ ಧರಿಸಿದ್ದ ಮಹಿಷಾಸುರ ವಿಗ್ರಹ ಮಹಾತ್ಮಾ ಗಾಂಧಿಯನ್ನು ಹೋಲುತ್ತಿರುವುದು ಕಾಕತಾಳೀಯ ಎಂದು ಹೇಳಿಕೊಂಡಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News