ವನ್ಯಜೀವಿಗಳನ್ನು ರಕ್ಷಿಸುವುದು ನಮ್ಮ ಹೊಣೆ: ಸಚಿವ ಸುನಿಲ್‌ ಕುಮಾರ್‌

Update: 2022-10-03 11:55 GMT

ಕಾರ್ಕಳ : ಈ ಭೂಮಿ ಮೇಲೆ ಮನುಷ್ಯನಿಗೆ ಬದುಕಲು ಇರುವಷ್ಟೇ ಅವಕಾಶ ಪ್ರಾಣಿಗಳಿಗೂ ಇದೆ. ಆದರೆ ಮನುಷ್ಯನ ದುರಾಸೆಯಿಂದ ಪ್ರಾಣಿಗಳ ಸ್ಥಳವನ್ನು ಆಕ್ರಮಿಸಿಕೊಳ್ಳುತ್ತಿರುವುದರಿಂದ ಪ್ರಾಣಿ ಸಂಕುಲ ಮಾಯವಾಗುತ್ತಿದೆ. ಮಾನವ-ಪ್ರಾಣಿ ಸಂಘರ್ಷಕ್ಕೆ ನಾವು ಪ್ರಾಣಿಗಳ ಹಕ್ಕುಗಳನ್ನು ಅತಿಕ್ರಮಿಸಿರುವುದು ಕಾರಣ. ಅರಣ್ಯ ಪ್ರದೇಶ ಪಶ್ಚಿಮ ಘಟ್ಟ ಅತ್ಯಂತ ಸೂಕ್ಷ್ಮವಾಗಿದ್ದು, ನೂರಾರು ಅತ್ಯಪೂರ್ವ ಸಸ್ಯ ಮತ್ತು ಪ್ರಾಣಿಗಳ ವಾಸಸ್ಥಾನವಾಗಿದೆ. ಅದನ್ನು ರಕ್ಷಿಸುವುದು ನಮ್ಮ ಹೊಣೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್‌ ಕುಮಾರ್‌ ಹೇಳಿದರು.

ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ ವತಿಯಿಂದ 68ನೇ ವನ್ಯಜೀವಿ ಸಪ್ತಾಹದಂಗವಾಗಿ ವನ್ಯಜೀವಿ ವಿಭಾಗದ ಕಚೇರಿ ಆವರಣದಲ್ಲಿ ಸೋಮವಾರ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಾಸ್ತವಿಕ ಮಾತುಗಳನ್ನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ., ಅಕ್ಟೋಬರ್‌ ಮೊದಲ ವಾರದಲ್ಲಿ ವನ್ಯಜೀವಿ ಸಪ್ತಾಹ ಆಚರಿಸಲಾಗುತ್ತಿದೆ. ಅರಣ್ಯ, ಪ್ರಾಣಿಗಳ ಕುರಿತು ವಿದ್ಯಾರ್ಥಿಗಳಲ್ಲಿ ಕಾಳಜಿ, ಪರಿಸರ ಸ್ನೇಹಿ ವಾತಾವರಣ ಬೆಳೆಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ರಸಪ್ರಶ್ನೆ, ಪ್ರಬಂಧ ಸ್ಪರ್ಧೆ ನಡೆಸಲಾಗುತ್ತಿದೆ ಎಂದರು.

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್‌ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮಾ ರಾವ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಕೆ ಅಕ್ಷಯ್‌ ಮಚ್ಚೀಂದ್ರ ಉಪಸ್ಥಿತರಿದ್ದರು. 

ಪೆರ್ವಾಜೆ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿ ಸುವಿಧ್‌ ಪ್ರಾರ್ಥಿಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್‌ ಅಜಿತ್‌ ಪಾಟೀಲ್‌ ಸ್ವಾಗತಿಸಿ, ವಲಯ ಅರಣ್ಯಾಧಿಕಾರಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್‌ ಪೂಜಾರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News