ಪಾಕಿಸ್ತಾನದ 5.7 ಮಿಲಿಯನ್ ಪ್ರವಾಹ ಸಂತ್ರಸ್ತರು ಆಹಾರ ಬಿಕ್ಕಟ್ಟಿನ ಅಪಾಯದಲ್ಲಿ : ವಿಶ್ವಸಂಸ್ಥೆ

Update: 2022-10-03 17:12 GMT

ವಿಶ್ವಸಂಸ್ಥೆ, ಅ.3: ಪಾಕಿಸ್ತಾನದ 5.7 ಮಿಲಿಯನ್ ಪ್ರವಾಹ ಸಂತ್ರಸ್ತರು ಮುಂದಿನ ಮೂರು ತಿಂಗಳಲ್ಲಿ ಗಂಭೀರ ಆಹಾರ ಬಿಕ್ಕಟ್ಟನ್ನು ಎದುರಿಸಲಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ವಿಭಾಗ(ಒಸಿಎಚ್ಎ) ಎಚ್ಚರಿಕೆ ನೀಡಿದೆ.

ಪಾಕಿಸ್ತಾನದಲ್ಲಿ ಕಳೆದ ತಿಂಗಳು ಸುರಿದ ಅಸಾಮಾನ್ಯ ಮುಂಗಾರು ಮಳೆಯಿಂದ ಉಂಟಾದ ವಿನಾಶಕಾರಿ ಪ್ರವಾಹದಿಂದ 33 ಮಿಲಿಯನ್ ಮಂದಿ ಸಂಕಷ್ಟಕ್ಕೆ ಸಿಲುಕಿದ್ದು 1,695 ಮಂದಿ ಮೃತಪಟ್ಟಿದ್ದಾರೆ. 2 ಮಿಲಿಯನ್ಗೂ ಅಧಿಕ ಮನೆಗಳು ಹಾನಿಗೊಳಗಾಗಿದ್ದು ಲಕ್ಷಾಂತರ ಮಂದಿ ಸ್ಥಳಾಂತರಗೊಂಡಿದ್ದಾರೆ. ಸ್ಥಳಾಂತರಗೊಂಡವರನ್ನು ತಾತ್ಕಾಲಿಕ ಶಿಬಿರದಲ್ಲಿ ನೆಲೆಗೊಳಿಸಲಾಗಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವರದಿ ಮಾಡಿದೆ.

ಈ ವಿನಾಶಕಾರಿ ಪ್ರವಾಹವು ಪಾಕಿಸ್ತಾನದಲ್ಲಿ ಆಹಾರದ ಅಭದ್ರತೆಯನ್ನು ಉಲ್ಬಣಗೊಳಿಸುವ ನಿರೀಕ್ಷೆಯಿದೆ ಮತ್ತು ಪ್ರವಾಹ ಸಂತ್ರಸ್ತ ಪ್ರದೇಶದ 5.7 ಮಿಲಿಯನ್ ಜನತೆ ಮುಂದಿನ 3 ತಿಂಗಳಲ್ಲಿ ಆಹಾರದ ಬಿಕ್ಕಟ್ಟನ್ನು ಎದುರಿಸಲಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ವಿಭಾಗದ ಇತ್ತೀಚಿನ ವರದಿಯಲ್ಲಿ ಎಚ್ಚರಿಸಲಾಗಿದೆ.
  
ಪ್ರವಾಹಕ್ಕೂ ಮುಂಚೆಯೇ 16% ಜನಸಂಖ್ಯೆಯು ಮಧ್ಯಮ ಅಥವಾ ತೀವ್ರ ಆಹಾರ ಅಭದ್ರತೆಯಲ್ಲಿ ವಾಸಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ ಗೋಧಿಯ ದಾಸ್ತಾನು ಮುಂದಿನ ಸುಗ್ಗಿಯವರೆಗೆ ಸಾಕಾಗುವಷ್ಟಿದೆ ಮತ್ತು ಸರಕಾರ ಇನ್ನಷ್ಟನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ಆಹಾರ ಪೂರೈಕೆಯ ಬಗ್ಗೆ ಸದ್ಯಕ್ಕೆ ಯಾವುದೇ ಆತಂಕವಿಲ್ಲ ಎಂದು ಪಾಕ್ ಸರಕಾರ ಹೇಳುತ್ತಿದೆ.
   
ಒಸಿಎಚ್ಎ ಹಾಗೂ ಇತರ ಏಜೆನ್ಸಿಗಳು, ಪಾಲುದಾರರು ಪ್ರವಾಹದ ಸಂಕಷ್ಟಕ್ಕೆ ಕ್ಷಿಪ್ರವಾಗಿ ಸ್ಪಂದಿಸಿ ಪ್ರವಾಹದಿಂದ ನೇರವಾಗಿ ಪೀಡಿತ 1.6 ಮಿಲಿಯನ್ ಜನತೆಗೆ ನೆರವನ್ನು ಒದಗಿಸಿವೆ ಎಂದು ವಿಶ್ವಸಂಸ್ಥೆ ಸೋಮವಾರ ಟ್ವೀಟ್ ಮಾಡಿದೆ. ಪ್ರವಾಹದಿಂದ ಅತ್ಯಧಿಕ ಹಾನಿಗೊಳಗಾದ ಸಿಂಧ್ ಮತ್ತು ನೈಋತ್ಯದ ಬಲೂಚಿಸ್ತಾನ ಪ್ರಾಂತದಲ್ಲಿ ನೀರಿನಿಂದ ಹರಡುವ ಮತ್ತು ಇತರ ರೋಗಗಳು ಉಲ್ಬಣಿಸಿವೆ ಎಂದು ಒಸಿಎಚ್ಎ ಹೇಳಿದೆ.
 
ಬಲೂಚಿಸ್ತಾನದ ಬಹುತೇಕ ಜಿಲ್ಲೆಗಳು ಕಳೆದ ವಾರದಿಂದ ಸಹಜ ಸ್ಥಿತಿಗೆ ಮರಳುತ್ತಿವೆ. ಸಿಂಧ್ ಪ್ರಾಂತದಲ್ಲಿ ಸಿಂಧೂ ನದಿಯ ನೀರಿನ ಮಟ್ಟವೂ ಸಾಮಾನ್ಯ ಸ್ಥಿತಿಗೆ ಮರಳಿದೆ. ಸಿಂಧ್ ಪ್ರಾಂತದ 22 ಜಿಲ್ಲೆಗಳಲ್ಲಿ 18ರಲ್ಲಿ ನೆರೆನೀರಿನ ಮಟ್ಟ 34%ದಷ್ಟು ಕಡಿಮೆಯಾಗಿದ್ದರೆ, ಕೆಲವು ಜಿಲ್ಲೆಗಳಲ್ಲಿ 78%ದಷ್ಟು ಕಡಿಮೆಯಾಗಿದೆ ಎಂದು ಒಸಿಎಚ್ಎ ವರದಿ ಹೇಳಿದೆ.
 
ಪ್ರವಾಹದಿಂದ ಬದುಕುಳಿದವರಿಗೆ ಜೀವರಕ್ಷಿಸುವ ಅಗತ್ಯಗಳನ್ನು ಪೂರೈಸಲು ಅಂತರಾಷ್ಟ್ರೀಯ ಸಮುದಾಯದಿಂದ ಹೆಚ್ಚುವರಿ 800 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ಎದುರು ನೋಡುತ್ತಿರುವುದಾಗಿ ವಿಶ್ವಸಂಸ್ಥೆ ಹೇಳಿದೆ. ಅಶಕ್ತ ಕುಟುಂಬಗಳಿಗೆ ಆಹಾರವನ್ನು ಒದಗಿಸಲಾಗಿದೆ, ಆದರೆ ಜನತೆಯ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಇದು ಸಾಕಾಗದು ಎಂದು ಕಳೆದ ವಾರ ವಿಶ್ವಸಂಸ್ಥೆ ಹೇಳಿದೆ. ಪ್ರವಾಹದಿಂದ 440 ಸೇತುವೆ, ಸಾವಿರಾರು ಕಿ.ಮೀ ರಸ್ತೆಗಳು ಸಂಪೂರ್ಣ ನಾಶವಾಗಿದ್ದು ರೈಲು, ರಸ್ತೆ ಸಂಪರ್ಕಕ್ಕೆ ತೀವ್ರ ಹಾನಿಯಾಗಿದೆ. ಸುಮಾರು 30 ಶತಕೋಟಿ ಡಾಲರ್ನಷ್ಟು ಆರ್ಥಿಕ ನಷ್ಟವಾಗಿದೆ ಎಂದು ಪಾಕ್ ಸರಕಾರ ಹೇಳಿದೆ.

ಆರೋಗ್ಯ ಸೇವೆಯ ಅಲಭ್ಯತೆ
  
ಪ್ರವಾಹದಿಂದ ಬದುಕುಳಿದವರು ಎದುರಿಸುತ್ತಿರುವ ಸಮಸ್ಯೆಯನ್ನು ಒಸಿಎಚ್ಎ ವರದಿ ಎತ್ತಿತೋರಿಸಿದೆ. ಅನೇಕರು ತಾತ್ಕಾಲಿಕ ಶಿಬಿರಗಳಲ್ಲಿ ಅನಾರೋಗ್ಯಕರ ಪರಿಸ್ಥಿತಿಗಳಲ್ಲಿ ಬದುಕುತ್ತಿದ್ದಾರೆ. ಮೂಲಭೂತ ಸೇವೆಗಳ ಸೀಮಿತ ಲಭ್ಯತೆಯೊಂದಿಗೆ, ಪ್ರಮುಖ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನ ಅಪಾಯವನ್ನು ಹೆಚ್ಚಿಸಿದೆ. ಸಾಧ್ಯವಾದಾಗ ತಾತ್ಕಾಲಿಕ ಶಿಬಿರಗಳಲ್ಲಿ ಗರ್ಭಿಣಿಯರಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ ಮತ್ತು ಸುಮಾರು 1,30,000 ಗರ್ಭಿಣಿಯರಿಗೆ ತುರ್ತು ಆರೋಗ್ಯ ಸೇವೆಯ ಅಗತ್ಯವಿದೆ. ಪ್ರವಾಹದ ಸಮಸ್ಯೆಗೂ ಮುನ್ನವೇ ಪಾಕಿಸ್ತಾನವು ಏಶ್ಯಾದಲ್ಲೇ ಅತೀ ಹೆಚ್ಚು ತಾಯಂದಿರ ಮರಣ ಪ್ರಮಾಣವನ್ನು ಹೊಂದಿತ್ತು, ಈಗ ಪ್ರವಾಹದ ಕಾರಣ ಈ ಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News