ಪಂಜಾಬ್: ಗಾಯಕ ಅಲ್ಫಾಝ್ ಮೇಲೆ ವಾಹನ ಹರಿದು ಗಾಯ

Update: 2022-10-03 18:19 GMT
Photo: twitter

ಮೊಹಾಲಿ(ಪಂಜಾಬ್), ಅ. 3: ಮೊಹಾಲಿಯ ಸ್ಥಳೀಯ ಡಾಬಾದ ಸಮೀಪ ಅಲ್ಫಾಝ್ ಎಂದು ಕೂಡ ಕರೆಯಲಾಗುವ ಪಂಜಾಬಿ ಗಾಯಕ ಅಮನ್‌ಜೋತ್ ಸಿಂಗ್ ಪನ್ವಾರ್ ಮೇಲೆ ಸೋಮವಾರ ವಾಹನ ಹರಿದ ಪರಿಣಾಮ ಅವರು ಗಾಯಗೊಂಡಿದ್ದಾರೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಫಾಝ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಜೊತೆಗಾರ ಹಾಗೂ ಇನ್ನೋರ್ವ ಪಂಜಾಬಿ ಗಾಯಕ ಹನಿ ಸಿಂಗ್ ರವಿವಾರ ರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 
ಅಲ್ಫಾಝ್ ತನ್ನ ಮೂವರು ಸ್ನೇಹಿತರೊಂದಿಗೆ ಉಪಹಾರ ಗೃಹದಲ್ಲಿ ಇದ್ದರು. ಈ ಸಂದರ್ಭ ಅದೇ ಉಪಹಾರ ಗೃಹದ ಮಾಜಿ ಉದ್ಯೋಗಿ ವಿಕ್ಕಿ ಎಂಬಾತ ಮಾಲಿಕನೊಂದಿಗೆ ವಾಗ್ವಾದದಲ್ಲಿ ತೊಡಗಿದ್ದ. ಅನಂತರ ವಿಕ್ಕಿ ಈ ವಿವಾದದಲ್ಲಿ ಸಂಧಾನ ನಡೆಸುವಂತೆ ಅಲ್ಫಾಝ್ ಅವರಲ್ಲಿ ವಿನಂತಿಸಿದ್ದ. 
ಆದರೆ, ಅಲ್ಫಾಝ್ ನಿರಾಕರಿಸಿದಾಗ ವಿಕ್ಕಿ ಮಾಲಕನ ಟೆಂಪೊವನ್ನು ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದ. ಈ ಸಂದರ್ಭ ಅಲ್ಫಾಝ್‌ಗೆ ವಾಹನ ಢಿಕ್ಕಿಯಾಗಿದೆ. ಇದರಿಂದ ಗಂಭೀರ ಗಾಯಗೊಂಡ ಅಲ್ಫಾಝ್‌ನನ್ನು ಗೆಳೆಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಬಳಿಕ ವಿಕ್ಕಿ ಪರಾರಿಯಾಗಿದ್ದ. ಆದರೆ, ಅನಂತರ ಆತನನ್ನು ಮೊಹಾಲಿ ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News