ತನ್ನ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ ವ್ಯಕ್ತಿ!

Update: 2022-10-04 02:47 GMT

ಅಹ್ಮದಾಬಾದ್: ಗುಜರಾತ್‍ನಲ್ಲಿ ಬಿಡಾಡಿ ದನಗಳು ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವಾಗಿದ್ದು, ಈ ಪಿಡುಗನ್ನು ಕೊನೆಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರಾಜ್ಯ ಹೈಕೋರ್ಟ್ ಕಳೆದ ತಿಂಗಳು ನಿರ್ದೇಶನ ನೀಡಿತ್ತು. ಆದರೆ ಖೇಡಾದ ವ್ಯಕ್ತಿಯೊಬ್ಬ ತನ್ನ ಬೈಕ್‍ನ ಹಿಂಬದಿ ಸವಾರನ ಸಾವಿಗೆ ತಾನೇ ಕಾರಣ ಎಂದು ಆಪಾದಿಸಿ ಪೊಲೀಸರಿಗೆ ದೂರು ನೀಡಿದ್ದಾನೆ. ಹಸುವೊಂದು ಇವರ ಬೈಕ್‍ಗೆ ಢಿಕ್ಕಿ ಹೊಡೆದದ್ದರಿಂದ ಅಪಘಾತ ಸಂಭವಿಸಿತ್ತು.

ರಾಹುಲ್ ವಂಜ್ಹಾರಾ (23) ಎಂಬ ವ್ಯಕ್ತಿ ಖೇಡಾ ನಗರ ಠಾಣೆಯಲ್ಲಿ ತನ್ನ ವಿರುದ್ಧವೇ ಪ್ರಕರಣ ದಾಖಲಿಸಿದ್ದಾನೆ. ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಹಷ್ಮುಖ್ ವಂಜ್ಹಾರಾ (37) ಈತನ ಸಹೋದರ ಸಂಬಂಧಿ. ಬೈಕ್‍ನಲ್ಲಿ ರಾಹುಲ್ ಹಾಗೂ ಹಷ್ಮುಖ್ ಖೇಡಾದ ಪಾರಾ ದರ್ವಾಜಾ ಬಳಿಯ ವರ್ಕ್‍ಶಾಪ್‍ಗೆ ಶನಿವಾರ ಸಂಜೆ ಹೋಗಿದ್ದರು. ಬಳಿಕ ರಾಹುಲ್ ಬೈಕ್‍ನಲ್ಲಿ ಇಬ್ಬರೂ ಚಹಾ ಸೇವನೆಗೆ ಪಕ್ಕದ ಮಾರುಕಟ್ಟೆಗೆ ತೆರಳಿದ್ದರು. "ನಾನು ಅತಿವೇಗದಿಂದ ಹಾಗೂ ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸುತ್ತಿದ್ದೆ. ಕಡಿದಾದ ತಿರುವಿನಲ್ಲಿ ಒಂದು ದನ ದಿಢೀರನೇ ನನ್ನತ್ತ ಓಡಿಬಂತು. ಹಸುವನ್ನು ಉಳಿಸುವ ಪ್ರಯತ್ನದಲ್ಲಿ ನನಗೆ ವಾಹನದ ನಿಯಂತ್ರಣ ಸಾಧಿಸಲು ಸಾಧ್ಯವಾಗಲಿಲ್ಲ" ಎಂದು ರಾಹುಲ್ ಹೇಳಿದ್ದಾಗಿ ಎಫ್‍ಐಆರ್ ನಲ್ಲಿ ದಾಖಲಾಗಿದೆ.

ಆತ ರಸ್ತೆಪಕ್ಕದ ಪೊದೆಯಲ್ಲಿ ಬಿದ್ದರೆ ಹಷ್ಮುಖ್ ರಸ್ತೆಗೆ ಬಿದ್ದು, ತಲೆಗೆ ತೀವ್ರ ಗಾಯಗಳಾಗಿತ್ತು. ತಕ್ಷಣವೇ ಆ್ಯಂಬುಲೆನ್ಸ್ ಸೇವೆಗೆ ಕರೆ ಮಾಡಿದರು. ಆದರೆ ಆ ವೇಳೆಗಾಗಲೇ ಹಷ್ಮುಖ್ ಮೃತಪಟ್ಟಿದ್ದ. ರಾಹುಲ್ ವಿರುದ್ಧ ರಭಸದ ಹಾಗೂ ನಿರ್ಲಕ್ಷ್ಯದ ಚಾಲನೆಗಾಗಿ ಪ್ರಕರಣ ದಾಖಲಿಸಲಾಗಿದೆ.

ನನ್ನ ನಿರ್ಲಕ್ಷ್ಯವೇ ಹಿಂಬದಿ ಸವಾರನ ಸಾವಿಗೆ ಕಾರಣ. ಆದ್ದರಿಂದ ನನ್ನ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದೆ. ಹಸುವನ್ನು ರಸ್ತೆಯಲ್ಲಿ ಓಡಾಡಲು ಬಿಟ್ಟದ್ದು ಮಾಲೀಕನ ತಪ್ಪು. ಅದರೆ ಅಪಘಾತಕ್ಕೆ ಹಸು ಮತ್ತು ಅದರ ಮಾಲೀಕನನ್ನು ಹೊಣೆ ಮಾಡಲು ಹೇಗೆ ಸಾಧ್ಯ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News