ಪರೇಶ್ ಮೇಸ್ತ ಪ್ರಕರಣ | ಬಿಜೆಪಿಗರು ರಾಜ್ಯದ ಜನತೆಯ ಕ್ಷಮೆ ಯಾಚಿಸಲಿ: ಯು.ಟಿ.ಖಾದರ್

Update: 2022-10-04 07:16 GMT

ಮಂಗಳೂರು, ಅ.4: ಪರೇಶ್ ಮೇಸ್ತ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಗರು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ರಾಜ್ಯ ವಿಧಾನ ಸಭೆಯ ವಿಪಕ್ಷ ಉಪನಾಯಕ ಯು.ಟಿ‌.ಖಾದರ್ ಒತ್ತಾಯಿಸಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಬಿಜೆಪಿ ಸಾವಿನ ಮನೆಯಲ್ಲಿ ರಾಜಕೀಯ ಮಾಡುತ್ತಿರುವುದಕ್ಕೆ ಪರೇಶ್ ಮೇಸ್ತ ಸಾವಿನ ಪ್ರಕರಣವೇ ಸಾಕ್ಷಿಯಾಗಿದೆ. ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು ಬಿಜೆಪಿ ರಾಜಕೀಯ ಮಾಡುತ್ತಲೇ ಬಂದಿದೆ‌. ಅಂದು ರಾಜಕೀಯ ಲಾಭಕ್ಕಾಗಿ ಮಾತನಾಡಿದ್ದ ಸಂಸದ ಅನಂತಕುಮಾರ್ ಹೆಗಡೆ, ಸಚಿವೆ ಶೋಭಾ ಕರಂದ್ಲಾಜೆ ಆ ಬಳಿಕ ಸುಮ್ಮನಾಗಿದ್ದರು. ಇದೀಗ ಪರೇಶ್ ಮೇಸ್ತ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ "ಬಿ" ರಿಪೋರ್ಟ್ ಸಲ್ಲಿಸಿದ್ದು, ಬಿಜೆಪಿ ಮುಖಂಡರು ಮೌನ ವಹಿಸುವ ಬದಲು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಯು.ಟಿ.ಖಾದರ್ ಆಗ್ರಹಿಸಿದರು.

ಇನ್ನು ಐದಾರು ತಿಂಗಳಲ್ಲಿ ಚುನಾವಣೆ ಎದುರಾಗಲಿದೆ. ಬಿಜೆಪಿ ಸಾವಿನ ಮನೆಯಲ್ಲಿ ರಾಜಕೀಯ ಮಾಡುವ ಸಾಧ್ಯತೆ ಇದೆ. ಹಾಗಾಗಿ ರಾಜ್ಯದ ಜನತೆ ಬಿಜೆಪಿಯ ರಾಜಕೀಯವನ್ನು ಅರ್ಥಮಾಡಿಕೊಳ್ಳಬೇಕು ಎಂದು ಯು.ಟಿ.ಖಾದರ್ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News