ಮಂಗಳೂರು: ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ

Update: 2022-10-04 10:11 GMT

ಮಂಗಳೂರು, ಅ.4: ನಗರದ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ವತಿಯಿಂದ ರವಿವಾರ ನಡೆದ ಗಾಂಧಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ವರ್ಷದ ವ್ಯಕ್ತಿ 2022 ಪ್ರಶಸ್ತಿಯನ್ನು ‘ನಮ್ಮ ಭೂಮಿ’ ರಾಯಭಾರಿಯಾಗಿರುವ ರಾಮಾಂಜಿ ಅವರಿಗೆ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಮಾತನಾಡಿ ರಾಜ್ಯಗಳಲ್ಲಿ ಸುತ್ತಾಡಿ ಜನ ಸಾಮಾನ್ಯರ ನೋವುಗಳನ್ನು ಅರ್ಥ ಮಾಡಿಕೊಂಡು ಕೈಲಾದ ಸಹಾಯವನ್ನು ಮಾಡುತ್ತಾ ಬಂದಿರುವ ರಾಮಾಂಜಿ ಅವರು ನಾಡಿನ ಜನಮಾನಸದಲ್ಲಿ ಸ್ಥಾಯಿಯಾಗಿ ಉಳಿದವರು. ಅಂಡಮಾನ್ ನಿಕೋಬಾರ್ ಮುಂತಾದ ದ್ವೀಪಗಳಲ್ಲಿ ಸಂಚರಿಸಿ ದಮನಿತರ ನೋವನ್ನು ಅರ್ಥ ಮಾಡಿಕೊಂಡವರು. ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ದ್ವಿತೀಯ ವರ್ಷದ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಇವರು ಸಮಾಜ ಸೇವೆಯಲ್ಲೂ ತೊಡಗಿಕೊಂಡವರು. ಇವರನ್ನು ವರ್ಷದ ವ್ಯಕ್ತಿಯನ್ನಾಗಿ ಆಯ್ಕೆ ಮಾಡಿರುವುದು ಪ್ರತಿಷ್ಠಾನಕ್ಕೂ ಹೆಮ್ಮೆಯ ವಿಚಾರವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಖ್ಯಾತ ವೈದ್ಯ, ಚಿಂತಕ ಡಾ.ಬಿ.ವಿ. ಕಕ್ಕಿಲ್ಲಾಯ ಬಹುತ್ವ ಪ್ರಧಾನವಾದ ಭಾರತೀಯ ಪರಂಪರೆಯೆಂದರೆ ಅದನ್ನು ಗಾಂಧಿ ಪರಂಪರೆಯೆಂದು ಕರೆಯಬಹುದು. ಸ್ವಾತಂತ್ರ್ಯ ಸಮರದ ಸಮಯದಲ್ಲಿ ಗಾಂಧೀಜಿ ಮಂಗಳೂರಿಗೆ 3 ಬಾರಿ ಬಂದಿದ್ದರು. ಅವರಿಂದ ಪ್ರೇರಿತರಾದ ಕಾರ್ನಾಡ್ ಸದಾಶಿವರಾವ್, ಕುದ್ಮಲ್ ರಂಗರಾಯರು ಈ ಮಣ್ಣಿನಲ್ಲಿ ಅಹಿಂಸಾ ಬೀಜವನ್ನು ಬಿತ್ತಿ ಬೆಳೆದರು. ಸರ್ವಜನಾಂಗಗಳ ಸಮನ್ವಯದಿಂದ ಮಂಗಳೂರಿನಲ್ಲಿ ಸ್ವಾತಂತ್ರ್ಯದ ಕಹಳೆಯನ್ನು ಊದಿದರು. ಆಗ ಗುಲಾಮಗಿರಿಯಿಂದ ಮುಕ್ತರಾಗುವ ಏಕ ಮಾತ್ರ ಉದ್ದೇಶದಿಂದ ಮಂಗಳೂರಿನಲ್ಲಿ ಸಂಘಟಿತರಾದುದು ಇತಿಹಾಸ. ಮಂಗಳೂರಿನ ಬಾವುಟಗುಡ್ಡ ಪ್ರದೇಶದಲ್ಲಿ ಕಾರ್ನಾಡ್ ಸ್ಮಾರಕ ಭವನ, ಮಹಿಳಾ ಸಮಾಜ, ಠಾಗೂರ್ ಪಾರ್ಕ್ ಮುಂತಾದ ಜನ ಸ್ನೇಹಿ ಸ್ಮಾರಕಗಳು ಸ್ವಾತಂತ್ರ್ಯ ಚಳುವಳಿಯ ಉದ್ದೇಶಕ್ಕಾಗಿಯೇ ನಿರ್ಮಾಣವಾಗಿರಬಹುದು ಎಂದು ಅಭಿಪ್ರಾಯಪಟ್ಟರು.

ಪ್ರತಿಷ್ಠಾನದ ಉಪಾಧ್ಯಕ್ಷರಾದ ಪ್ರಭಾಕರ ಶ್ರೀಯಾನ್, ಹಾಜಿ ಇಬ್ರಾಹಿಂ ಕೋಡಿಜಾಲ್, ಮಕ್ಕಳ ಪರ ಹೋರಾಟಗಾರ ಎಂ.ಎಂ. ಗಣಪತಿ ಮಾತನಾಡಿದರು.

ಶಿಕ್ಷಕಿ ವಸಂತಿ ಎಸ್. ರಾವ್ ಉಪಸ್ಥಿತರಿದ್ದರು. ಉಪನ್ಯಾಸಕಿ ಶಮಾ ಅಭಿನಂದನಾ ಪತ್ರವನ್ನು ವಾಚಿಸಿದರು.ಡಾ.ಇಸ್ಮಾಯಿಲ್ ಸ್ವಾಗತಿಸಿದರು. ಪ್ರೇಮ್ ಚಂದ್ ವಂದಿಸಿದರು. ಕಲ್ಲೂರು ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News