ಪಾಕ್ ಜೊತೆ ಮಾತುಕತೆ ತಳ್ಳಿ ಹಾಕಿದ ಅಮಿತ್ ಶಾ: ಜಮ್ಮು-ಕಾಶ್ಮೀರದಲ್ಲಿ ಶೀಘ್ರ ಚುನಾವಣೆಯ ಸುಳಿವು

Update: 2022-10-05 16:19 GMT

ಶ್ರೀನಗರ,ಅ.5: ಪಾಕಿಸ್ತಾನದ ಜೊತೆ ಮಾತುಕತೆಗಳ ಸಾಧ್ಯತೆಯನ್ನು ಬುಧವಾರ ತಳ್ಳಿ ಹಾಕಿದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು,ಜಮ್ಮು-ಕಾಶ್ಮೀರದಲ್ಲಿ ಶೀಘ್ರ ಚುನಾವಣೆಯನ್ನು ನಡೆಸುವ ಸುಳಿವನ್ನು ನೀಡಿದರು.

ಕಾಶ್ಮೀರದ ಬಾರಾಮುಲ್ಲಾದಲ್ಲಿ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,ಮತದಾರರ ಪಟ್ಟಿಗಳ ಪರಿಷ್ಕರಣೆ ಪೂರ್ಣಗೊಂಡ ಬಳಿಕ ಜಮ್ಮು-ಕಾಶ್ಮೀರದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನಡೆಸುವ ಭರವಸೆ ನೀಡಿದರು.

 ಆಗಸ್ಟ್ ‌ನಲ್ಲಿ ಆರಂಭಗೊಂಡಿದ್ದ ಮತದಾರರ ಪಟ್ಟಿಗಳ ಪರಿಷ್ಕರಣೆ ನವಂಬರ್ 25ರಂದು ಪೂರ್ಣಗೊಳ್ಳಲಿದೆ. 2014ರ ಬಳಿಕ ಮೊದಲ ಚುನಾವಣೆಯು ಮುಂದಿನ ವರ್ಷದ ಚಳಿಗಾಲದ ಬಳಿಕ ನಡೆಯಲಿದೆ ಎಂಬ ಊಹಾಪೋಹಗಳಿದ್ದವು.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಬಳಿಕ ಇದು ಕಾಶ್ಮೀರ ಕಣಿವೆಗೆ ಶಾ ಅವರ ಮೊದಲ ಭೇಟಿಯಾಗಿದೆ.

ಸಾವಿರಾರು ಜನರನ್ನು ಬಸ್‌ಗಳಲ್ಲಿ ಬಾರಾಮುಲ್ಲಾಕ್ಕೆ ಕರೆತರಲಾಗಿದ್ದು,ಶಾ ಅವರು ತನ್ನ ರ್ಯಾಲಿಯಲ್ಲಿ ಯಾರೂ ಭಾಗವಹಿಸುವುದಿಲ್ಲ ಎಂದು ತನಗೆ ತಿಳಿಸಲಾಗಿತ್ತು ಎಂದರು.

ಭಾಷಣದ ನಡುವೆ ಸಮೀಪದ ಮಸೀದಿಯಿಂದ ಅಝಾನ್ ಮೊಳಗಿದಾಗ ಗೌರವದ ಸಂಕೇತವಾಗಿ ಶಾ ತನ್ನ ಭಾಷಣವನ್ನು ಕೆಲಕಾಲ ನಿಲ್ಲಿಸಿದರು.

‘ನಾವು ಪಾಕಿಸ್ತಾನದ ಜೊತೆ ಮಾತುಕತೆ ನಡೆಸಬೇಕು ಎಂದು ಕೆಲವರು ಹೇಳುತ್ತಾರೆ. ನಾವೇಕೆ ಅದರ ಜೊತೆ ಮಾತುಕತೆ ನಡೆಸಬೇಕು? ನಾವು ಮಾತುಕತೆ ನಡೆಸುವುದಿಲ್ಲ,ಬದಲಿಗೆ ಕಾಶ್ಮೀರದ ಗುರ್ಜರ್‌ಗಳು, ಪಹಾಡಿಗಳು ಮತ್ತು ಯುವಜನರೊಂದಿಗೆ ನಾವು ಮಾತುಕತೆ ನಡೆಸುತ್ತೇವೆ ’ಎಂದು ಹೇಳಿದ ಅವರು,ಕಾಶ್ಮೀರ ಕಣಿವೆಯಲ್ಲಿನ ಪ್ರಮುಖ ರಾಜಕೀಯ ಪಕ್ಷಗಳ ಒಕ್ಕೂಟವಾಗಿರುವ ಗುಪ್ಕರ್ ಮೈತ್ರಿಕೂಟದ ವಿರುದ್ಧ ಪದೇ ಪದೇ ದಾಳಿಗಳನ್ನು ನಡೆಸಿದರು.

 ಜಮ್ಮು-ಕಾಶ್ಮೀರ ಅಭಿವೃದ್ಧಿಯಾಗದಿರುವುದಕ್ಕೆ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನಾಯಕ ಫಾರೂಕ್ ಅಬ್ದುಲ್ಲಾ,ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಮತ್ತು ನೆಹರು-ಗಾಂಧಿಗಳನ್ನು ದೂರಿದ ಶಾ,ಅವರ ಆಡಳಿತದಲ್ಲಿ ಭಯೋತ್ಪಾದನೆ ಹುಲುಸಾಗಿ ಬೆಳೆದಿತ್ತು, 40 ಸಿಆರ್‌ಪಿಎಫ್ ಯೋಧರು ಮೃತಪಟ್ಟಿದ್ದ ಫೆಬ್ರವರಿ 2019ರ ಪುಲ್ವಾಮಾ ದಾಳಿಗೆ ಅವರೇ ಕಾರಣರಾಗಿದ್ದರು ಎಂದು ಆರೋಪಿಸಿದರು.

ಶಾಗೆ ತಿರುಗೇಟು ನೀಡಿರುವ ಎನ್‌ಸಿ ನಾಯಕ ಉಮರ್ ಅಬ್ದುಲ್ಲಾ ಅವರು,ಪುಲ್ವಾಮಾ ದಾಳಿ ನಡೆದಾಗ ಜಮ್ಮು-ಕಾಶ್ಮೀರವು ಕೇಂದ್ರದ ನೇರ ಆಡಳಿತದಡಿ ಇತ್ತು ಎಂದು ನೆನಪಿಸಿದ್ದಾರೆ.

ನರೇಂದ್ರ ಮೋದಿ ಸರಕಾರವು ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಮತ್ತು ಅದನ್ನು ನಿರ್ಮೂಲಿಸಲು ಬಯಸಿದೆ ಎಂದು ತನ್ನ ಭಾಷಣದಲ್ಲಿ ಹೇಳಿದ ಶಾ,‘ಜಮ್ಮು-ಕಾಶ್ಮೀರವನ್ನು ದೇಶದ ಅತ್ಯಂತ ಶಾಂತಿಯುತ ಸ್ಥಳವನ್ನಾಗಿಸಲು ನಾವು ಬಯಸಿದ್ದೇವೆ ’ ಎಂದರು.

ಸಂಚಾರ ಸೂಚನೆಗಳನ್ನು ಹೊರಡಿಸಿದ್ದ ಪೊಲೀಸರು,ರ್ಯಾಲಿಯಲ್ಲಿ ಪಾಲ್ಗೊಳ್ಳಲು ಜನರನ್ನು ಸಾಗಿಸುತ್ತಿದ್ದ ವಾಹನಗಳಿಗೆ ಮಾತ್ರ ಬಾರಾಮುಲ್ಲಾ ಪ್ರವೇಶಿಸಲು ಅವಕಾಶ ನೀಡಿದ್ದರು.

ಇತ್ತ ಗೃಹಸಚಿವರು ರ್ಯಾಲಿಯಲ್ಲಿ ಮಾತನಾಡುತ್ತಿದ್ದರೆ ಅತ್ತ ಪುಲ್ವಾಮಾದಲ್ಲಿ ಪೊಲೀಸ್ ಗೋಲಿಬಾರಿನಲ್ಲಿ ಓರ್ವ ನಾಗರಿಕ ಮೃತಪಟ್ಟಿದ್ದಾನೆ. ಅದು ಪೊಲೀಸನೋರ್ವನಿಂದ ಆಕಸ್ಮಿಕ ಗುಂಡು ಹಾರಾಟದ ಘಟನೆ ಎಂದು ಪೊಲೀಸರು ಸಮಜಾಯಿಷಿ ನೀಡಿದ್ದಾರೆ.

ಶೋಪಿಯಾನ್‌ನಲ್ಲಿ ಬೆನ್ನುಬೆನ್ನಿಗೆ ನಡೆದ ಎನ್‌ಕೌಂಟರ್‌ಗಳಲ್ಲಿ ನಾಲ್ವರು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದು,ಎಲ್ಲರೂ ಸ್ಥಳೀಯರಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News