ಗುಜರಾತ್: ಆರ್ಟಿಐ ಕಾರ್ಯಕರ್ತನ ಗಾಯಗೊಳಿಸಿ, ಪುತ್ರನ ಹತ್ಯೆಗೈದ ಅಕ್ರಮ ಮರಳು ಗಣಿಗಾರಿಕೆ ಆರೋಪಿ

Update: 2022-10-06 08:19 GMT
Photo:PTI

ಭುಜ್( ಗುಜರಾತ್): ಅಕ್ರಮ ಮರಳು ಗಣಿಗಾರಿಕೆ ಆರೋಪಿಯೊಬ್ಬ  ತನ್ನ ಕಾರನ್ನು ಸ್ಕೂಟರ್  ಡಿಕ್ಕಿ ಹೊಡೆಸಿ  ಮಾಹಿತಿ ಹಕ್ಕು ಕಾರ್ಯಕರ್ತನನ್ನು ಗಂಭೀರ ಗಾಯ ಗೊಳಿಸಿದ್ದಲ್ಲದೆ, ಆತನ  24 ವರ್ಷದ ಮಗನನ್ನು ಸಾಯಿಸಿರುವ ಘಟನೆ ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ನಡೆದಿದೆ.

ಅಕ್ಟೋಬರ್ 3 ರಂದು ನಡೆದ ಘಟನೆಯ ನಂತರ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಲಖ್‌ಪತ್ ತೆಹಸಿಲ್‌ನ ಮೇಘಪರ್ ಗ್ರಾಮದ ಆರ್‌ಟಿಐ ಕಾರ್ಯಕರ್ತ ರಮೇಶ್ ಬಾಲಿಯಾ ಅವರು ನವಲ್‌ಸಿನ್ಹ ಜಡೇಜ ವಿರುದ್ಧ ಅಕ್ರಮ ಮರಳು ಗಣಿಗಾರಿಕೆ ಕುರಿತು ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅ. 3 ರಂದು ಬಾಲಿಯಾ ಹಾಗೂ  ಅವರ ಮಗ ನರೇಂದ್ರ ಸಂಜೆ 6:30 ರ ಸುಮಾರಿಗೆ ದಯಾಪರ್ ಗ್ರಾಮಕ್ಕೆ ಭೇಟಿ ನೀಡಿ ಮನೆಗೆ ಹಿಂದಿರುಗುತ್ತಿದ್ದಾಗ, ನವಲ್‌ಸಿನ್ಹ ಜಡೇಜ ತನ್ನ ಕಾರನ್ನು ಹಿಂದಿನಿಂದ ಡಿಕ್ಕಿ ಹೊಡೆಸಿದ್ದಾನೆ.

ನರೇಂದ್ರ ಬಾಲಿಯಾ ಸ್ಥಳದಲ್ಲೇ ಮೃತಪಟ್ಟರೆ, ಆತನ ತಂದೆ ಸ್ಥಳೀಯ ದಲಿತ ಮುಖಂಡ ರಮೇಶ್ ಬಾಲಿಯಾ ನನ್ನು ಚಿಕಿತ್ಸೆಗಾಗಿ ಭುಜ್‌ನ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ನಾರಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಸ್‌ಎ ಮಹೇಶ್ವರಿ ತಿಳಿಸಿದ್ದಾರೆ.

ನವಲ್‌ಸಿಂಗ್ ಜಡೇಜ ವಿರುದ್ಧ ಕೊಲೆ ಆರೋಪದಡಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಘಟನೆ ನಡೆದ ಒಂದು ದಿನದ ನಂತರ ಸ್ಥಳೀಯ ಅಪರಾಧ ವಿಭಾಗದ ತಂಡ ನವಲ್‌ಸಿನ್ಹ ಜಡೇಜ ಅವರನ್ನು ಬಂಧಿಸಿದೆ. ನ್ಯಾಯಾಲಯವು ಜಡೇಜನನ್ನು ಬುಧವಾರ ಒಂದು ದಿನದ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಅಕ್ರಮ ಮರಳು ಗಣಿಗಾರಿಕೆಗಾಗಿ ಸ್ಥಳೀಯ ಗಣಿ ಹಾಗೂ  ಖನಿಜ ಇಲಾಖೆಗೆ ದೂರು ಸಲ್ಲಿಸಿದ್ದಕ್ಕಾಗಿ ನವಲ್ ಸಿನ್ಹ ಜಡೇಜ, ಬಾಲಿಯಾ ವಿರುದ್ಧ ದ್ವೇಷ ಸಾಧಿಸಿದ್ದ ಎಂದು ಇನ್ಸ್‌ಪೆಕ್ಟರ್ ಮಹೇಶ್ವರಿ ಹೇಳಿದ್ದಾರೆ.

ನವಲ್‌ಸಿನ್ಹ ಜಡೇಜ  ಮೇಲೆ ಭೂಕಬಳಿಕೆ ಆರೋಪವೂ ಇದೆ.  ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News