2020 ರಲ್ಲಿ ಬಡತನಕ್ಕೆ ಜಾರಿದ 5.6 ಕೋಟಿ ಭಾರತೀಯರು: ವಿಶ್ವ ಬ್ಯಾಂಕ್‌ ವರದಿ

Update: 2022-10-06 13:27 GMT

ಹೊಸದಿಲ್ಲಿ: ಕೋವಿಡ್‌ ಸಾಂಕ್ರಾಮಿಕ ಮೊದಲು ಕಾಣಿಸಿಕೊಂಡ ವರ್ಷವಾದ 2020 ರಲ್ಲಿ ಒಟ್ಟು 5.6  ಕೋಟಿ ಭಾರತೀಯರು ಬಡತನಕ್ಕೆ (poverty) ಜಾರಿದ್ದಾರೆ ಎಂದು ಬುಧವಾರ ಬಿಡುಗಡೆಗೊಂಡ ವಿಶ್ವ ಬ್ಯಾಂಕ್‌ (World Bank) ವರದಿ ಹೇಳಿದೆ. ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಇಕಾನಮಿ(Centre for Monitoring Indian Economy) ನಡೆಸಿದ ಸಮೀಕ್ಷೆಯ ಅಂಕಿಅಂಶ ಆಧರಿಸಿ ಈ ವರದಿ ತಯಾರಿಸಲಾಗಿದೆ ಎಂದು scroll.in ವರದಿ ಮಾಡಿದೆ.

ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಇಕಾನಮಿ ಇದರ ಕನ್ಸೂಮರ್‌ ಪಿರಮಿಡ್ಸ್‌ ಹೌಸ್‌ಹೋಲ್ಡ್ಸ್‌ ಸರ್ವೇ ವರದಿಯನ್ನು ಇನ್ನಷ್ಟೇ ಅಂತಿಮಗೊಳಿಸಬೇಕಾಗಿದ್ದರೂ ಅದರ ಅಂಕಿಅಂಶಗಳನ್ನು ವಿಶ್ವ ಬ್ಯಾಂಕ್‌ ತನ್ನ 'ಪವರ್ಟಿ ಎಂಡ್‌ ಶೇರ್ಡ್‌ ಪ್ರಾಸ್ಪರಿಟಿ 2020' ಎಂಬ ಜಾಗತಿಕ ಬಡತನ ಅಂದಾಜುಗಳನ್ನು ಹೊಂದಿದ ವರದಿಯಲ್ಲಿ ಬಳಸಿದೆ.

ಭಾರತವು 2011 ರಿಂದ ಬಡತನ ಕುರಿತ ಅಧಿಕೃತ ಅಂಕಿಅಂಶಗಳನ್ನು ಬಿಡುಗಡೆಗೊಳಿಸದೇ ಇರುವುದರಿಂದ ಅಗತ್ಯವಿದ್ದೆಡೆ ಸಿಎಂಐಇ ಸಮೀಕ್ಷೆಯ ದತ್ತಾಂಶಗಳನ್ನು ಬಳಸಿಕೊಳ್ಳಲಾಗಿದೆ ಎಂದು ವಿಶ್ವ ಬ್ಯಾಂಕ್‌ ಹೇಳಿದೆ.

ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಯಲ್ಲಿ ಪ್ರಸ್ತುಪಡಿಸಿದ ಮಾಹಿತಿಯಲ್ಲಿ ಭಾರತದಲ್ಲಿ 2020 ರಲ್ಲಿ 2.3 ಕೋಟಿ ಜನರು ಬಡತನಕ್ಕೆ ಜಾರಿದ್ದಾರೆ ಎಂದು ಹೇಳಿದ್ದರೂ ತನ್ನ ಅಂದಾಜು ಅದಕ್ಕಿಂತ ಹೆಚ್ಚಾಗಿದೆ ಎಂದು ವಿಶ್ವ ಬ್ಯಾಂಕ್‌ ಹೇಳಿದೆ.

ಐಎಂಎಫ್‌ ವರದಿಯನ್ನು ಅರ್ಥಶಾಸ್ತ್ರಜ್ಞರಾದ ಸುರ್ಜಿತ್‌ ಭಲ್ಲಾ, ಕರಣ್‌ ಭಾಸಿನ್ ಮತ್ತು ಅರವಿಂದ್‌ ವಿರ್ಮಾನಿ ಸಿದ್ಧಪಡಿಸಿದ್ದರು.

ಜಾಗತಿಕವಾಗಿ ಬಡತನ ಪ್ರಮಾಣ 2019 ರಲ್ಲಿ ಇದ್ದ ಶೇ 8.4 ರಿಂದ 2020 ರಲ್ಲಿ ಶೇ 9.3 ಗೆ ಏರಿಕೆಯಾಗಿದೆ ಎಂದು ವಿಶ್ವ ಬ್ಯಾಂಕ್‌ ತನ್ನ ವರದಿಯಲ್ಲಿ ಹೇಳಿದೆ.

ಭಾರತದಲ್ಲಿ ಗ್ರಾಮೀಣ ಭಾಗಗಳಲ್ಲಿ 2011 ರಿಂದೀಚೆಗೆ ಬಡತನ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

2019-20 ರಲ್ಲಿ ಭಾರತದ ಶೇ. 12 ರಷ್ಟು ಗ್ರಾಮೀಣ ಭಾಗದ ಜನತೆ ಹಾಗೂ ನಗರ ಭಾಗಗಳ ಶೇ. 6 ರಷ್ಟು ಮಂದಿ ಬಡತನದಲ್ಲಿದ್ದರೆಂದು ವಿಶ್ವ ಬ್ಯಾಂಕ್‌ ವರದಿ ತಿಳಿಸಿದೆ.

ಕೋವಿಡ್‌ ಸಾಂಕ್ರಾಮಿಕದಿಂದ ಕಷ್ಟದಲ್ಲಿದ್ದ ಪ್ರತಿಯೊಬ್ಬರನ್ನೂ ತಲುಪಲು ಸರ್ಕಾರಕ್ಕೆ ಕಷ್ಟವಾಗಿದ್ದರಿಂದ ಬಡತನದ ಸಮಸ್ಯೆ ಇನ್ನಷ್ಟು ಹೆಚ್ಚಾಯಿತು, ಆದರೂ ಸರ್ಕಾರವು ಗ್ರಾಮೀಣ ಭಾಗಗಳ ಶೇ. 85 ರಷ್ಟು ಹಾಗೂ ನಗರ ಭಾಗಗಳ ಶೇ. 69 ರಷ್ಟು ಮಂದಿಗೆ ತನ್ನ ಸಾಂಕ್ರಾಮಿಕ ಸಂದರ್ಭದ ವಿವಿಧ ಯೋಜನೆಗಳಿಂದ ಸಹಾಯ ಮಾಡಿತ್ತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News