ಈಗ ‘ಗರ್ಬಾ ಜಿಹಾದ್’ನ ಬೆನ್ನು ಬಿದ್ದಿರುವ ಸುದ್ದಿವಾಹಿನಿಗಳು

Update: 2022-10-06 14:59 GMT

ಭಾರತೀಯ ಸುದ್ದಿವಾಹಿನಿಗಳ ಹಿಂದು ರಾಷ್ಟ್ರ ಕಾರ್ಯಕ್ರಮಗಳಲ್ಲಿ ಮುಸ್ಲಿಂ ಮತ್ತೆ ಕುತಂತ್ರಿ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾನೆ. ಆದರೆ ಚಿತ್ರಕಥೆಯು ‘ಗುಂಪಿನಿಂದ ಥಳಿಸಿ ಹತ್ಯೆ’ಗಳಿಂದ ಬಹುದೂರ ಸಾಗಿದೆ ಮತ್ತು ‘ಗರ್ಬಾ ಜಿಹಾದ್’ನ ಸುತ್ತ ಗಿರಕಿ ಹೊಡೆಯುವ ಮೂಲಕ ಪುನರಾವರ್ತಿತವಾಗಿ ಧ್ವನಿಸುವ ಅಪಾಯದಲ್ಲಿದೆ. ಮತ್ತದೇ ನಿರೂಪಕರು ಹಿಂದುತ್ವ ಹೋರಾಟಕ್ಕೆ ಆದ್ಯತೆ ನೀಡುವ ಚೌಕಟ್ಟುಗಳ ಮೂಲಕ ಹಿಂದುತ್ವ ಹಿಂಸಾಚಾರಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ, ವ್ಯಕ್ತಿಗತ ಬಲಿಪಶುಗಳು ಮತ್ತು ಶಂಕಿತರ ವಿರುದ್ಧದ ಆರೋಪಗಳ ಆಧಾರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ದುರುದ್ದೇಶಗಳನ್ನು ಹೊರಿಸುತ್ತಿದ್ದಾರೆ.

ಮಧ್ಯಪ್ರದೇಶದ ಇಂದೋರ್, ಗುಜರಾತಿನ ಅಹ್ಮದಾಬಾದ್ ಮತ್ತು ಮಹಾರಾಷ್ಟ್ರದ ಅಕೋಲಾಗಳಲ್ಲಿ ನವರಾತ್ರಿ ಉತ್ಸವಗಳ ಸಂದರ್ಭ ಮುಸ್ಲಿಂ ಪುರುಷರ ಮೇಲೆ ಹಿಂದುತ್ವ ರಕ್ಷಕರಿಂದ ಸರಣಿ ದಾಳಿಗಳು ಈ ಹೊಸ ಕಟು ಅಭಿಯಾನವನ್ನು ಸಕ್ರಿಯಗೊಳಿಸಿವೆ. ಗರ್ಬಾ ನಡೆಯುತ್ತಿರುವ ಸ್ಥಳಗಳನ್ನು ಪ್ರವೇಶಿಸಿ ‘ಲವ್ ಜಿಹಾದ್’ ನಡೆಸಲು ಹಿಂದು ಮಹಿಳೆಯರಿಗೆ ಗಾಳ ಹಾಕುತ್ತಿದ್ದ ಆರೋಪದಲ್ಲಿ ಬಜರಂಗ ದಳ ಅಥವಾ ವಿಹಿಂಪಗೆ ಸೇರಿದ ಹಿಂದುತ್ವ ರಕ್ಷಕರು ಈ ಮುಸ್ಲಿಂ ಪುರುಷರನ್ನು ಥಳಿಸಿದ್ದಾರೆ,ಅವರ ವಿರುದ್ಧ ಐಪಿಸಿಯ ವಿವಿಧ ಕಲಮ್ಗಳಡಿ ಪ್ರಕರಣಗಳು ದಾಖಲಾಗಿವೆ.

ಗ‌ರ್ಬಾ ತಾಣಗಳು ಹಿಂದಿನಿಂದಲೂ ವಿವಾದಗಳನ್ನು ಸೃಷ್ಟಿಸಲು ಹಿಂದುತ್ವ ಗುಂಪುಗಳಿಗೆ ವೇದಿಕೆಯಾಗಿದ್ದರೂ, ಇತ್ತೀಚಿನ ಹಿಂಸಾಚಾರಗಳು ಮಧ್ಯಪ್ರದೇಶದ ಸಾಂಸ್ಕೃತಿಕ ಸಚಿವೆ ಉಷಾ ಠಾಕೂರ್ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ನಡೆದಿವೆ. ಗರ್ಬಾ ಪೆಂಡಾಲ್ ‘ಲವ್ ಜಿಹಾದ್’ಗೆ ಮಾಧ್ಯಮವಾಗಿದೆ ಎಂದು ಘೋಷಿಸಿದ ಠಾಕೂರ್, ಸಂದರ್ಶಕರ ಗುರುತನ್ನು ಪರಿಶೀಲಿಸುವಂತೆ ರಾಜ್ಯದ ಬಿಜೆಪಿ ಸರಕಾರವು ಗರ್ಬಾ ಸಂಘಟಕರಿಗೆ ತಿಳಿಸಿದೆ ಎಂದು ಹೇಳಿದ್ದರು. ಅವರ ಪಕ್ಷದ ಸಹೋದ್ಯೋಗಿಗಳೂ ಇಂತಹುದೇ ಹೇಳಿಕೆಗಳನ್ನು ನೀಡಿದ್ದಾರೆ.

ಹಿಂದುತ್ವ ರಕ್ಷಕರ ವಿರುದ್ಧ ಈವರೆಗೆ ಕೇವಲ ಒಂದು ಪ್ರಕರಣ, ಅಹ್ಮದಾಬಾದ್ನಲ್ಲಿ ದಾಖಲಾಗಿದೆ ಎನ್ನುವುದು ಗಮನಾರ್ಹವಾಗಿದೆ, ಆದರೆ ಅದು ಟಿವಿ ಸುದ್ದಿ ನಿರೂಪಕರಿಗೆ ಆಸಕ್ತಿಯ ವಿಷಯವಾಗಿಲ್ಲ. ಬಹುಶಃ,ಇದೇ ಹಿಂದುತ್ವ ರಕ್ಷಕರು ‘ಲವ್ ಜಿಹಾದ್’ನ ಹಿಂದುತ್ವ ಪಿತೂರಿ ಸಿದ್ಧಾಂತದ ಪ್ರಚಾರದಲ್ಲಿ ಭಾಗಿಯಾಗಿರುವುದು,ಅದು ಹೆಚ್ಚು ರಾಜಕೀಯಗೊಂಡಿರುವುದು ಮತ್ತು ಅದರ ವಿರುದ್ಧ ಬಿಜೆಪಿಯು ಶಾಸನವನ್ನು ತಂದಿರುವುದು ಇದಕ್ಕೆ ಕಾರಣವಾಗಿದೆ.

ಅಂದ ಹಾಗೆ ಈ ನಿರೂಪಕರು ಕಾರ್ಯಕ್ರಮಗಳಲ್ಲಿ ಏನು ಹೇಳಿದ್ದರು ಎನ್ನುವುದರ ಸಾರಾಂಶ ಇಲ್ಲಿದೆ...

ಆಜ್ ತಕ್

ಕಳೆದ ವಾರ ತನ್ನ ‘ಬ್ಲಾಕ್ ಆ್ಯಂಡ್ ವೈಟ್’ಕಾರ್ಯಕ್ರಮದಲ್ಲಿ ನಿರೂಪಕ ಸುಧೀರ ಚೌಧರಿಯವರು,ನೃತ್ಯ ಮತ್ತು ಸಂಗೀತವನ್ನು ನಿಷೇಧಿಸಿರುವ ಧರ್ಮಕ್ಕೆ ಸೇರಿದ ಜನರು (ಅವರ ಅರ್ಥದಲ್ಲಿ ಮುಸ್ಲಿಮರು) ಹಿಂದು ಧಾ ರ್ಮಿಕ ಉತ್ಸವಗಳಲ್ಲಿ ಪಾಲ್ಗೊಳ್ಳಲು ಏಕೆ ಬಯಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು. ‘‘ಇದು ಗರ್ಬಾ ಪೆಂಡಾಲ್ಗಳಲ್ಲಿ ‘ಲವ್ ಜಿಹಾದ್’ನ ಬ್ರೇಕಿಂಗ್ ವಿಶ್ಲೇಷಣೆ ’’ ಎಂಬ ಟಿಕರ್ ಟಿವಿ ಪರದೆಯ ಅಡಿಭಾಗದಲ್ಲಿ ಹರಿದಾಡುತ್ತಿತ್ತು. ‘ಹಿಂದುಗಳ ಗರ್ಬಾಗಳಲ್ಲಿ ಮುಸ್ಲಿಮರ ಪಾತ್ರವೇನು?’ ಎಂದೂ ಟಿಕರ್ನಲ್ಲಿ ಪ್ರಶ್ನಿಸಲಾಗಿತ್ತು.

ಮುಸ್ಲಿಮರು ಮಕ್ಕಾದಲ್ಲಿ ಪವಿತ್ರ ಕಾಬಾಕ್ಕೆ ಪ್ರದಕ್ಷಿಣೆ ಹಾಕುವ ಚಿತ್ರಗಳೊಂದಿನ ಕಾರ್ಯಕ್ರಮದಲ್ಲಿ ‘ಮುಸ್ಲಿಮರೇಕೆ ತಮ್ಮ ಗುರುತನ್ನು ಬದಲಿಸಿಕೊಂಡು ಗರ್ಬಾ ಪೆಂಡಾಲ್ಗಳನ್ನು ಪ್ರವೇಶಿಸಲು ಬಯಸುತ್ತಿದ್ದಾರೆ ’ಎಂದು ಚೌಧರಿ ಪ್ರಶ್ನಿಸಿದ್ದರು.

‘ಸತ್ಯ ಶೋಧನೆ’ಗಾಗಿ ಆಜ್ತಕ್ ನ ತಳಮಟ್ಟದ ವರದಿಯು  ಹಿಂದುತ್ವ ಕಾರ್ಯಕರ್ತರು ಮತ್ತು ಮುಸ್ಲಿಂ ಧರ್ಮಗುರುಗಳು ಎಂದು ಅದು ಬಿಂಬಿಸಿದ್ದವರ ಯಥೇಚ್ಛ ಹೇಳಿಕೆಗಳನ್ನು ಒಳಗೊಂಡಿತ್ತು,ಆದರೆ ಥಳಿಸಲ್ಪಟ್ಟಿದ್ದ ಆರೋಪಿಗಳು ಅಥವಾ ಅವರ ಸಂಬಂಧಿಕರ ಒಂದೇ ಒಂದು ಹೇಳಿಕೆ ಅದರಲ್ಲಿರಲಿಲ್ಲ. ಹಿಂದು ಹುಡುಗಿಯರ ಸ್ನೇಹ ಬೆಳೆಸುವುದು ಮತ್ತು ಗುಂಪಿನ ಲಾಭವನ್ನು ಪಡೆದುಕೊಂಡು ಅವರಿಗೆ ನಿಕಟವಾಗುವುದು ಮುಸ್ಲಿಂ ಯುವಕರ ಉದ್ದೇಶವಾಗಿದೆ ಎಂದು ನಿರೂಪಕರು ಘೋಷಿಸಿದ್ದರು. 2002ರಿಂದ ಇಂತಹ ಹಲವಾರು ಘಟನೆಗಳು ನಡೆದಿವೆ ಎಂದೂ ಅವರು ಹೇಳಿದ್ದರು.

ನ್ಯೂಸ್ ನೇಷನ್

‘ಗರ್ಬಾ ಮೆ ಭಾಯಿಜಾನ್ ಕಾ ಕ್ಯಾ ಕಾಮ್ ಹೈ’ಶೀರ್ಷಿಕೆಯ ರಾಷ್ಟ್ರಮೇವ ಜಯತೇ ಕಾರ್ಯಕ್ರಮದಲ್ಲಿ ಜನರು ಬಜರಂಗ ದಳ ಕಾರ್ಯಕರ್ತರೊಂದಿಗೆ ಸೇರಿಕೊಂಡು ಸುಳ್ಳು ಗುರುತುಗಳನ್ನು ಹೇಳಿಕೊಂಡು ಗರ್ಬಾ ಪೆಂಡಾಲ್ಗಳನ್ನು ಪ್ರವೇಶಿಸಿದ್ದ ‘ಭಾಯಿಜಾನ್ಗಳನ್ನು ’ಹೇಗೆ ಥಳಿಸಿದ್ದರು ಎನ್ನುವುದನ್ನು ನೋಡಿ ಎಂದು ನಿರೂಪಕರು ವೀಕ್ಷಕರನ್ನು ಕೇಳಿಕೊಂಡಿದ್ದರು.

ಹಿಂದುತ್ವ ಹಿಂಸಾಚಾರವನ್ನು ಸಮರ್ಥಿಸಿಕೊಂಡಿದ್ದ ಹಿನ್ನೆಲೆ ಧ್ವನಿಯು ಭಾರತ ಮಾತಾ ಕಿ ಜೈ ಮತ್ತು ವಂದೇ ಮಾತರಂ ಘೋಷಣೆಗಳನ್ನು ಕೂಗುತ್ತ ಬಜರಂಗ ದಳ ಕಾರ್ಯಕರ್ತರು ಹೇಗೆ ಇಂತಹ ‘ಜಿಹಾದಿ’ಗಳನ್ನು ಥಳಿಸಿದ್ದರು ಎನ್ನುವುದನ್ನು ಪ್ರಶಂಸಿಸಿತ್ತು. ಮುಸ್ಲಿಮರ ಅತಿಕ್ರಮ ಪ್ರವೇಶದಿಂದ ವಿವಾದ ಸೃಷ್ಟಿಯಾಗಿದೆ,ಮುಸ್ಲಿಮರೇಕೆ ಗುರುತು ಬದಲಿಸಿಕೊಳ್ಳುತ್ತಿದ್ದಾರೆ ಎಂದು ಟಿಕರ್ ಪ್ರಶ್ನಿಸಿತ್ತು. ಇದು ಮಧ್ಯಪ್ರದೇಶದಲ್ಲಿ ‘ಗರ್ಬಾ ಜಿಹಾದಿ ’ಗಳ ಮೇಲೆ ದೊಡ್ಡ ‘ಪ್ರಹಾರ’ವಾಗಿದೆ ಎಂದು ಘೋಷಿಸಿದ್ದ ವಾಹಿನಿಯು ಪೆಂಡಾಲ್ಗಳಲ್ಲಿ ಸಂಭ್ರಮಾಚರಣೆಯಲ್ಲಿರುವ ಹಿಂದು ಕುಟುಂಬಗಳ ಮೇಲೆ ಲವ್ ಜಿಹಾದಿ ಗ್ಯಾಂಗ್ ಕಣ್ಣು ಹಾಕಿದೆ ಎಂದು ಆರೋಪಿಸಿತ್ತು.

ಇಲ್ಲಿಯೂ ಥಳಿಸಲ್ಪಟ್ಟವರ ಅಥವಾ ಅವರ ಕುಟುಂಬಗಳ ಹೇಳಿಕೆಗಳು ಇರಲಿಲ್ಲ.

ನ್ಯೂಸ್18 ಇಂಡಿಯಾ

ಕಳೆದ ಗುರುವಾರ ತನ್ನ ‘ದೇಶ ನಹೀಂ ಜುಕ್ನೆ ದೇಂಗೆ ’ ಕಾರ್ಯಕ್ರಮದಲ್ಲಿ ಗರ್ಬಾ ಪೆಂಡಾಲ್ಗಳಲ್ಲಿ ‘ಲವ್ ಜಿಹಾದ್ ’ನ್ನು ಪ್ರಸಾರಿಸುವ ಮೂಲಕ ನಿರೂಪಕ ಅಮನ್ ಚೋಪ್ರಾ ಅವರು ತನ್ನ ಎದುರಾಳಿಗಳಿಗಿಂತ ಬಹಳ ಮುಂದೆ ಸಾಗಿದ್ದಂತಿತ್ತು. ಅವರು ಇದನ್ನು ಸಿಎಎ ವಿರುದ್ಧದ ಪ್ರತಿಭಟನೆಗಳಿಗೆ ಹೋಲಿಸಿದ್ದರು.

ಗರ್ಬಾ ಪೆಂಡಾಲ್ಗಳಿಗೆ ಪ್ರವೇಶಿಸಲು ಗುರುತಿನ ದಾಖಲೆ ತೋರಿಸುವುದು ಅಗತ್ಯವಾಗಿದ್ದರೂ ‘ಕಾಗಜ್ ನಹೀಂ ದಿಖಾಯೇಂಗೆ’ ಎಂದು ಹೇಳುವ ಮೂಲಕ ಅದನ್ನು ವಿರೋಧಿಸಿದವರೂ ಅಲ್ಲಿದ್ದರು ಎಂದು ಚೋಪ್ರಾ ಹೇಳಿದ್ದರು. ಈ ವಿಶೇಷಣವು ಸಿಎಎ-ಎನ್ಆರ್ಸಿ-ಎನ್ಪಿಆರ್ ವಿರುದ್ಧ ಪ್ರತಿಭಟನೆಗಳೊಂದಿಗೂ ಗುರುತಿಸಿಕೊಂಡಿತ್ತು. ‘ಕಾಗಜ್ ನಹೀಂ ದಿಖಾಯೇಂಗೆ,ಗರ್ಬಾ ಮೆ ಆಯೇಂಗೆ?’ ಎಂದು ಟಿಕರ್ ಪ್ರಶ್ನಿಸಿತ್ತು.

ರಿಪಬ್ಲಿಕ್ ಭಾರತ್

ಪಾಂಚ್ ಕಾ ಪ್ರಹಾರ್ ಕಾರ್ಯಕ್ರಮದಲ್ಲಿ ನಿರೂಪಕಿ ಹಿಮಾನಿ ನೈಥಾನಿಯವರು ‘ಗೈರ್ ಹಿಂದು ನಾಮ್,ಗರ್ಬಾ ಪೆಂಡಾಲ್ ಮೆ ಕ್ಯಾ ಕ್ಯಾಮ್?’ಎಂಬ ಶೀರ್ಷಿಕೆಯಡಿ ಮುಸ್ಲಿಮರು ಗರ್ಬಾ ಕಾರ್ಯಕ್ರಮಗಳಿಗೆ ತೆರಳಲು ಐದು ಕಾರಣಗಳನ್ನು ವಿವರಿಸಿದ್ದರು. ಈ ಕಾರಣಗಳು ಹೆಚ್ಚಾಗಿ ಪ್ರಶ್ನೆಗಳೇ ಆಗಿದ್ದವು. ಸುಳ್ಳು ಗುರುತನ್ನು ಏಕೆ ಬಳಸುವುದು,ಏನಾದರೂ ಸಂಚು ಇದೆಯೇ,ಜಿಹಾದ್ ಕುತಂತ್ರವಿದೆಯೇ, ಗರ್ಬಾ ಉತ್ಸಾಹವನ್ನು ಹಾಳು ಮಾಡಲು ಯಾರು ಬಯಸುತ್ತಿದ್ದಾರೆ ಮತ್ತು ಗರ್ಬಾ ಸೋಗಿನಲ್ಲಿ ಹಿಂದು ಮಹಿಳೆಯರನ್ನು ಗುರಿಯಾಗಿಸಿಕೊಳ್ಳಗುತ್ತಿದೆಯೇ ಎನ್ನುವುದು ಈ ಪ್ರಶ್ನೆಗಳ ರೂಪದ ಕಾರಣಗಳಾಗಿದ್ದವು.

ಪ್ಯಾನೆಲ್ ಚರ್ಚೆಯಲ್ಲಿ ಚಾನೆಲ್ ನ ವರದಿಗಾರರೋರ್ವರು ಇಂತಹ ಘಟನೆಗಳು ಮತ್ತು ಗರ್ಬಾ ಸ್ಥಳಗಳಿಗೆ ಹಿಂದುಯೇತರರ ಪ್ರವೇಶದ ಪ್ರಯತ್ನಗಳು ‘ಗರ್ಬಾ ಜಿಹಾದ್’ಗೆ ಸಾಕ್ಷಿಯಾಗಿವೆ ಎಂದು ಹೇಳಿದ್ದರು. ಹಿಂದುಗಳ ಪ್ರತಿರೋಧದ ಹೊರತಾಗಿಯೂ ಇಂತಹ ಘಟನೆಗಳು ಹೆಚ್ಚುತ್ತಿರುವುದರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳಿವೆ ಎಂದು ಅವರು ಅರೋಪಿಸಿದ್ದರು.

ಟೈಮ್ಸ್ ನೌ ನವಭಾರತ

’ಗರ್ಬಾ ಬಹಾನಾ, ಹಿಂದು ಬೇಟಿಯಾಂ ನಿಶಾನಾ?’ ಶೀರ್ಷಿಕೆಯ ಕಾರ್ಯಕ್ರಮದಡಿ ನಿರೂಪಕಿ ನವಿಕಾ ಕುಮಾರ್ ತನ್ನ ‘ಸವಾಲ್ ಪಬ್ಲಿಕ್ ಕಾ’ದಲ್ಲಿ ಹಿಂದು ಯುವತಿಯರು ಗರ್ಬಾ ಮತ್ತು ನವರಾತ್ರಿಯನ್ನು ಇನ್ನು ಆಚರಿಸಲು ಸಾಧ್ಯವಿಲ್ಲವೇ ಎಂದು ಕೇಳಿದ್ದರು. ಓರ್ವ ತಾಯಿಯಾಗಿ ತಾನು ಸಮಸ್ಯೆಯನ್ನು ಅರ್ಥ ಮಾಡಿಕೊಂಡಿದ್ದೇನೆ ಮತ್ತು ಇದು ರಾಜಕೀಯವಲ್ಲ,ಸಾಮಾಜಿಕ ಸಮಸ್ಯೆಯಾಗಿದೆ ಎಂದು ಅವರು ಹೇಳಿದ್ದರು.

ಝೀ ನ್ಯೂಸ್ ಸೇರಿದಂತೆ ಇನ್ನೂ ಹಲವು ಸುದ್ದಿವಾಹಿನಿಗಳು ‘ಗರ್ಬಾ ಜಿಹಾದ್’ ವಿರುದ್ಧ ದಾಳಿಗಳನ್ನು ನಡೆಸಿದ್ದವು.

ಕೃಪೆ: Newslaundry.com

Writer - ಅಬನ್ ಉಸ್ಮಾನಿ (newslaundry.com)

contributor

Editor - ಅಬನ್ ಉಸ್ಮಾನಿ (newslaundry.com)

contributor

Similar News