ಸೆಪ್ಟಂಬರ್‌ನಲ್ಲಿ ಆರು ತಿಂಗಳ ಕನಿಷ್ಠಕ್ಕೆ ಕುಸಿದ ಸೇವಾ ಕ್ಷೇತ್ರದ ಚಟುವಟಿಕೆ

Update: 2022-10-06 15:46 GMT

ಹೊಸದಿಲ್ಲಿ,ಅ.6: ಹಣದುಬ್ಬರ ಒತ್ತಡ ಮತ್ತು ಸ್ಪರ್ಧಾತ್ಮಕ ಸ್ಥಿತಿಗಳಿಂದಾಗಿ ಭಾರತದ ಸೇವಾ ಕ್ಷೇತ್ರದ ಚಟುವಟಿಕೆಯು ಸೆಪ್ಟಂಬರ್‌ನಲ್ಲಿ ಆರು ತಿಂಗಳ ಕನಿಷ್ಠಕ್ಕೆ ಕುಸಿದಿದೆ ಎಂದು ಗುರುವಾರ ಬಿಡುಗಡೆಗೊಂಡ ಎಸ್‌ಆ್ಯಂಡ್‌ಪಿ ಗ್ಲೋಬಲ್ ಇಂಡಿಯಾ ಸರ್ವಿಸಿಸ್ ಪರ್ಚೇಸಿಂಗ್ ಮ್ಯಾನೇಜರ್ಸ್‌ ಇಂಡೆಕ್ಸ್ (ಪಿಎಂಐ) ಹೇಳಿದೆ.

ಆಗಸ್ಟ್‌ನ ಶೇ.57.2ಕ್ಕೆ ಹೋಲಿಸಿದರೆ ಸೂಚ್ಯಂಕವು ಸೆಪ್ಟಂಬರ್‌ನಲ್ಲಿ ಶೇ.57.2ಕ್ಕೆ ಕುಸಿದಿದ್ದು,ಇದು ಮಾರ್ಚ್‌ನಿಂದೀಚಿಗೆ ಅತ್ಯಂತ ದುರ್ಬಲ ವಿಸ್ತರಣೆಯಾಗಿದೆ. 50ಕ್ಕಿಂತ ಹೆಚ್ಚಿನ ಶೇಕಡಾವಾರು ಪ್ರಮಾಣವು ವಿಸ್ತರಣೆಯನ್ನು ಮತ್ತು 50ಕ್ಕಿಂತ ಕಡಿಮೆ ಪ್ರಮಾಣವು ಸಂಕುಚನವನ್ನು ಸೂಚಿಸುತ್ತದೆ.

ಪಿಎಂಐ ತಯಾರಿಕೆ ಮತ್ತು ಸೇವೆಗಳ ಕ್ಷೇತ್ರದಲ್ಲಿ ವ್ಯವಹಾರ ಚಟುವಟಿಕೆಯ ಸೂಚಕವಾಗಿದೆ.

ಆದಾಗ್ಯೂ ಭಾರತದ ಸೇವಾ ಕ್ಷೇತ್ರವು ಸತತ 14ನೇ ತಿಂಗಳಿಗೆ ಉತ್ಪಾದನೆಯಲ್ಲಿ ಹೆಚ್ಚಳವನ್ನು ವರದಿ ಮಾಡಿದೆ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್ ವರದಿಯು ಹೇಳಿದೆ.

ಭಾರತದ ಸೇವಾ ಕ್ಷೇತ್ರವು ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ಪ್ರತಿಕೂಲಗಳನ್ನು ಮೆಟ್ಟಿನಿಂತಿದೆ. ಸೆಪ್ಟಂಬರ್‌ನಲ್ಲಿ ಬೆಳವಣಿಗೆ ವೇಗವು ಕೊಂಚ ನಿಧಾನವಾಗಿದ್ದರೂ ಬಲವಾದ ಕಾರ್ಯಕ್ಷಮತೆಯನ್ನು ಪಿಎಂಐ ತೋರಿಸಿದೆ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್ ಮಾರ್ಕೆಟ್ ಇಂಟಲಿಜೆನ್ಸ್‌ನ ಆರ್ಥಿಕ ಸಹ ನಿರ್ದೇಶಕಿ ಪೊಲಿಯಾನಾ ಡಿ ಲಿಮಾ ಹೇಳಿದರು.

 ಭಾರತದಲ್ಲಿಯ ಕಂಪನಿಗಳು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಹೆಚ್ಚುವರಿ ಉದ್ಯೋಗಿಗಳ ನೇಮಕವನ್ನು ಮಂದುವರಿಸಿವೆ ಮತ್ತು ಇನ್‌ಪುಟ್ ವೆಚ್ಚ ಹಣದುಬ್ಬರವು ಸ್ಥಿರವಾಗಿದೆ ಎಂದ ಅವರು, ಆದಾಗ್ಯೂ ಸೆಪ್ಟಂಬರ್ ಅಂತ್ಯದಲ್ಲಿ ರೂಪಾಯಿಯ ತೀವ್ರ ಅಪವೌಲ್ಯವು ಭಾರತೀಯ ಆರ್ಥಿಕತೆಗೆ ಹೆಚ್ಚುವರಿ ಸವಾಲುಗಳನ್ನೊಡ್ಡಿದೆ ಎಂದರು.

ಕರೆನ್ಸಿ ಅಸ್ಥಿರತೆಯಿಂದಾಗಿ ಆಮದು ವಸ್ತುಗಳು ಇನ್ನಷ್ಟು ದುಬಾರಿಯಾಗಲಿವೆ ಮತ್ತು ರೂಪಾಯಿಯನ್ನು ರಕ್ಷಿಸಲು ಹಾಗೂ ಬೆಲೆ ಒತ್ತಡವನ್ನು ನಿಯಂತ್ರಿಸಲು ಆರ್‌ಬಿಐ ಬಡ್ಡಿದರಗಳ ಏರಿಕೆಯನ್ನು ಮುಂದುವರಿಸುವ ಸಾಧ್ಯತೆಯಿದೆ ಎಂದು ಲಿಮಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News