ಬ್ಲೂ ಫ್ಲ್ಯಾಗ್ ಬೀಚ್‍ನಲ್ಲಿ ಬೋಟಿಂಗ್‍ಗೆ ನಕಲಿ ರಶೀದಿ ನೀಡಿ ಹಣ ವಸೂಲು ಮಾಡುವ ಆರೋಪ: ಉಡುಪಿ ಜಿಲ್ಲಾಧಿಕಾರಿಗೆ ಮನವಿ

Update: 2022-10-06 16:57 GMT
ಫೈಲ್‌ ಫೋಟೊ 

ಪಡುಬಿದ್ರೆ: ಅಂತಾರಾಷ್ಟ್ರೀಯ ಮಾನ್ಯತೆಯೊಂದಿಗೆ ಪಡುಬಿದ್ರೆಯ ಎಂಡ್ ಪಾಯಿಂಟ್‍ನಲ್ಲಿನ ಬ್ಲೂ ಫ್ಲ್ಯಾಗ್ ಬೀಚ್‍ನಲ್ಲಿ ಉದ್ಯೋಗಿಗಳ ಮಧ್ಯೆ ಆಂತರಿಕ ಕಚ್ಚಾಟ ನಡೆದಿದ್ದು, ಈ ಬಗ್ಗೆ ನೊಂದ ಉದ್ಯೋಗಿಗಳು ಉಡುಪಿ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.

15ತಿಂಗಳುಗಳಿಂದ ಕೆಲಸದ ವಾತಾವರಣವು ಹದಗೆಟ್ಟಿದೆ. ಇಲ್ಲಿ ಬೋಟಿಂಗ್‍ಗೆ ನಕಲಿ ರಶೀದಿಗಳನ್ನು ನೀಡಿ ಹಣ ವಸೂಲು ಮಾಡಲಾಗುತ್ತಿದೆ. ಇದು ಬೀಚ್ ಕಮಿಟಿಯ ಖಾತೆಗಾಗಲೀ, ಪ್ರವಾಸೋದ್ಯಮ ಇಲಾಖೆ ಖಾತೆಗೆ ಜಮೆಯಾಗುತ್ತಿಲ್ಲ. ಅಲ್ಲಿನ ಓರ್ವರ ಖಾಸಗಿ ಬ್ಯಾಂಕ್ ಖಾತೆಗೆ ಇದು ಜಮೆಯಾಗುತ್ತಿದೆ. ಈ ಕುರಿತಾಗಿ ಈ ಹಿಂದೆಯೂ ಜಿಲ್ಲಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖಾ ಪ್ರಭಾರ ಸಹಾಯಕ ನಿರ್ದೇಶಕರಿಗೂ ದೂರು ನೀಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲವೆಂದೂ ಮನವಿಗೆ ಸಹಿ ಮಾಡಿರುವ 22 ಗುತ್ತಿಗೆ ಉದ್ಯೋಗಿಗಳು ದೂರಿದ್ದಾರೆ.

ತಾವು 31 ಮಂದಿ ಇದ್ದು ತಮಗೆ ನ್ಯಾಯ ದೊರಕಬೇಕು. ಸೂಪರ್‌ವೈಸರ್‌ ಗಳಿಬ್ಬರು ತಮ್ಮ ಮೇಲೆ ಜೀವಭಯವನ್ನೂ ಹುಟ್ಟುಹಾಕುತ್ತಿರುವುದಾಗಿ ಹೇಳುತ್ತಿರುವ ಈ ಉದ್ಯೋಗಿಗಳು ಬೋಟಿಂಗ್ ಪಾವತಿಯು ಇಲ್ಲಿನ ಮಹಿಳಾ ಉದ್ಯೋಗಿಯೋರ್ವರ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿರುವುದಾಗಿ ಆರೋಪಿಸಿದ್ದಾರೆ.

ಸೂಪರ್‌ವೈಸರ್‌ಗೆ ಹಲ್ಲೆ: ಅಂತರಾಷ್ಟ್ರೀಯ ಮಾನ್ಯತೆ ಪಡೆದ ಪಡುಬಿದ್ರಿ ಬ್ಲೂಫ್ಲ್ಯಾಗ್ ಬೀಚ್‍ನಲ್ಲಿ  ಪ್ರವಾಸೋದ್ಯಮ ಇಲಾಖೆಯಿಂದ ನಿಯೋಜಿಸಲ್ಪಪಟ್ಟಿರುವ ವಿಜೇಶ್ ಆರ್ ಕೋಟ್ಯಾನ್ (28) ಎಂಬವರಿಗೆ ಅದೇ ಬೀಚ್‍ನ ವ್ಯವಸ್ಥಾಪಕ ನಡಿಪಟ್ಣದ ಕಿರಣ್‍ ರಾಜ್, ಎರ್ಮಾಳಿನ ನೀತೇಶ್ ಮತ್ತು ಸುಮನ್ ಎಂಬವರು ಹಲ್ಲೆ ಮಾಡಿದ್ದಾರೆ ಎನ್ನಲಾದ ಘಟನೆ ಸೋಮವಾರ ನಡೆದಿದೆ.

ಕಿರಣ್ ಎಂಬಾತ ವಿಜೇಶ್ ಆರ್ ಕೋಟ್ಯಾನ್ ಬಳಿ ಬಂದು ಸುಕೇಶನ ಜೊತೆ ಕೆಲಸ ಮಾಡುವ ಬಗ್ಗೆ ಮಾತನಾಡಿ, ಹಲ್ಲೆ ನಡೆಸಿದ್ದು, ಗಲಾಟೆ ಬಿಡಿಸಲು ಬಂದ ಬೀಚ್ ಲೈಫ್ ಗಾರ್ಡ್ ಅಕ್ಷಯ ಕೋಟ್ಯಾನ್ ಅವರಿಗೆ ನೀತೇಶ್ ಮತ್ತು  ಸುಮನ್ ನಿಂದಿಸಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆಗೊಳಗಾದ ವಿಜೇಶ್ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಕರಣ ದಾಖಲಿಸಿರುವ ಪಡುಬಿದ್ರೆ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ರಸ್ತೆ ತಡೆದ ಸಿಬ್ಬಂದಿ: ಬ್ಲೂಫ್ಲ್ಯಾಗ್ ಬೀಚ್‍ಗೆ ಬರುವ ರಸ್ತೆಯನ್ನು ತಡೆದು ಪ್ರವಾಸಿಗರಿಗೆ ಹಾಗೂ ಅಲ್ಲಿಗೆ ತೆರಳುವ ಸಿಬ್ಬಂದಿಗಳಿಗೆ ಬೆದರಿಕೆ ಒಡ್ಡಿದ್ದಾರೆ ಎಂದು ಅಲ್ಲಿನ ಸಿಬ್ಬಂದಿಗಳು ಉಡುಪಿ ಜಿಲ್ಲಾಧಿಕಾರಿಗೆ ದೂರು ನೀಡಿ, ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News