ಲಂಚ ಬೇಡಿಕೆ ಪ್ರಕರಣ: ​ಪುತ್ತೂರು ಭೂಮಾಪಕನಿಗೆ 3.3 ವರ್ಷ ಜೈಲು ಶಿಕ್ಷೆ, ದಂಡ

Update: 2022-10-07 11:57 GMT

ಮಂಗಳೂರು, ಅ.7: ಜಾಗದ ಅಳತೆ ಮಾಡಿ ನಕ್ಷೆ ತಯಾರಿಸಿಕೊಡುವುದಕ್ಕಾಗಿ ಲಂಚದ ಬೇಡಿಕೆಯನ್ನಿಟ್ಟಿದ್ದ ಪುತ್ತೂರು ಭೂಮಾಪನ ಇಲಾಖೆಯ ಭೂಮಾಪಕ ಮಹಾದೇವ ನಾಯಕ್‌ಗೆ 3ನೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಮೂರು ವರ್ಷ ಮೂರು ತಿಂಗಳ ಜೈಲು ಶಿಕ್ಷೆಯನ್ನು ಗುರುವಾರ ವಿಧಿಸಿದೆ. ಅಲ್ಲದೆ 20 ಸಾವಿರ ರೂ. ದಂಡ ಪಾವತಿಸುವಂತೆ ಮತ್ತು ದಂಡ ಪಾವತಿಸಲು ವಿಫಲನಾದರೆ ಮತ್ತೆ 3 ತಿಂಗಳು ಜೈಲು ಶಿಕ್ಷೆ ಅನುಭವಿಸಲು ಆದೇಶಿಸಿದೆ.

ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಅಂಕಿತ ಎಂಬವರ ತಂದೆ ಕೃಷ್ಣಪ್ಪರ ಜಮೀನಿನ ಅಳತೆ ಮಾಡಿ ನಕ್ಷೆ ಮಾಡಿಸಿಕೊಡಲು ಅರ್ಜಿ ಹಾಕಲಾಗಿತ್ತು. ಆದರೆ ನಕ್ಷೆ ಮಾಡಿಸಿಕೊಡಲು ಭೂಮಾಪಕ ಮಹಾದೇವ ನಾಯಕ್ ಲಂಚದ ಬೇಡಿಕೆಯನ್ನಿಟ್ಟಿದ್ದ. ಲಂಚ ಕೊಡಲು ನಿರಾಕರಿಸಿದ ಅಂಕಿತ 2014ರ ಮಾರ್ಚ್ 15ರಂದು ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸರಿಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಲೋಕಾಯುಕ್ತ ಇನ್‌ಸ್ಪೆಕ್ಟರ್ ಎಸ್. ವಿಜಯಪ್ರಸಾದ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ಬಿ.ಬಿ. ಜಕಾತಿಯು ಆರೋಪಿಗೆ ಶುಕ್ರವಾರ ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಸರಕಾರದ ಪರವಾಗಿ ರವೀಂದ್ರ  ಮನ್ನಿಪ್ಪಾಡಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News