ಪಿಲಿಕುಳ ಜೈವಿಕ ಉದ್ಯಾನದ ಹಾವು ಸುರಕ್ಷಿತ : ಸ್ಪಷ್ಟನೆ

Update: 2022-10-07 14:25 GMT

ಮಂಗಳೂರು, ಅ.7: ನಗರದ ಪಿಲಿಕುಳ ಜೈವಿಕ ಉದ್ಯಾನದೊಳಗಿರುವ ಹಾವಿನ ಗೂಡೊಂದರಲ್ಲಿ ಇರುವೆಗಳ ಗುಂಪು ಹಾವನ್ನು ಕಚ್ಚುತ್ತಿರುವ ವೀಡಿಯೋ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಷಯ ತಿಳಿದ ಕೂಡಲೇ ತಾನು ಸಂಬಂಧಪಟ್ಟ ಹಿರಿಯ ವೈಜ್ಞಾನಿಕ ಅಧಿಕಾರಿ, ಪಶುಪಾಲನಾ ವೈದ್ಯಾಧಿಕಾರಿ ಮತ್ತು ಬಯಾಲಾಜಿಸ್ಟ್ ಜೊತೆಗೂಡಿ ಸ್ಥಳ ಪರಿಶೀಲನೆ ನಡೆಸಿರುತ್ತಾರೆ. ಈ ಇರುವೆಗಳ ಬಾಧೆಗೆ ಒಳಗಾದ ಹಾವಿನ ಆರೋಗ್ಯವು ಸ್ಥಿರವಾಗಿದೆ ಎಂಬುದಾಗಿ ಪಶುಪಾಲನಾ ವೈದ್ಯಾಧಿಕಾರಿ ದೃಢೀಕರಿಸಿರುತ್ತಾರೆ ಎಂದು ಪ್ರಾಧಿಕಾರದ ಆಯುಕ್ತರು ತಿಳಿಸಿದ್ದಾರೆ.

ಜೈವಿಕ ಉದ್ಯಾನವನದ ನಿರ್ದೇಶಕರು ಈ ಲೋಪಕ್ಕೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮಜರುಗಿಸುವ ಸಲುವಾಗಿ ಉರಗ ಪಾಲಕರಿಗೆ ನೊಟೀಸ್ ನೀಡಿದ್ದಾರೆ.

ಇಂತಹ ಘಟನೆಯು ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಪ್ರಾಧಿಕಾರದ ಆಯುಕ್ತರ ನೇತೃತ್ವದಲ್ಲಿ ಜೈವಿಕ ಉದ್ಯಾನವನದ ನಿರ್ದೇಶಕರು, ಹಿರಿಯ ವೈಜ್ಞಾನಿಕ ಅಧಿಕಾರಿ ಮತ್ತು ಪಶುಪಾಲನಾ ವೈದ್ಯಾಧಿಕಾರಿಯವರನ್ನು ಒಳಗೊಂಡು ವಿಶೇಷ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಇರುವೆಗಳ ಬಾಧೆಗೊಳಗಾದ ಹಾವಿನ ಆರೋಗ್ಯವನ್ನು ಪ್ರತೀ 2 ಗಂಟೆಗಳಿಗೊಮ್ಮೆ ಪರಿಶೀಲನೆ ನಡೆಸಿ ವರದಿಯನ್ನು ಆಯುಕ್ತರಿಗೆ ನೀಡಲು ತಿಳಿಸಲಾಗಿದೆ.

ಜೈವಿಕ ಉದ್ಯಾನದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ದಿನದ ಎಲ್ಲಾ ಅವಧಿಯಲ್ಲಿ ಉರಗ ವಿಭಾಗಕ್ಕೆ ಹೆಚ್ಚುವರಿ ಸಿಸಿ ಕ್ಯಾಮರಾವನ್ನು ಅಳವಡಿಸಿ 24X7 ಕಣ್ಗಾವಲು ಮಾಡಲು ಕ್ರಮ ಕೈಗೊಳ್ಳಲಾಗು ವುದು. ಉರಗಗಳ ಆವರಣದ ಒಳಗೆ ಯಾವುದೇ ತಿಂಡಿ ತಿನಸುಗಳನ್ನು ಕೊಂಡು ಹೋಗದಂತೆ ನಿಗಾ ವಹಿಸಲು ಭದ್ರತಾ ಸಿಬ್ಬಂದಿಗೆ ಸೂಚಿಸಲಾಗಿದೆ. ಉರಗ ಆವರಣದ ಹೊರಭಾಗದ ಸ್ವಚ್ಛತೆ ಮಾಡಲು ಹಾಗೂ ಇದರ ಮೇಲುಸ್ತುವಾರಿಯನ್ನು ಭದ್ರತಾಧಿಕಾರಿ ನೋಡಿಕೊಂಡು ವರದಿ ನೀಡಲು ಸೂಚಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News