ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆ ಪರಿಶೀಲಿಸಿದ ತಾ.ಪಂ., ಗ್ರಾ.ಪಂನ ನಿಯೋಗ

Update: 2022-10-07 15:08 GMT

ಕುಂದಾಪುರ, ಅ.7: ತಾಲೂಕಿನ ಕೋಟೇಶ್ವರದ ಶ್ರೀಕೋಟಿಲಿಂಗೇಶ್ವರ ದೇವಸ್ಥಾನದ ಸುಮಾರು 4.30 ಎಕರೆ ವಿಸ್ತೀರ್ಣದ ಕೋಟಿ ತೀರ್ಥ ಪುಷ್ಕರಣಿಗೆ ಸ್ಥಳೀಯ ರೈಸ್‌ಮಿಲ್‌ನಿಂದ ಹೊರಬಿಡುತ್ತಿರುವ ನೀರು ಸೇರುತ್ತಿದ್ದು, ನಿತ್ಯ ಹತ್ತಾರು ಮೀನುಗಳ ಮಾರಣ ಹೋಮ ನಡೆಯುತ್ತಿರುವ ಬಗ್ಗೆ ಸ್ಥಳೀಯರಿಂದ ಗ್ರಾಮ ಪಂಚಾಯಿತಿಗೆ ದೂರು ಬಂದಿದ್ದು, ಶುಕ್ರವಾರ ಕುಂದಾಪುರ ತಾಲೂಕು ಪಂಚಾಯತ್ ಮತ್ತು ಕೋಟೇಶ್ವರದ ಗ್ರಾಮ ಪಂಚಾಯತ್ ನಿಯೋಗಗಳು ಕೋಟಿ ತೀರ್ಥಕ್ಕೆ ಭೇಟಿ ನೀಡಿ ಸುತ್ತಮುತ್ತಲಿನ ಸ್ಥಳ ವೀಕ್ಷಣೆ ಮಾಡಿವೆ.

ಇದೇ ಸಂದರ್ಭ ಕೋಟಿ ತೀರ್ಥದ ನೀರಿನ ಸ್ಯಾಂಪಲ್ ಅನ್ನು ಸಹ ಪಡೆದು ಹೆಚ್ಚಿನ ಪರೀಕ್ಷೆಗಾಗಿ ಉಡುಪಿಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು ಮಂಗಳವಾರ ಈ ವರದಿ ಸಿಗುವ ಸಾಧ್ಯತೆಯಿದೆ.

ಸ್ಥಳಕ್ಕೆ ಕುಂದಾಪುರ ತಾಪಂ ಕಾರ್ಯನಿರ್ವಾಹಣಾಧಿಕಾರಿ ಮಹೇಶ್ ಹೊಳ್ಳ, ಕೋಟೇಶ್ವರ ಗ್ರಾಪಂ ಅಧ್ಯಕ್ಷ ಕೃಷ್ಣ ಗೊಲ್ಲ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ನಾಯಕ್, ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಸದಸ್ಯರಾದ ಸುರೇಶ್ ಬೆಟ್ಟಿನ್, ಮಂಜುನಾಥ್ ಆಚಾರ್ಯ, ಗ್ರಾಪಂ ಸದಸ್ಯರಾದ ಸುರೇಶ್ ದೇವಾಡಿಗ ಅಂಕದಕಟ್ಟೆ, ಲೋಕೇಶ್ ಅಂಕದಕಟ್ಟೆ, ನಾಗರಾಜ್ ಎಂ ಕಾಂಚನ್, ರಾಯ್ಸನ್ ಡಿಮೆಲ್ಲೋ ಭೇಟಿ ನೀಡಿದ ನಿಯೋಗದಲ್ಲಿದ್ದರು.

ವಾರ್ತಾಭಾರತಿ ವರದಿ: ‘ಕೋಟೇಶ್ವರ: ಪುಷ್ಕರಣಿ ನೀರು ಕಲುಷಿತ, ಮೀನುಗಳ ಮಾರಣಹೋಮ’ ತಲೆಬರಹದಡಿಯಲ್ಲಿ ಕೋಟೇಶ್ವರ ಕೋಟಿಲಿಂಗೇಶ್ವರ ಪುಷ್ಕರಣಿ ನೀರು ಕಲುಷಿತವಾಗಿರುವುದು, ಅದರಲ್ಲಿದ್ದ ಮೀನುಗಳು ಸಾಯುತ್ತಿರುವುದು ಹಾಗೂ ಆಸುಪಾಸಿನ ಮನೆಗಳ ಬಾವಿನೀರು ಕೆಟ್ಟಿರುವ ಬಗ್ಗೆ ಅ.7ರಂದು ವಾರ್ತಾಭಾರತಿ ವಿಸ್ತೃತ ವರದಿ ಪ್ರಕಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News