ಭಾರತ - ಅಮೆರಿಕ ಬಾಂಧವ್ಯ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ: ಪೆಂಟಗಾನ್

Update: 2022-10-07 17:22 GMT
PHOTO : NDTV 

ವಾಷಿಂಗ್ಟನ್, ಅ.7: ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಉಭಯ ದೇಶಗಳು ತಮ್ಮ ಮಿಲಿಟರಿಗಳ ನಡುವಿನ  ಪರಸ್ಪರ ಕಾರ್ಯಸಾಧ್ಯತೆಯ ಮೇಲೆ ನಿರ್ದಿಷ್ಟವಾಗಿ ಗಮನ ಹರಿಸಿವೆ ಎಂದು ಅಮೆರಿಕದ ರಕ್ಷಣಾ ಇಲಾಖೆ ( ಪೆಂಟಗಾನ್) ಹೇಳಿದೆ.

ರಕ್ಷಣಾ ಸಂಬಂಧವು ಭಾರತ - ಅಮೆರಿಕ ವ್ಯೂಹಾತ್ಮಕ ಪಾಲುದಾರಿಕೆಯ ಪ್ರಮುಖ ಆಧಾರಸ್ಥಂಭವಾಗಿ ಹೊರಹೊಮ್ಮಿದೆ. ಉಭಯ ದೇಶಗಳು ಈಗ ಇತರ ದೇಶಗಳಿಗಿಂತ ಹೆಚ್ಚು ದ್ವಿಪಕ್ಷೀಯ ಸಮರಾಭ್ಯಾಸವನ್ನು ಪರಸ್ಪರ ನಡೆಸುತ್ತಿವೆ. ಅಮೆರಿಕದಿಂದ ಭಾರತ ಖರೀದಿಸುವ ಶಸ್ತ್ರಾಸ್ತ್ರ ಹಾಗೂ ರಕ್ಷಣಾ ವ್ಯವಸ್ಥೆಯ ಪ್ರಮಾಣವೂ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದೆ ಎಂದು  ಅಮೆರಿಕದ   ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧವನ್ನು ಇನ್ನಷ್ಟು ಸುಧಾರಿಸುವುದು ನಮ್ಮ ಆಶಯವಾಗಿದೆ ಮತ್ತು ಈ ಸಂಬಂಧ ವಿಶೇಷವಾಗಿ ನಮ್ಮ ಎರಡು ಮಿಲಿಟರಿಗಳ ನಡುವಿನ ಪರಸ್ಪರ ಕಾರ್ಯಸಾಧ್ಯತೆಯ ಮೇಲೆ ಕೇಂದ್ರೀಕರಿಸಿದೆ . ಹಾಗೂ ಇದು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಪೆಂಟಗಾನ್ ವಕ್ತಾರ ಬ್ರಿಗೇಡಿಯರ್ ಜನರಲ್ ಪ್ಯಾಟ್ ರೈಡರ್ ವಾಷಿಂಗ್ಟನ್ನಲ್ಲಿ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

2016ರ ಜೂನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಮೆರಿಕವು ಭಾರತವನ್ನು ಪ್ರಮುಖ ರಕ್ಷಣಾ ಪಾಲುದಾರ ಎಂದು ಗುರುತಿಸಿದೆ. ಇದು  ತನ್ನ ನಿಕಟ ಮಿತ್ರರು ಹಾಗೂ ಪಾಲುದಾರರ ಮಟ್ಟಕ್ಕೆ ಅನುಗುಣವಾಗಿ  ಭಾರತದೊಂದಿಗೆ ತಂತ್ರಜ್ಞಾನ ಹಂಚಿಕೆಯನ್ನು ಮತ್ತು ರಕ್ಷಣಾ ಸಹ ಉತ್ಪಾದನೆ ಮತ್ತು ಸಹಅಭಿವೃದ್ಧಿಯಲ್ಲಿ ಉದ್ಯಮದ ಸಹಯೋಗಕ್ಕೆ ಅನುಕೂಲ ಕಲ್ಪಿಸಿದೆ ಎಂದು ಅಮೆರಿಕದ   ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವೆಬ್ಸೈಟ್ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News