ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ರಾಜಸ್ತಾನದ ರವಿ ಪ್ರಕಾಶ್ ಬಂಧನ: ಪೊಲೀಸ್
ಜೈಪುರ, ಅ. 8: ಪಾಕಿಸ್ತಾನದ ಗುಪ್ತಚರ ಏಜೆನ್ಸಿಗಳಿಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ 31 ವರ್ಷದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ದಿಲ್ಲಿಯ ಸೇನಾ ಭವನದ ಉದ್ಯೋಗಿಯಾಗಿರುವ ರಾಜಸ್ಥಾನದ ನಿವಾಸಿ ರವಿ ಪ್ರಕಾಶ್ ಮೀನಾ ಪಾಕಿಸ್ತಾನದ ಮಹಿಳೆಯೋರ್ವಳ ಹನಿ ಟ್ರಾಪ್‌ಗೆ ಒಳಗಾಗಿ ಈ ಬೇಹುಗಾರಿಕೆ ನಡೆಸಿದ್ದಾನೆ. ಭಾರತೀಯ ಸೇನೆಯ ಕುರಿತ ರಹಸ್ಯ ಹಾಗೂ ಕಾರ್ಯತಂತ್ರದ ಮಾಹಿತಿಯನ್ನು ಆತ ಮಹಿಳೆಯೊಂದಿಗೆ ಹಂಚಿಕೊಳ್ಳುತ್ತಿದ್ದ ಎಂದು ರಾಜಸ್ಥಾನ ಡಿಜಿಪಿ (ಬೇಹುಗಾರಿಕೆ) ಉಮೇಶ್ ಮಿಶ್ರಾ ತಿಳಿಸಿದ್ದಾರೆ.
ತನ್ನ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದ್ದ ಹಣಕ್ಕೆ ಪ್ರತಿಯಾಗಿ ಮೀನಾ ಸಾಮಾಜಿಕ ಮಾಧ್ಯಮದ ಮೂಲಕ ಮಾಹಿತಿಯನ್ನು ಮಹಿಳಾ ಏಜೆಂಟ್‌ಗೆ ತಲುಪಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪಾಕಿಸ್ತಾನದ ಏಜೆಂಟ್ ಆಗಿರುವ ಮಹಿಳೆ ತನ್ನನ್ನು ಅಂಜಲಿ ತಿವಾರಿ ಎಂದು ಪರಿಚಯಿಸಿಕೊಂಡಿದ್ದಾಳೆ ಹಾಗೂ ತಾನು ಪಶ್ಚಿಮಬಂಗಾಳದಲ್ಲಿ ನಿಯೋಜಿತಳಾಗಿರುವ ಭಾರತೀಯ ಸೇನೆಯ ಅಧಿಕಾರಿ ಎಂದು ಮೀನಾಗೆ ತಿಳಿಸಿದ್ದಾಳೆ ಎಂದು ಮಿಶ್ರಾ ಮಾಹಿತಿ ನೀಡಿದ್ದಾರೆ.ರಾಜಸ್ಥಾನದ ಕರೌಲಿ ಜಿಲ್ಲೆಯ ಸಪೂಟಾರಾದ ಮೀನಾನನ್ನು ಗುಪ್ತಚರ ಏಜೆನ್ಸಿ ವಿಚಾರಣೆ ನಡೆಸಿದೆ. ತಾಂತ್ರಿಕ ಪುರಾವೆ ಹಾಗೂ ಅಪರಾಧಕ್ಕೆ ಬಳಸಿದ ಮೊಬೈಲ್ ಫೋನ್ ಅನ್ನು ಪರಿಶೀಲಿಸಿದ ಬಳಿಕ ಆತನನ್ನು ಬಂಧಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.