×
Ad

ಮೀಸಲಾತಿ ಪ್ರಮಾಣ ಏರಿಕೆ ದಿಟ್ಟತನದ ನಿರ್ಧಾರ: ರಘುಪತಿ ಭಟ್

Update: 2022-10-09 19:45 IST

ಉಡುಪಿ, ಅ.9: ರಾಜ್ಯ ಸರಕಾರ ಅತ್ಯಂತ ದಿಟ್ಟ ನಿರ್ಧಾರ ಕೈಗೊಂಡು ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ.15ರಿಂದ 17ಕ್ಕೆ ಹಾಗೂ ಪ.ವರ್ಗದ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ 7ಕ್ಕೆ ಏರಿಕೆ ಮಾಡುವ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ದೊರೆಯುವಂತೆ ಮಾಡಿರುವುದು ಐತಿಹಾಸಿಕ ತೀರ್ಮಾನವಾಗಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಸಂಘಟನೆ ಸಹಯೋಗದಲ್ಲಿ ಇಂದು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಲಾದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣಾ ಸಮಾರಂಭದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡುತಿದ್ದರು.

ಜಗತ್ತಿಗೆ ಮಹಾನ್ ಮಾನವೀಯ ಮೌಲ್ಯಗಳನ್ನುಳ್ಳ ಸಂದೇಶ ಸಾರುವ ರಾಮಾಯಣ ಮಹಾಕಾವ್ಯವನ್ನು ಬರೆದಂತಹ ಮಹರ್ಷಿ ವಾಲ್ಮೀಕಿ ನಿತ್ಯ ಸ್ಮರಣಿಯರು. ಇಚ್ಛಾಶಕ್ತಿ ಮತ್ತು ಕಠಿಣ ಪರಿಶ್ರಮದ ಮೂಲಕ ಅತ್ಯುನ್ನತ ಸಾಧನೆಗಳನ್ನು ಮಾಡಬಹುದು ಎಂಬುದಕ್ಕೆ ವಾಲ್ಮೀಕಿ ಮಹರ್ಷಿಯೇ ಸಾಕ್ಷಿ. ಅವರ ಈ ಸಾಧನೆ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ವಾಲ್ಮೀಕಿ ಮಹರ್ಷಿಗಳು ರಾಮಾಯಣ ರಚನೆಯ ಮೂಲಕ ಭಾರತವನ್ನು ಪುಣ್ಯಭೂಮಿಯನ್ನಾಗಿ ಮಾಡಿದ್ದಾರೆ. ಅವರನ್ನು ನೆನದರೆ ಶ್ರೀರಾಮನನ್ನು ನೆನೆದಂತೆ, ಅವರು ರಚಿಸಿದ ರಾಮಾಯಣ ವನ್ನು ಪಠಣ ಮಾಡುವುದು, ವಿಷ್ಣು ಸಹಸ್ರನಾಮ ಪಠಣಕ್ಕೆ ಸಮವಾದುದು ಎಂದು ತಿಳಿಸಿದರು.

ಶ್ರೀ ಮಹರ್ಷಿ ವಾಲ್ಮೀಕಿ ಅವರ ವ್ಯಕ್ತಿತ್ವ ಮತ್ತು ಜೀವನದ ಬಗ್ಗೆ ಉಪನ್ಯಾಸ ನೀಡದ ಸಾಹಿತಿ ಮತ್ತು ಶಿಕ್ಷಕ ನರೇಂದ್ರ ಕುಮಾರ್ ಕೋಟ ಮಾತನಾಡಿ, ದುಷ್ಟನಾಗಿದ್ದ ರತ್ನಾಕರ ಎಂಬ ವ್ಯಕ್ತಿ ತನ್ನ ಜೀವನದಲ್ಲಿ ನಡೆದ ಒಂದು ಘಟನೆ ಯಿಂದ ಮಹರ್ಷಿ ವಾಲ್ಮೀಕಿಯಾಗಿ ರೂಪುಗೊಂಡರು. ಪ್ರತಿಯೊಬ್ಬರ ಬದುಕಿ ನಲ್ಲಿ ಒಂದು ತಿರುವು ಬರುತ್ತದೆ. ಅದರಿಂದ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳು ಸಾಧ್ಯವಾಗುತ್ತವೆ ಎಂದು ಹೇಳಿದರು.

ಪ.ವರ್ಗದ ಸಮುದಾಯದಲ್ಲಿ ವಿಶಿಷ್ಠ ಸಾಧನೆ ಮಾಡಿದ ಡಾ.ಉದಯ ಕುಮಾರ್ ಚೇರ್ಕಾಡಿ, ತೆಂಕುಮಾರ್ ನಾರಾಯಣಗೌಡ, ಸುರೇಶ್ ಎಳಜಿತ್ ಹಾಗೂ ಶೈಕ್ಷಣಿಕ ಮತ್ತು ಕ್ರೀಡಾ ವಲಯದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು. ಇಲಾಖೆಯ ವಿವಿಧ ಸವಲತ್ತುಗಳನ್ನು ಫಲಾನು ಭವಿಗಳಿಗೆ ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಪ್ರಭಾರ ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ, ಜಿಪಂ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್ ಉಪಸ್ಥಿತರಿದ್ದರು. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ದೂದ್‌ಪೀರ್ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News