ಕೋಟೇಶ್ವರ ಪುಷ್ಕರಣಿ ಸಮೀಪದ ಮನೆಗಳ ಬಾವಿ ನೀರು ಮಲೀನ
ಕುಂದಾಪುರ, ಅ.9: ಅಕ್ಕಿ ಮಿಲ್ ಒಂದರಿಂದ ಹೊರಬಿಡುವ ಕಲುಷಿತ ನೀರು ಸೇರಿ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೋಟಿತೀರ್ಥ ಪುಷ್ಕರಣಿಯ ಮೀನುಗಳು ಸಾಯುತ್ತಿರುವ ಘಟನೆ ನಡೆದ ಬೆನ್ನಲ್ಲೇ ಕೋಟಿತೀರ್ಥ ಸಮೀಪದ ಹಲವು ಮನೆಗಳ ಬಾವಿ ನೀರು ಮಲೀನಗೊಂಡಿರುವ ಬಗ್ಗೆ ವರದಿಯಾಗಿದೆ.
ಕಳೆದ ಕೆಲ ದಿನಗಳ ಹಿಂದಿನಿಂದ ಪುಷ್ಕರಣಿಯಲ್ಲಿ ಮೀನುಗಳು ಸಾಯುತ್ತಿ ರುವುದು ಮಾತ್ರವಲ್ಲದೆ ನೀರು ಕೂಡ ದಪ್ಪ, ರಾಡಿಯಾಗಿ ಪದರದಂತೆ ಗೋಚರಿಸುತ್ತಿತ್ತು. ಸ್ಥಳೀಯರ ಮನವಿಯಂತೆ ಗ್ರಾಪಂ ಸಂಬಂದಪಟ್ಟವರು ಭೇಟಿ ನೀಡಿದ್ದು ಬಳಿಕ ತಾ.ಪಂ, ಗ್ರಾ.ಪಂ ನಿಯೋಗ ಹಾಗೂ ಆರೋಗ್ಯ ಇಲಾಖೆ, ದೇವಸ್ಥಾನ ವ್ಯವಸ್ಥಾಪನ ಸಮಿತಿ ಕೂಡ ನೀರನ್ನು ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳಿಸಿತ್ತು. ಅಲ್ಲದೆ ಸಮೀಪದ ರೈಸ್ ಮಿಲ್‌ನ ನೀರು ಕೆರೆ ನೀರಿಗೆ ಹರಿದು ಈ ಸಮಸ್ಯೆಯಾಗುತ್ತಿಕುವ ದೂರಿನ ಹಿನ್ನೆಲೆ ಅದರ ಮುಖ್ಯಸ್ಥರನ್ನು ಕರೆದು ಕ್ರಮಕೈ ಗೊಳ್ಳುವಂತೆ ಸೂಚಿಸಲಾಗಿತ್ತು.
ಇದೀಗ ಕಳೆದೆರಡು ದಿನದಿಂದ ಈ ಪರಿಸರದ ಹತ್ತಾರು ಮನೆಗಳ ಬಾವಿ ನೀರು ಕಪ್ಪುಬಣ್ಣಕ್ಕೆ ತಿರುಗಿದ್ದು ಎಣ್ಣೆ ಜಿಡ್ಡಿನಂತೆ ನೀರಿನ ಮೇಲ್ಪದರದಲ್ಲಿ ಕಂಡು ಬರುತ್ತಿದೆ. ಚರಂಡಿ ಜೊತೆಗೆ ವಸತಿ ಪ್ರದೇಶದ ಕೃಷಿ ಭೂಮಿಯಲ್ಲಿ ಕಲುಷಿತ ನೀರು ನಿಂತಿದ್ದರಿಂದ ಬಾವಿ ನೀರು ಕೆಟ್ಟಿದ್ದು ಅನಾರೋಗ್ಯ ಭೀತಿ ಉಂಟಾಗಿದೆ. ಶೀಘ್ರ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
"ಕಲುಷಿತ ನೀರು ಬಿಡುವ ಕಾರಣದಿಂದ ಮಾಲಿನ್ಯದಿಂದಾಗಿ ದೇವಸ್ಥಾನದ ಪರಿಸರ ಹಾಗೂ ವಸತಿ ಪ್ರದೇಶದಲ್ಲಿ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಗ್ರಾಪಂಗೆ ಮನವಿ ನೀಡಿದ್ದು ಸ್ಥಳ ಪರಿಶೀಲನೆ ನಡೆಸಿದ್ದರು. ಇದೀಗ ಮನೆಗಳ ಬಾವಿ ನೀರು ಸಂಪೂರ್ಣ ಹಾಳಾಗಿದೆ. ಕುಡಿಯಲು ಹಾಗೂ ಇತರ ಬಳಕೆಗೂ ಅಸಾಧ್ಯ ವಾಗಿದೆ. ಸಂಬಂಧಪಟ್ಟ ಇಲಾಖೆ ಹಾಗೂ ಗ್ರಾಪಂ ಈ ಬಗ್ಗೆ ಕ್ರಮವಹಿಸಿ ಶಾಶ್ವತ ಪರಿಹಾರ ಮಾಡಬೇಕು".
-ಡಾ.ಕೆ.ಸೋಮಶೇಖರ್ ಉಡುಪ, ಸ್ಥಳೀಯರು
"ಕಳೆದ ಮೂರು ವರ್ಷಗಳಿಂದ ಈ ಸಮಸ್ಯೆ ಅನುಭವಿಸುತ್ತಲೇ ಬಂದಿದ್ದು ಮನೆಯಲ್ಲಿ ಮಕ್ಕಳು ಇರುವ ಕಾರಣ ಆತಂಕವಾಗುತ್ತದೆ. ಹಲವು ಬಾರಿ ಮನವಿ ನೀಡಿದ್ದೇವೆ. ಈ ಮೊದಲು ಮಿಲ್ಲಿನವರು ಅವರದ್ದೇ ಗದ್ದೆಗೆ ನೀರು ಬಿಡುತ್ತಿದ್ದಾಗ ಬಾವಿ ನೀರು ಹಾಳಾಗುತ್ತಿತ್ತು. ಈ ಬಗ್ಗೆ ಧ್ವನಿಯೆತ್ತಿದಾಗ ತಾತ್ಕಾಲಿಕವಾಗಿ ಸಮಸ್ಯೆ ಪರಿಹಾರವಾಗಿತ್ತು. ಆದರೆ ಕಳೆದೆರಡು ದಿನಗಳಿಂದ ಮತ್ತೆ ವಸತಿ ಪ್ರದೇಶದ ಭೂಮಿಯಲ್ಲಿ ಕಲುಷಿತ ನೀರು ನಿಂತ ಕಾರಣದಿಂದಾಗಿ ಬಾವಿ ನೀರು ಮಲೀನವಾಗಿ ನೀರು ಕುಡಿಯಲು ಅಸಾಧ್ಯವಾಗಿದೆ".
- ಕೆ.ರಘುರಾಮ ಉಡುಪ, ಸ್ಥಳೀಯರು