ಮಣಿಪಾಲ: ಪಾದಚಾರಿಗಳಿಗೆ ಕಾರು ಢಿಕ್ಕಿ: ಓರ್ವ ಮೃತ್ಯು, ನಾಲ್ವರಿಗೆ ಗಾಯ
ಮಣಿಪಾಲ, ಅ.9: ಕಾರೊಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ಮಪಾಲ ಸೆಂಟ್ರಲ್ ಪಾರ್ಕ್ ಹೋಟೇಲಿನ ಬಳಿ ಅ.9ರಂದು ಮಧ್ಯರಾತ್ರಿ ವೇಳೆ ನಡೆದಿದೆ.
ಮೃತರನ್ನು ಪಶ್ಚಿಮ ಬಂಗಾಳ ಮೂಲದ ಸಾಹಿನ್ ಎಸ್.ಕೆ.(18) ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ಸುಮಿತ್ ಜಸ್ವಾಲ್, ಸಂಸುಲ್ ಆರೀಫ್ ಹೋಕ್ಯೂ, ಲತೀಪುಲ್ ಚೌದುರಿ, ಸುಕ್ದೇಬ್ ಕರ್ಮಾಕರ್ ಎಂಬವರು ಗಾಯಗೊಂಡಿದ್ದಾರೆ. ಇವರೆಲ್ಲರು ಹೊಟೇಲ್ ಕಾರ್ಮಿಕರಾಗಿದ್ದಾರೆ.
ಉಡುಪಿ ಕಡೆಯಿಂದ ಮಣಿಪಾಲ ಕಡೆಗೆ ಬರುತ್ತಿದ್ದ ದೀಕ್ಷಿತ್ ಜಿ.ರಾಜ್ ಎಂಬಾತ ಚಲಾಯಿಸುತ್ತಿದ್ದ ಕಾರು ಕೆಲಸ ಬಿಟ್ಟು ಮನೆಗೆ ಹೋಗುತ್ತಿದ್ದ ಕಾರ್ಮಿಕರಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಬಳಿಕ ಪೆರ್ಡೂರಿನ ಸಂತೋಷ್ ಕುಲಾಲ್ ಎಂಬವರ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆಯಿತು. ನಂತರ ಚಾಲಕ, ಕಾರು ಸಮೇತ ಸ್ಥಳದಿಂದ ಪರಾರಿಯಾಗಿದ್ದನು ಎಂದು ತಿಳಿದುಬಂದಿದೆ.
ಅಪಘಾತದಿಂದ ಗಂಭೀರವಾಗಿ ಗಾಯಗೊಂಡ ಸಾಹಿನ್ ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.