ಮಾಂಸಹಾರ ಸೇವಿಸಿ ಗೋವಾ ಸಿಎಂ ಉಡುಪಿಯ ಕೃಷ್ಣ ಮಠಕ್ಕೆ ಭೇಟಿ: ರಮೇಶ್ ಕಾಂಚನ್ ಆರೋಪ
ಉಡುಪಿ, ಅ.9: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಉಡುಪಿಗೆ ಆಗಮಿಸಿದ ಸಂದರ್ಭದಲ್ಲಿ ಸರ್ಕ್ಯೂಟ್ ಹೌಸ್‌ನಲ್ಲಿ ಮಾಂಸಹಾರ ಸೇವಿಸಿ ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ಅವರೊಂದಿಗೆ ಬಿಜೆಪಿಯ ಶಾಸಕ ರಘುಪತಿ ಭಟ್ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಜತೆಗಿದ್ದರು. ಸಿದ್ದರಾಮಯ್ಯ ಮಾಂಸಹಾರ ಸೇವಿಸಿ ದೇವಸ್ಥಾನಕ್ಕೆ ಹೋಗುತ್ತಾರೆಂದು ಗುಲ್ಲೆಬ್ಬಿಸುವ ಇವರಿಗೆ ಗೋವಾದ ಮುಖ್ಯಮಂತ್ರಿ ಮಾಂಸಹಾರ ಸೇವಿಸಿ ಕೃಷ್ಣ ಮಠಕ್ಕೆ ಭೇಟಿ ನೀಡಿರುವುದು ಕಾಣುವುದಿಲ್ಲವೇ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಪ್ರಶ್ನಿಸಿದ್ದಾರೆ.
ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ ಹಿರಿಯ ಯತಿಗಳಿಂದ ಪ್ರಸಾದ ಸ್ವೀಕರಿಸಿದ ಗೋವಾ ಮುಖ್ಯಮಂತ್ರಿ ಮಾಂಸಹಾರ ಸೇವಿಸಿ ಭೇಟಿ ನೀಡಿದ್ದನ್ನು ಬಿಜೆಪಿ ಯಾಕೆ ಪ್ರಶ್ನಿಸುತ್ತಿಲ್ಲ ? ಈಗ ಮಠ ಅಪವಿತ್ರವಾಗುವುದಿಲ್ಲವೇ? ಸಿದ್ದರಾಮಯ್ಯರನ್ನು ಗುರಿಯಾಗಿಸಿಕೊಂಡು ಅವರ ವಿರುದ್ಧ ಅಪಪ್ರಚಾರ ಮಾಡುವ ಬಿಜೆಪಿಯವರು ಇದೀಗ ಜನರಿಗೆ ಏನೆಂದು ಉತ್ತರಿಸುತ್ತಾರೆ ಎಂದು ಅವರು ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.