×
Ad

ರೈಲಿನ ಹಳೆಯ ಡಬ್ಬಕ್ಕೆ ಬಣ್ಣ ಬಳಿದು ಒಡೆಯರ್‌ಗೆ ಅವಮಾನ: ಯುಟಿ ಖಾದರ್

Update: 2022-10-09 21:45 IST

ಮಂಗಳೂರು, ಅ.9: ಮೈಸೂರಿನ ಒಡೆಯರ್ ಕುಟುಂಬವು ನಾಡಿಗೆ ನೀಡಿದ ಕೊಡುಗೆ ಅಪಾರ. ಆದರೆ ಬಿಜೆಪಿ ಸರಕಾರವು ರೈಲಿನ ಹಳೆಯ ಡಬ್ಬಕ್ಕೆ ಬಣ್ಣ ಬಳಿದು ಅದಕ್ಕೆ ಒಡೆಯರ್ ಎಂದು ನಾಮಕರಣ ಮಾಡಿ ಒಡೆಯರ್ ಮನೆತನಕ್ಕೆ ಅವಮಾನ ಮಾಡಿದೆ ಎಂದು ರಾಜ್ಯ ವಿಧಾನ ಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಟೀಕಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಟಿಪ್ಪು ಹೆಸರು ಲಂಡನ್, ಫ್ರಾನ್ಸ್ ಸಹಿತ ವಿಶ್ವದಾದ್ಯಂತ ರಾರಾಜಿಸುತ್ತಿದೆ. ಒಡೆಯರ್ ಕುಟುಂಬವು ನಾಡಿನ ಗೌರವದ ಸಂಕೇತವಾಗಿದೆ. ಹೊಸ ರೈಲು ಮಾರ್ಗ ಮತ್ತು ರೈಲು ತರಲು ಯೋಗ್ಯತೆ ಇಲ್ಲದ ಬಿಜೆಪಿ ಸರಕಾರ ಒಡೆಯರ್ ಹೆಸರನ್ನು ರೈಲಿನ ಹಳೆಯ ಡಬ್ಬಕ್ಕೆ ಇರಿಸಿದೆ. ಒಡೆಯರ್‌ಗೆ ಗೌರವ ನೀಡಲು ಬಿಜೆಪಿ ಸರಕಾರಕ್ಕೆ ಮನಸ್ಸಿದ್ದರೆ ಹೊಸ ರೈಲು ತಂದು ಅವರ ಹೆಸರು ಹಾಕಲಿ. ಅದು ಬಿಟ್ಟು ಸೂಕ್ಷ್ಮ ವಿಚಾರದ ಮೂಲಕ ರಾಜಕೀಯ ಲಾಭ ಪಡೆಯಲು ಒಡೆಯರ್ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸುವುದು ಖಂಡನೀಯ. ಒಡೆಯರ್‌ರನ್ನು ಸಂಸದ ಮಾಡಿದ ಹಿರಿಮೆ ಕಾಂಗ್ರೆಸ್‌ನದ್ದಾಗಿದೆ ಎಂದು ತಿಳಿಸಿದರು.

ರಾಹುಲ್ ಗಾಂಧಿಯ ಭಾರತ ಐಕ್ಯತಾ ರ‍್ಯಾಲಿಯ ಯಶಸ್ಸನ್ನು ಸಹಿಸದ ಬಿಜೆಪಿಯು ಒಂದೇ ದಿನ ನಾಲ್ಕು ದಿನಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡಿದೆ ಎಂದ ಖಾದರ್, ಪುಲ್ವಾಮಾದಲ್ಲಿ 80ಕ್ಕೂ ಅಧಿಕ ಸೈನಿಕರು ಪಾಕಿಸ್ತಾನದ ಭಯೋತ್ಪಾದಕರಿಂದ ಹತ್ಯೆಗೀಡಾದಾಗ ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಎಲ್ಲಿದ್ದರು ಎಂದು ಪಶ್ನಿಸಿದರು.

250 ಕೆ.ಜಿ. ಆರ್‌ಡಿಎಕ್ಸ್ ತುಂಬಿದ್ದ ವಾಹನವು ಎಲ್ಲಾ ಭದ್ರತೆಗಳನ್ನೂ ದಾಟಿ ಸೈನಿಕರ ಬಸ್ ಬರುವಾಗಲೇ ಬಂದು ತಲುಪಿದ್ದು ಹೇಗೆ ? ಗುಪ್ತಚರ ಇಲಾಖೆಯು ನಿಮ್ಮ ಕೈಯಲ್ಲಿದ್ದರೂ ನಿಮಗೇಕೆ ಮಾಹಿತಿ ಸಿಕ್ಕಿಲ್ಲ. ಯಾವಾಗಲೂ ಹೆಲಿಕಾಪ್ಟರ್‌ನಲ್ಲಿ ಹೋಗುತ್ತಿದ್ದ ಸೈನಿಕರು ಅಂದು ಬಸ್ಸಲ್ಲಿ ಹೋಗಿದ್ದೇಕೆ ? ಈ ಬಗ್ಗೆ ಇನ್ನೂ ತನಿಖೆ ಆಗದಿರುವುದೇಕೆ ? ಯಾರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ? ಆರ್‌ಡಿಎಕ್ಸ್ ಬಂದ ವಾಹನ ಭಾರತದ್ದಾ, ಪಾಕಿಸ್ತಾನದ್ದಾ ? ಎಂಬುದನ್ನು ಕೇಂದ್ರ ಸರಕಾರ ಬಹಿರಂಗಪಡಿಸಬೇಕು ಎಂದು ಖಾದರ್  ಒತ್ತಾಯಿಸಿದರು.

ತುರ್ತು ಸೇವೆಯಾಗಿದ್ದ 108 ಆ್ಯಂಬುಲೆನ್ಸ್‌ಗೆ ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡದ ಕಾರಣ ಚಾಲಕ, ದಾದಿಯರಿಗೆ ಮೂರು ತಿಂಗಳ ವೇತನ ಸಿಕ್ಕಿಲ್ಲ. ಕೆಲವು ಕಡೆ ಆ್ಯಂಬುಲೆನ್ಸ್ ಇದ್ದರೂ ಕೂಡ ಚಾಲಕರಿಲ್ಲದೆ ನಿಷ್ಪ್ರಯೋಜಕವಾಗಿದೆ. ನಗರ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಬೈಕ್ ಆ್ಯಂಬುಲೆನ್ಸ್ ನಿಲ್ಲಿಸಲಾಗಿದೆ ಎಂದ ಖಾದರ್, ಆನ್‌ಲೈನ್‌ನಲ್ಲಿ ಅರ್ಜಿ ಹಾಕಿಸಿ ಅಂಚೆ ಮೂಲಕ ಪಡಿತರ ಚೀಟಿ ತಲುಪಿಸುವ ವ್ಯವಸ್ಥೆಯನ್ನು ಕಾಂಗ್ರೆಸ್ ಸರಕಾರ ಮಾಡಿಕೊಟ್ಟಿದ್ದರೂ ಬಿಜೆಪಿ ಅದನ್ನು ರದ್ದುಗೊಳಿಸಿದೆ ಎಂದು ಖಾದರ್ ಕಿಡಿಕಾರಿದರು.

ರಾಜ್ಯ ಬಿಜೆಪಿ ಸರಕಾರ ಜಿಪಂ, ತಾಪಂ  ಚುನಾವಣೆ ನಡೆಸದೆ ಅನ್ಯಾಯ ಎಸಗಿದೆ. ಗ್ರಾಪಂನ ಅಧಿಕಾರವನ್ನೂ ಮೊಟಕುಗೊಳಿಸಲಾಗಿದೆ. ಗ್ರಾಪಂ ಯೋಜನೆ ಬಗ್ಗೆ ಆದೇಶ ಹೊರಡಿಸಿರುವ ಸರಕಾರ ಯಾವ ಕಂಪೆನಿಯಿಂದ ಸಾಮಗ್ರಿ ಖರೀದಿಸಬೇಕು ಎಂಬುದನನೂ ನಿಗದಿಪಡಿಸಿದೆ. ಪ್ರತೀ ಗ್ರಾಪಂನಲ್ಲಿ ಧ್ವಜಸ್ತಂಭಕ್ಕೆ 3.50 ಲಕ್ಷ ರೂ. ಲಕ್ಷ ಮೀಸಲಿಡುವಂತೆ ಸೂಚಿಸಲಾಗಿದೆ. ಅದನ್ನೂ ಒಂದೇ ಕಂಪೆನಿಗೆ ಕೊಡಬೇಕು ಎಂಬ ಫರ್ಮಾನು ಹೊರಡಿಸಿದೆ ಎಂದು ಖಾದರ್ ಆರೋಪಿಸಿದರು.

ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂಬುದು ಕಾಂಗ್ರೆಸ್‌ನ ನಿಯಮವಾಗಿದೆ. ಅದರಂತೆ ಎಸ್ಸಿ-ಎಸ್ಟಿ ಸಮುದಾಯದ ಮೀಸಲಾತಿ ಕುರಿತಂತೆ ರಚಿಸಲಾಗಿದ್ದ ಸಮಿತಿಯು 2020ರಲ್ಲಿ ವರದಿ ನೀಡಿದ್ದರೂ ಬಿಜೆಪಿ ಸರಕಾರ ಕ್ರಮ ಕೈಗೊಂಡಿರಲಿಲ್ಲ. ಈ ಬಗ್ಗೆ ಎರಡು ಅಧಿವೇಶನಗಳಲ್ಲಿ ಚರ್ಚೆಗೆ ಅವಕಾಶವನ್ನೂ ನೀಡಲಿಲ್ಲ, ಮೊನ್ನೆಯ ಅಧಿವೇಶನದಲ್ಲಿ ಕಾಂಗ್ರೆಸ್ ಧರಣಿ ಮಾಡಿದ್ದರಿಂದ ಮೀಸಲಾತಿ ಹೆಚ್ಚಿಸಲಾಗಿದೆ ಎಂದು ಖಾದರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಮುಖಂಡರಾದ ಉಸ್ಮಾನ್ ಕಲ್ಲಾಪು, ಝಕರಿಯಾ ಮಲಾರ್, ಕಳ್ಳಿಗೆ ತಾರಾನಾಥ ಶೆಟ್ಟಿ, ಪಿಯುಸ್ ಮೊಂತೆರೋ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News