2 ವರ್ಷಗಳಲ್ಲಿ ಸುಪ್ರೀಂ ಕೋರ್ಟ್‌ನ 18 ನ್ಯಾಯಾಧೀಶ ಹುದ್ದೆಗಳು ಖಾಲಿ!

Update: 2022-10-10 06:34 GMT

ಲಲಿತ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಹಾಲಿ ಕೊಲೀಜಿಯಮ್‌ಗೆ ಎರಡು ಕಾರಣಗಳಿಗಾಗಿ ಸುಪ್ರೀಂ ಕೋರ್ಟ್‌ಗೆ ಹೊಸ ನ್ಯಾಯಾಧೀಶರನ್ನು ನೇಮಕ ಮಾಡಲು ಸಾಧ್ಯವಾಗಲಾರದು. ಮೊದಲನೆಯದು, ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ವಿಧಿವಿಧಾನಗಳಿಗೆ ಸಂಬಂಧಿಸಿ ಕೊಲೀಜಿಯಮ್‌ನ ಸದಸ್ಯರಲ್ಲಿ ಉಂಟಾಗಿರುವ ಬಿಕ್ಕಟ್ಟು ಹಾಗೂ ಎರಡನೆಯದು, ನಿರ್ಗಮನ ಮುಖ್ಯ ನ್ಯಾಯಾಧೀಶರು ನಿವೃತ್ತಿಗೊಳ್ಳಲು ಒಂದು ತಿಂಗಳಿರುವಾಗ ಹೊಸ ನೇಮಕಾತಿಗಳ ಬಗ್ಗೆ ಚರ್ಚಿಸಲು ಯಾವುದೇ ಸಭೆಯನ್ನು ನಡೆಸದಿರುವ ಹಳೆಯ ಸಂಪ್ರದಾಯ.

ಸುಪ್ರೀಂ ಕೋರ್ಟ್‌ನಲ್ಲಿ ಈಗ ಇರುವ ಖಾಲಿ ಹುದ್ದೆಗಳನ್ನು ತುಂಬುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೊಲೀಜಿಯಮ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟು ವಾಸ್ತವಿಕವಾಗಿ ನೂತನ ನೇಮಕಾತಿಗಳನ್ನೇ ತಡೆಹಿಡಿದಿದೆ. ಅದೇ ವೇಳೆ, ಮುಂದಿನ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನೂತನ ಕೊಲೀಜಿಯಮ್‌ಗೆ 18 ಖಾಲಿ ಸ್ಥಾನಗಳನ್ನು ತುಂಬಲು ಎರಡು ವರ್ಷಗಳ ಕಾಲಾವಕಾಶವಿದೆ.

ಈ 18 ಖಾಲಿ ಸ್ಥಾನಗಳ ಪೈಕಿ ನಾಲ್ಕು ಈಗಾಗಲೇ ಇವೆ ಹಾಗೂ ಉಳಿದ 14 ಈ ವರ್ಷದ ಅಕ್ಟೋಬರ್ ಮತ್ತು 2024 ಸೆಪ್ಟಂಬರ್ ನಡುವಿನ ಅವಧಿಯಲ್ಲಿ ಸೃಷ್ಟಿಯಾಗುತ್ತವೆ.

ನ್ಯಾಯಮೂರ್ತಿ ಚಂದ್ರಚೂಡ್ ನವೆಂಬರ್ 9ರಂದು ಭಾರತದ 50ನೇ ಮುಖ್ಯ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸರಿಯಾಗಿ ಎರಡು ವರ್ಷಗಳ ಬಳಿಕ, ಅಂದರೆ 2024 ನವೆಂಬರ್ 10ರಂದು ಅವರು ನಿವೃತ್ತರಾಗಲಿದ್ದಾರೆ. ಈ ಅವಧಿಯಲ್ಲಿ 14 ನ್ಯಾಯಾಧೀಶರ ಹುದ್ದೆಗಳು ಖಾಲಿ ಬೀಳುತ್ತವೆ. ಅವುಗಳ ಪೈಕಿ ಎರಡು ಈ ವರ್ಷದ ಕೊನೆಯ ವೇಳೆಗೆ ಖಾಲಿಯಾದರೆ, 2023ರಲ್ಲಿ ಒಂಭತ್ತು ಮತ್ತು 2024ರಲ್ಲಿ ಮೂರು ಹುದ್ದೆಗಳು ಖಾಲಿಯಾಗುತ್ತವೆ. ಕೊನೆಯ ಖಾಲಿ ಹುದ್ದೆಯು ಅವರು ನಿವೃತ್ತರಾಗಲಿರುವ ಕೇವಲ ಎರಡು ತಿಂಗಳ ಮೊದಲು, ಅಂದರೆ 2024 ಸೆಪ್ಟಂಬರ್‌ನಲ್ಲಿ ಸಂಭವಿಸುತ್ತದೆ.

ಸುಪ್ರೀಂ ಕೋರ್ಟ್‌ಗೆ ಮಂಜೂರಾಗಿರುವ ನ್ಯಾಯಾಧೀಶರ ಸಂಖ್ಯೆ 34. ಅಲ್ಲಿ ಈಗ ಕೆಲಸ ಮಾಡುತ್ತಿರುವ ನ್ಯಾಯಾಧೀಶರ ಸಂಖ್ಯೆ 29. ಇನ್ನೊಂದು ತಿಂಗಳಲ್ಲಿ, ಹಾಲಿ ಮುಖ್ಯ ನ್ಯಾಯಾಧೀಶ ಯು.ಯು. ಲಲಿತ್ ಸೇರಿದಂತೆ ಇನ್ನಿಬ್ಬರು ನ್ಯಾಯಾಧೀಶರು ನಿವೃತ್ತರಾಗಲಿದ್ದು, ನ್ಯಾಯಾಲಯದ ಒಟ್ಟು ನ್ಯಾಯಾಧೀಶರ ಸಂಖ್ಯೆ 27ಕ್ಕೆ ಇಳಿಯಲಿದೆ.

ಲಲಿತ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಹಾಲಿ ಕೊಲೀಜಿಯಮ್‌ಗೆ ಎರಡು ಕಾರಣಗಳಿಗಾಗಿ ಸುಪ್ರೀಂ ಕೋರ್ಟ್‌ಗೆ ಹೊಸ ನ್ಯಾಯಾಧೀಶರನ್ನು ನೇಮಕ ಮಾಡಲು ಸಾಧ್ಯವಾಗಲಾರದು. ಮೊದಲನೆಯದು, ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ವಿಧಿವಿಧಾನಗಳಿಗೆ ಸಂಬಂಧಿಸಿ ಕೊಲೀಜಿಯಮ್‌ನ ಸದಸ್ಯರಲ್ಲಿ ಉಂಟಾಗಿರುವ ಬಿಕ್ಕಟ್ಟು ಹಾಗೂ ಎರಡನೆಯದು, ನಿರ್ಗಮನ ಮುಖ್ಯ ನ್ಯಾಯಾಧೀಶರು ನಿವೃತ್ತಿಗೊಳ್ಳಲು ಒಂದು ತಿಂಗಳಿರುವಾಗ ಹೊಸ ನೇಮಕಾತಿಗಳ ಬಗ್ಗೆ ಚರ್ಚಿಸಲು ಯಾವುದೇ ಸಭೆಯನ್ನು ನಡೆಸದಿರುವ ಹಳೆಯ ಸಂಪ್ರದಾಯ.

ಲಲಿತ್ ಅಧಿಕಾರಾವಧಿಯ ಕೊನೆಯ ದಿನ ನವೆಂಬರ್ 8. ಅಂದರೆ, ಅಕ್ಟೋಬರ್ 7ರ ಬಳಿಕ ನೇಮಕಾತಿಗಳ ಬಗ್ಗೆ ಚರ್ಚಿಸುವ ಯಾವುದೇ ಸಭೆಯನ್ನು ಅವರು ಕರೆಯಲಾರರು. ಅದೂ ಅಲ್ಲದೆ, ನ್ಯಾಯಾಲಯಗಳು ಕೆಲವು ದಿನಗಳಿಂದ ದಸರಾ ರಜೆಯಲ್ಲಿವೆ. ಅವುಗಳು ಅಕ್ಟೋಬರ್ 10ರ ಬಳಿಕವಷ್ಟೇ ಕೆಲಸ ಆರಂಭಿಸುತ್ತವೆ.

ಈ ನಡುವೆ, ಮುಂದಿನ ಮುಖ್ಯ ನ್ಯಾಯಾಧೀಶರನ್ನು ನೇಮಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ಉತ್ತರಾಧಿಕಾರಿಯನ್ನು ಶಿಫಾರಸು ಮಾಡುವಂತೆ ಕೋರಿ ನಿರ್ಗಮನ ಮುಖ್ಯ ನ್ಯಾಯಾಧೀಶ ಲಲಿತ್‌ಗೆ ಪತ್ರ ಬರೆದಿದ್ದಾರೆ.

ನಿವೃತ್ತಿಗೆ ಒಂದು ತಿಂಗಳಿರುವಾಗ ನೂತನ ನೇಮಕಾತಿಗಳನ್ನು ಮಾಡುವಂತಿಲ್ಲ ಎಂಬ ನಿಯಮವನ್ನು ಉಲ್ಲೇಖಿಸಿ, ತನ್ನ ಅಧಿಕಾರಾವಧಿಯ ಕೊನೆಯಲ್ಲಿ ನೂತನ ನೇಮಕಾತಿಗಳನ್ನು ಮಾಡದಂತೆ ಹಿಂದಿನ ಮುಖ್ಯ ನ್ಯಾಯಾಧೀಶ ಎನ್.ವಿ. ರಮಣರನ್ನು ಅವರ ಸಹೋದ್ಯೋಗಿಗಳು ತಡೆದಿದ್ದರು. ಅದೇ ರೀತಿ, ಸುಪ್ರೀಂ ಕೋರ್ಟ್‌ಗೆ ನೂತನ ನ್ಯಾಯಾಧೀಶರ ಹೆಸರುಗಳನ್ನು ತನ್ನ ಅಧಿಕಾರಾವಧಿಯ ಕೊನೆಯಲ್ಲಿ ಅಂತಿಮಗೊಳಿಸದಂತೆ 2021 ಎಪ್ರಿಲ್‌ನಲ್ಲಿ ಅಂದಿನ ಮುಖ್ಯ ನ್ಯಾಯಾಧೀಶ ಎಸ್.ಎ. ಬೋಬ್ಡೆಯನ್ನು ಕೊಲೀಜಿಯಮ್‌ನ ಇತರ ಸದಸ್ಯರು ತಡೆದಿದ್ದರು.

ಆ ಎರಡೂ ಸಂದರ್ಭಗಳಲ್ಲಿ, ಹಾಲಿ ಮುಖ್ಯ ನ್ಯಾಯಾಧೀಶ ಲಲಿತ್ ಕೊಲೀಜಿಯಮ್‌ನ ಸದಸ್ಯರಾಗಿದ್ದರು. ಸುಪ್ರೀಂ ಕೋರ್ಟ್ ಕೊಲೀಜಿಯಮ್ ಎಂದರೆ ಸುಪ್ರೀಂ ಕೋರ್ಟ್‌ನ ಅತಿ ಹಿರಿಯ ಐವರು ನ್ಯಾಯಾಧೀಶರನ್ನು ಒಳಗೊಂಡ ಉನ್ನತಾಧಿಕಾರದ ನೇಮಕಾತಿ ಮಂಡಳಿ.

ಸಿಜೆಐ ಲಲಿತ್ ಪ್ರಸ್ತಾವಕ್ಕೆ ಕೊಲೀಜಿಯಮ್ ವಿರೋಧ

ಹೊಸ ನ್ಯಾಯಾಧೀಶರ ನೇಮಕಾತಿಗಳ ವಿಷಯದಲ್ಲಿ ಕೊಲೀಜಿಯಮ್ ಸದಸ್ಯರ ನಡುವಿನ ಭಿನ್ನಾಭಿಪ್ರಾಯಗಳು ಕಳೆದ ವಾರ ಬೆಳಕಿಗೆ ಬಂದವು. ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನಾಲ್ವರಿಗೆ ಭಡ್ತಿ ನೀಡಲು ಕೊಲೀಜಿಯಮ್‌ನ ಸದಸ್ಯರು ಲಿಖಿತ ಅನುಮತಿ ನೀಡಬೇಕು ಎಂಬ ಮುಖ್ಯ ನ್ಯಾಯಾಧೀಶ ಲಲಿತ್‌ರ ‘ಅಭೂತಪೂರ್ವ’ ಪ್ರಸ್ತಾವಕ್ಕೆ ಕೊಲೀಜಿಯಮ್‌ನ ಇಬ್ಬರು ಸದಸ್ಯರು ವಿರೋಧ ವ್ಯಕ್ತ ಪಡಿಸಿದ್ದರು.

ಸಮ್ಮೇಳನವೊಂದರಲ್ಲಿ ಭಾಗವಹಿಸುವುದಕ್ಕಾಗಿ ಜರ್ಮನಿಯ ಮ್ಯೂನಿಕ್‌ಗೆ ತೆರಳುವ ಮೊದಲು, ಅಂದರೆ ಸೆಪ್ಟಂಬರ್ 30ರಂದು, ಸುಪ್ರೀಂ ಕೋರ್ಟ್‌ನಲ್ಲಿ ಈಗ ಇರುವ ನಾಲ್ಕು ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಬೇಕು ಎಂದು ಕೋರಿ ಸಿಜೆಐ ಲಲಿತ್ ಕೊಲೀಜಿಯಮ್ ಸದಸ್ಯರಿಗೆ ಪತ್ರವೊಂದನ್ನು ಬರೆದಿದ್ದರು. ಹಾಲಿ ಕೊಲೀಜಿಯಮ್‌ನಲ್ಲಿರುವ ನಾಲ್ವರು ನ್ಯಾಯಾಧೀಶರ ಪೈಕಿ ಒಬ್ಬರು ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿದರೆ, ಇಬ್ಬರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ನಾನೀಗ ನಗರದಿಂದ ಹೊರಗಿದ್ದು, ಹೊಸದಿಲ್ಲಿಗೆ ಮರಳಿದ ಬಳಿಕವಷ್ಟೇ ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ ಎಂಬುದಾಗಿ ನಾಲ್ಕನೆಯವರು ಹೇಳಿದರು.

ಉನ್ನತ ಸಾಂವಿಧಾನಿಕ ಹುದ್ದೆಗಳಿಗೆ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇಮಕಾತಿಯನ್ನು ಯಾವತ್ತೂ ಸುತ್ತೋಲೆಯ ಮೂಲಕ ನಡೆಸಬಾರದು ಎಂಬುದಾಗಿ ಈ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿರುವ ಇಬ್ಬರು ನ್ಯಾಯಾಧೀಶರು ಹೇಳಿದ್ದಾರೆ. ಉನ್ನತ ನ್ಯಾಯಾಲಯದ ನೇಮಕಾತಿಗಳಿಗೆ ಸಂಬಂಧಿಸಿ, ಒಟ್ಟಿಗೆ ಕುಳಿತು ಮಾತುಕತೆಗಳನ್ನು ನಡೆಸಿ ಒಮ್ಮತಕ್ಕೆ ಬರುವ ದೀರ್ಘಕಾಲೀನ ಸಂಪ್ರದಾಯವೇ ಏಕೈಕ ವಿಧಾನ ಎಂಬುದಾಗಿ ಅವರು ವಾದಿಸಿದ್ದಾರೆ.

ಅದೂ ಅಲ್ಲದೆ, ಲಲಿತ್ ಕೈಗೆತ್ತಿಕೊಂಡಿರುವ ವಿಧಾನವು ‘ಸಾಂವಿಧಾನಿಕವಾಗಿ ದೋಷಪೂರ್ಣವಾಗಿದೆ’’ ಎಂಬುದಾಗಿ ತಾವು ಭಾವಿಸಿರುವುದಾಗಿಯೂ ಅವರು ಹೇಳಿದ್ದಾರೆ. ಆದಾಗ್ಯೂ, ಮುಖ್ಯ ನ್ಯಾಯಾಧೀಶರು ಸೂಚಿಸಿರುವ ಹೆಸರುಗಳಿಗೆ ತಮ್ಮದೇನೂ ಅಭ್ಯಂತರವಿಲ್ಲ ಎಂಬುದಾಗಿಯೂ ಅವರು ಹೇಳಿದ್ದಾರೆ.

ತಮ್ಮ ನಿಲುವುಗಳನ್ನು ಮರುಪರಿಶೀಲಿಸುವಂತೆ ಕೋರಿ ಲಲಿತ್ ಇನ್ನೊಂದು ಪತ್ರವನ್ನು ಬರೆದರೂ, ಈ ಇಬ್ಬರು ನ್ಯಾಯಾಧಿಶರು ಅದಕ್ಕೆ ಇನ್ನೂ ತಮ್ಮ ಪ್ರತಿಕ್ರಿಯೆಯನ್ನು ನೀಡಿಲ್ಲ ಎನ್ನಲಾಗಿದೆ.

ತಾನು ಸೂಚಿಸಿರುವ ನಾಲ್ವರು ನ್ಯಾಯಾಧೀಶರ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ ಎಂಬುದಾಗಿ ಲಲಿತ್ ಹೇಳಿದರೆ, ಅದರ ವಿರುದ್ಧ ನಿಲುವನ್ನು ಕೊಲೀಜಿಯಮ್‌ನ ಕೆಲವು ಸದಸ್ಯರು ವ್ಯಕ್ತಪಡಿಸಿದ್ದಾರೆ. ಹಿಂದಿನ ಸಭೆಗಳಲ್ಲಿ 11 ಹೆಸರುಗಳನ್ನು ಚರ್ಚಿಸಲಾಗಿತ್ತು ಹಾಗೂ ಆ ಅಭ್ಯರ್ಥಿಗಳು ಬರೆದಿರುವ ತೀರ್ಪುಗಳನ್ನು ವೌಲ್ಯಮಾಪನಕ್ಕಾಗಿ ಕೊಲೀಜಿಯಮ್‌ನ ಸದಸ್ಯರಿಗೆ ಒದಗಿಸಲಾಗಿತ್ತು. ಆದರೆ, ಕೆಲಸದ ಒತ್ತಡದಿಂದಾಗಿ ಅವುಗಳನ್ನು ಪರಿಶೀಲಿಸಲು ಇತರ ಸದಸ್ಯರಿಗೆ ಸಾಧ್ಯವಾಗಿಲ್ಲ ಎಂದು ಇತರ ಸದಸ್ಯರು ಹೇಳಿದ್ದಾರೆ.

ಕೃಪೆ: theprint.in

Writer - ಭದ್ರಾ ಸಿನ್ಹಾ

contributor

Editor - ಭದ್ರಾ ಸಿನ್ಹಾ

contributor

Similar News