ದಿಲ್ಲಿ ಗಲಭೆಯಲ್ಲಿ ತಾನು ಶಾಮೀಲಾದ ಕುರಿತು ವಿರಾಟ್ ಹಿಂದೂ ಸಭಾದಲ್ಲಿ ಸುಳಿವು ನೀಡಿದ ಬಿಜೆಪಿ ಶಾಸಕ

Update: 2022-10-10 10:59 GMT
ಬಿಜೆಪಿ ಶಾಸಕ ನಂದ ಕಿಶೋರ್ ಗುರ್ಜರ್ (Photo: Twitter/@nkgurjar4bjp)

ಹೊಸದಿಲ್ಲಿ: ರವಿವಾರ ವಿಶ್ವ ಹಿಂದೂ ಪರಿಷದ್‍ನ ಸ್ಥಳೀಯ ಘಟಕ ಮತ್ತು ಹಲವು ಹಿಂದುತ್ವ ಸಂಘಟನೆಗಳು ಗಾಝಿಯಾಬಾದ್‍ನಲ್ಲಿ ಆಯೋಜಿಸಿದ್ದ ವಿರಾಟ್ ಹಿಂದು ಸಭಾದಲ್ಲಿ ಲೋನಿ ಕ್ಷೇತ್ರದ ಬಿಜೆಪಿ ಶಾಸಕ ನಂದ ಕಿಶೋರ್ ಗುರ್ಜರ್ ಅವರು ತಾವು 2020 ರ ಈಶಾನ್ಯ ದಿಲ್ಲಿ ಹಿಂಸಾಚಾರದಲ್ಲಿ ಶಾಮೀಲಾಗಿರುವುದನ್ನು ಒಪ್ಪಿಕೊಳ್ಳುವಂತೆ ತೋರುವ ಮಾತುಗಳನ್ನಾಡಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎಂದು indianexpress.com ವರದಿ ಮಾಡಿದೆ.

"ನಾವು ಯಾರಿಗೂ ಕಿರಕುಳ ನೀಡುವುದಿಲ್ಲ, ಆದರೆ ಯಾರಾದರೂ ನಮ್ಮ ತಾಯಂದಿರು, ಸೋದರಿಯರಿಗೆ ಕಿರುಕುಳ ನೀಡಿದರೆ ಅವರನ್ನು ಬಿಡುವುದಿಲ್ಲ. ದಿಲ್ಲಿಯಲ್ಲಿ ಸಿಎಎ ಕಾರಣ ಹಿಂಸಾಚಾರ ನಡೆಯಿತು. ಆ ಸಂದರ್ಭ ಈ ಜಿಹಾದಿಗಳು ಹಿಂದೂಗಳನ್ನು ಕೊಲ್ಲಲು ಆರಂಭಿಸಿದ್ದರು...  ನೀವು ಅಲ್ಲಿದ್ದಿರಿ. ನೀವು ನಮಗೆ ಒಳಗೆ ಅನುಮತಿಸಿದಿರಿ. ದಿಲ್ಲಿಗೆ 2.5 ಲಕ್ಷ ಜನರನ್ನು ಕರೆತಂದ ಆರೋಪ ನಮ್ಮ ಮೇಲೆ ಹೊರಿಸಲಾಗಿತ್ತು. ನಾವು ವಿವರಣೆ ನೀಡಲಷ್ಟೇ ಹೋಗಿದ್ದರೆ ಪೊಲೀಸರು ಜಿಹಾದಿಗಳ ಹತ್ಯೆಗೆ ನಮ್ಮ ವಿರುದ್ಧ ಪ್ರಕರಣ ದಾಖಲಿಸಿದರು. ನಾವು ಜಿಹಾದಿಗಳನ್ನು ಕೊಲ್ಲುತ್ತೇವೆ. ಯಾವಾಗಲೂ ಕೊಲ್ಲುತ್ತೇವೆ...''ಎಂದು ಹೇಳುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತದೆ.

ರವಿವಾರ ನಡೆದ ಈ ಕಾರ್ಯಕ್ರಮದಲ್ಲಿ ಹಲವು ವಿಹಿಂಪ ಮತ್ತು ಬಿಜೆಪಿ ನಾಯಕರು ಭಾಗವಹಿಸಿದ್ದರು. ಹಲವು ಭಾಷಣಕಾರರು ಮುಸ್ಲಿಂ ಸಮುದಾಯದ ವಿರುದ್ಧದ ಭಾಷಣಗಳನ್ನು ಮಾಡಿದ್ದಾರೆಂದು ಆರೋಪಿಸಲಾಗಿದೆ. ಬಿಜೆಪಿ ಸಂಸದ ಪರ್ವೇಶ್ ಕುಮಾರ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಒಂದು ಸಮುದಾಯದ 'ಸಂಪೂರ್ಣ ಬಹಿಷ್ಕಾರ' ಕ್ಕೆ ಕರೆ ನೀಡಿದ್ದರು.

ಕಳೆದ ವಾರ ಪೂರ್ವ ದಿಲ್ಲಿಯ ಸುಂದರ್ ನಗರಿಯಲ್ಲಿ ಮನೆಗೆ ವಾಪಸಾಗುತ್ತಿದ್ದ ಮನೀಶ್ ಎಂಬಾತನನ್ನು 20ಕ್ಕೂ ಹೆಚ್ಚು ಬಾರಿ ಇರಿದು ಸಾಯಿಸಿದ ಘಟನೆ ಖಂಡಿಸಿ ಈ ಸಮಾವೇಶ ನಡೆಸಲಾಗಿತ್ತು. ಈ ಘಟನೆ ಸಂಬಂಧ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರಲ್ಲದೆ ಹಳೆದ್ವೇಷದಿಂದ ನಡೆದ ಕೃತ್ಯ ಎಂದು ಬಣ್ಣಿಸಿದ್ದರು.

ಈ ಘಟನೆಯನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಗುರ್ಜರ್ "ಇದು ಮತ್ತೆ ನಡೆಯಬಾರದು. ಮುಂದಿನ ಯೋಜನೆಯಾಗಿ ನಾವು ಲೋನಿಯಿಂದ 50,000 ಜನರನ್ನು ತರುತ್ತೇವೆ. ಈ ಜನರು ನಿಮಗಾಗಿ ಬರುತ್ತಾರೆ.  ಹಿಂದೆಯೂ ಬಂದಿದ್ದಾರೆ. ದಿಲ್ಲಿಗೆ ಅಗತ್ಯವಿರುವಾಗ,'' ಎಂದು ಹೇಳಿದ್ದಾರೆ.

ಸುಂದರ್ ನಗರಿ ಪ್ರದೇಶವನ್ನು 'ಸುವರ್ ನಗರಿ' ಎಂದೂ ಹೇಳಿದ ಗುರ್ಜರ್,  ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಪ್ರಕರಣ ದಾಖಲಿಸಬೇಕು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News