ಮಧ್ಯಪ್ರದೇಶದಲ್ಲಿ ಬುಲ್ಡೋಜರ್‌ ನೀತಿಯಿಂದ ಪಕ್ಷಕ್ಕೆ ಪ್ರಯೋಜನವಿಲ್ಲ: ವರಿಷ್ಠರಿಗೆ ರಾಜ್ಯ ಬಿಜೆಪಿ ನಾಯಕರ ಸಂದೇಶ

Update: 2022-10-10 14:37 GMT
ಸಾಂದರ್ಭಿಕ ಚಿತ್ರ (PTI)

ಭೋಪಾಲ: ಉತ್ತರ ಪ್ರದೇಶದಲ್ಲಿ ಬುಲ್ಡೋಜರ್‌ಗಳು (Bulldozer) ಬಿಜೆಪಿಯ (BJP) ಚುನಾವಣಾ ತಂತ್ರದ ಭಾಗವಾಗಿರಬಹುದು, ಆದರೆ ಚುನಾವಣೆ ಸನ್ನಿಹಿತವಾಗಿರುವ ಮಧ್ಯಪ್ರದೇಶದಲ್ಲಿ ಅವು ಬಿಜೆಪಿಗಾಗಿ ಕೆಲಸ ಮಾಡುವುದಿಲ್ಲ ಎಂದು ರಾಜ್ಯ ನಾಯಕರ ಒಂದು ವರ್ಗವು ಪಕ್ಷದ ರಾಷ್ಟ್ರೀಯ ನಾಯಕತ್ವಕ್ಕೆ ಹೇಳಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ರಾಜ್ಯದ ಜನಸಂಖ್ಯಾ ಸ್ವರೂಪ ಮತ್ತು ಸಮುದಾಯ ಜನಸಂಖ್ಯೆಯ ಹಂಚಿಕೆ ‘ಬುಲ್ಡೋಜರ್ ರಾಜಕೀಯ’ದಿಂದ ಚುನಾವಣಾ ಲಾಭಗಳನ್ನು ಗಳಿಸಲು ಬಿಜೆಪಿ ನಾಯಕತ್ವಕ್ಕೆ ಯಾವುದೇ ಹಿನ್ನೆಲೆಯನ್ನು ಒದಗಿಸುವುದಿಲ್ಲ, ಹೀಗಾಗಿ ರಾಜ್ಯ ಸರಕಾರದ ಕ್ರಮವು ರಾಜ್ಯದಲ್ಲಿ ಬುಡಕಟ್ಟು ಮತ್ತು ದಲಿತ ಮತಗಳನ್ನು ಕ್ರೋಢೀಕರಿಸುವ ಪಕ್ಷದ ಗುರಿಯನ್ನು ಸಾಧಿಸುವಲ್ಲಿ ಅಡ್ಡಿಯಾಗಿರುವಂತಿದೆ ಎಂದು ಅವು ಹೇಳಿವೆ ಎಂದು indianexpress.com ವರದಿ ಮಾಡಿದೆ.

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಅವರೊಂದಿಗಿನ ಇತ್ತೀಚಿನ ಸಭೆಯಲ್ಲಿ ರಾಜ್ಯ ನಾಯಕರ ಒಂದು ವರ್ಗವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಎಂದು ಪಕ್ಷದ ರಾಜ್ಯ ಘಟಕದಲ್ಲಿನ ಮೂಲಗಳು ತಿಳಿಸಿವೆ. 2003ರಿಂದ ರಾಜ್ಯದಲ್ಲಿ ನಿರಂತರ 15 ವರ್ಷಗಳ ಆಡಳಿತಕ್ಕೆ ನೆರವಾಗಿದ್ದ ಎರಡು ಪ್ರಮುಖ ಮತದಾರ ವರ್ಗಗಳಾದ ಬುಡಕಟ್ಟು ಜನರು ಮತ್ತು ದಲಿತರ ಬೆಂಬಲವನ್ನು ಮರಳಿ ಗಳಿಸುವ ನಿಟ್ಟಿನಲ್ಲಿ ಪ್ರಯತ್ನಗಳ ಫಲಿತಾಂಶಗಳನ್ನು ಸಭೆಯಲ್ಲಿ ಪುನರ್‌ಪರಿಶೀಲಿಸಲಾಗಿತ್ತು.

ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರವು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಬುಲ್ಡೋಜರ್‌ಗಳನ್ನು ಬಳಸಿದ ಬಳಿಕ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಅವರೂ ಕೂಡ ಕಲ್ಲುತೂರಾಟ ಆರೋಪಿಗಳ ಮನೆಗಳನ್ನು ಮತ್ತು ಆಸ್ತಿಗಳನ್ನು ನೆಲಸಮಗೊಳಿಸಲು ಅನುಮತಿ ನೀಡಿದ್ದರು. ಈ ಕ್ರಮವು ಆದಿತ್ಯನಾಥ್ ರ ‘ಬುಲ್ಡೋಜರ್ ಬಾಬಾ’ ಮಾದರಿಯಲ್ಲಿ ಚೌಹಾಣ್‌ಗೆ ‘ಬುಲ್ಡೋಜರ್ ಮಾಮಾ’ ಎಂಬ ಹೆಸರನ್ನು ತಂದುಕೊಟ್ಟಿತ್ತು. ಉತ್ತಮ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವಲ್ಲಿ ಆದಿತ್ಯನಾಥ್ ರ ದಿಟ್ಟ ನಿಲುವು ಪಕ್ಷವು ಅಧಿಕಾರಕ್ಕೆ ಮರಳಲು ನೆರವಾಗಿದೆ ಎಂಬ ನಿಲುವನ್ನು ಬಿಜೆಪಿ ತಳೆದಿತ್ತು. ಆದಾಗ್ಯೂ ಜನಸಂಖ್ಯೆಯ ಶೇ.90ಕ್ಕೂ ಅಧಿಕ ಹಿಂದುಗಳು ಮತ್ತು ಸುಮಾರು ಶೇ.7ರಷ್ಟು ಮುಸ್ಲಿಮರನ್ನು ಹೊಂದಿರುವ ಮಧ್ಯಪ್ರದೇಶದಲ್ಲಿ ‘ಬುಲ್ಡೋಜರ್’ ರಾಜಕೀಯವು ಕೆಲಸ ಮಾಡುವುದಿಲ್ಲ ಎಂದು ಪಕ್ಷದ ನಾಯಕರು ಹೇಳಿದ್ದಾರೆ. ‘ಹಿಂದು-ಮಸ್ಲಿಮ್ ರಾಜಕೀಯವು ರಾಜ್ಯದಲ್ಲಿ ವಿಷಯವೇ ಅಲ್ಲ, ಆದರೆ ಜಾತಿ ರಾಜಕೀಯವು ಇಲ್ಲಿ ಆಳವಾಗಿ ಕೆಲಸ ಮಾಡುತ್ತದೆ' ಎಂದು ಬಿಜೆಪಿ ನಾಯಕರೋರ್ವರು ತಿಳಿಸಿದ್ದಾರೆಂದು indianexpress.com ವರದಿ ಮಾಡಿದೆ.

ಖರ್ಗೋನ್ ಕೋಮು ಹಿಂಸಾಚಾರದ ಬಳಿಕ ಅಧಿಕಾರಿಗಳು ಮುಸ್ಲಿಮರ 49 ಮನೆಗಳನ್ನು ಧ್ವಂಸಗೊಳಿಸಿದ್ದರು, ಈ ಪೈಕಿ ಕೆಲವು ಪ್ರಧಾನಿ ಆವಾಸ್ ಯೋಜನೆಯಡಿ ನಿರ್ಮಾಣಗೊಂಡಿದ್ದವು. ಈ ಘಟನೆಯು ತಮ್ಮ ಸಮುದಾಯಗಳಿಗೂ ಇದೇ ಗತಿ ಬರಬಹುದು ಎಂದು ಆತಂಕಗೊಂಡಿದ್ದ ಹಲವಾರು ಎಸ್‌ಸಿ/ಎಸ್‌ಟಿ ಸಂಘಟನೆಗಳು ಸಂಯುಕ್ತ ವಿರೋಧಕ್ಕೆ ಕರೆ ನೀಡುವಂತೆ ಮಾಡಿತ್ತು.

ಸಣ್ಣ ಬುಡಕಟ್ಟು ಮತ್ತು ದಲಿತ ಸಂಘಟನೆಗಳಲ್ಲಿ ವ್ಯಾಪಕವಾಗಿರುವ ಅಸಮಾಧಾನವು ಇವೆರಡೂ ಸಮುದಾಯಗಳನ್ನು ಮರಳಿ ಸೆಳೆಯುವ ಬಿಜೆಪಿಯ ಪ್ರಯತ್ನಗಳಿಗೆ ಅಡ್ಡಿಯನ್ನುಂಟು ಮಾಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ದಿಲ್ಲಿ ಗಲಭೆಯಲ್ಲಿ ತಾನು ಶಾಮೀಲಾದ ಕುರಿತು ಸುಳಿವು ನೀಡಿದ ಬಿಜೆಪಿ ಶಾಸಕ !

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News