ಕಾರ್ಕಳ | ಕೊರೋನ ಲಸಿಕೆಯಿಂದ ಕೈ ನೋವು: ಯುವಕ ಆತ್ಮಹತ್ಯೆ
Update: 2022-10-11 13:15 IST
ಕಾರ್ಕಳ, ಅ.11: ಕೊರೋನ ಲಸಿಕೆ ಹಾಕಿಸಿಕೊಂಡ ಬಳಿಕ ಕಾಣಿಸಿಕೊಂಡಿದ್ದೆನ್ನಲಾದ ಕೈ ನೋವಿನಿಂದ ಮನನೊಂದ ವ್ಯಕ್ತಿಯೊಬ್ಬರು ಆತ್ಮಹತ್ಯೆ(Suicide) ಮಾಡಿಕೊಂಡ ಘಟನೆ ಕೌಡೂರು ಗ್ರಾಮದ ತಡ್ಪೆದೋಟ ಎಂಬಲ್ಲಿ ಅ.10ರಂದು ಸಂಜೆ ನಡೆದಿರುವುದು ವರದಿಯಾಗಿದೆ.
ಮೃತರನ್ನು ಕೌಡೂರು ಗ್ರಾಮದ ತಡ್ಪೆದೋಟ ನಿವಾಸಿ ಪ್ರದೀಪ್ ಪೂಜಾರಿ (37) ಎಂದು ಗುರುತಿಸಲಾಗಿದೆ. ಇವರು ಸುಮಾರು 10 ವರ್ಷಗಳಿಂದ ಮುಂಬೈ ಮತ್ತು ಪೂನಾದಲ್ಲಿ ಕೆಲಸ ಮಾಡಿಕೊಂಡಿದ್ದು, ಒಂದು ವರ್ಷದಿಂದ ಊರಿನಲ್ಲಿ ವಾಸವಾಗಿದ್ದಾರೆ. ಕಳೆದ ವರ್ಷ ಕೊರೋನ ಸಮಯದಲ್ಲಿ ಇವರ ಕೈಗೆ ಲಸಿಕೆ ನೀಡಿದ್ದು ಇದರಿಂದ ಕೈ ನೋವುಂಟಾಗಿ ಸರಿಯಾಗಿ ಕೆಲಸ ಮಾಡಲು ಆಗುತ್ತಿರಲಿಲ್ಲ ಎನ್ನಲಾಗಿದೆ. ಇದರಿಂದ ಮನನೊಂದ ಪ್ರದೀಪ್ ಪೂಜಾರಿ ಮನೆಯ ಸಮೀಪದ ಹಾಡಿ ಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.