ಹಾಲಿನ ದರ ಏರಿಸದಿದ್ದರೆ ತೀವ್ರ ಹೋರಾಟ: ಸಹಕಾರ ಭಾರತಿ ಎಚ್ಚರಿಕೆ
ಉಡುಪಿ, ಅ.11: ಒಂದು ಲೀಟರ್ ಹಾಲು ಉತ್ಪಾದನೆಗೆ ತಗಲುವ ಖರ್ಚು ವೆಚ್ಚ ಜಾಸ್ತಿಯಾಗಿರುವುದರಿಂದ ಪ್ರೋತ್ಸಾಹ ಧನವನ್ನು ಕನಿಷ್ಠ 10 ರೂ. ಜಾಸ್ತಿ ಮಾಡಬೇಕು. ಇಲ್ಲದಿದ್ದರೆ ಹಾಲು ಮಾರಾಟ ದರವನ್ನು 3 ರೂ. ಏರಿಸಿ, ಅದರ ಲಾಭವನ್ನು ರೈತರಿಗೆ ವರ್ಗಾಯಿಸಬೇಕು. ಈ ಬಗ್ಗೆ ತುರ್ತು ಕ್ರಮ ಕೈಗೊಂಡು ಶೀಘ್ರವಾಗಿ ಹಾಲಿನ ದರ ಏರಿಸದಿದ್ದರೆ ದೀಪಾವಳಿ ಹಬ್ಬದ ಗೋಪೂಜೆಯ ಬಳಿಕ ರಾಜ್ಯದಾದ್ಯಂತ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಹಕಾರ ಭಾರತಿ ಉಡುಪಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಶು ಆಹಾರ, ಹಸಿಹುಲ್ಲು, ಬೈಹುಲ್ಲು, ಪಶು ಚಿಕಿತ್ಸೆ, ಔಷಧೋಪಚಾರ, ಕೂಲಿ ಆಳುಗಳ ಸಂಬಳ, ಸಾಗಾಟ ಇನ್ನಿತರ ವೆಚ್ಚಗಳು ನಿರಂತರವಾಗಿ ಏರುತ್ತಿದ್ದರೂ ಕಳೆದ ಮೂರು ವರ್ಷಗಳಿಂದ ರೈತರಿಂದ ಖರೀದಿಸುವ ಹಾಲಿಗೆ ದರ ಹೆಚ್ಚಳವಾಗದೆ ರೈತ ಕುಟುಂಬಗಳು ಹೈನುಗಾರಿಕೆಯಿಂದಲೇ ವಿಮುಖರಾಗುವ ಪರಿಸ್ಥಿತಿ ಬಂದೊದಗಿದೆ ಎಂದರು.
ದ.ಕ. ಸಹಕಾರಿ ಹಾಲು ಒಕ್ಕೂಟದಲ್ಲಿ ಕಳೆದ 2-3 ತಿಂಗಳಿನಲ್ಲಿ ಪ್ರತಿದಿನ ಸುಮಾರು 1 ಲಕ್ಷ ಹಾಗೂ ರಾಜ್ಯ ಕೆಎಂಎಫ್ ವ್ಯಾಪ್ತಿಯಲ್ಲಿ 4-5ಲಕ್ಷ ಲೀಟರ್ ಹಾಲು ಸಂಗ್ರಹ ಕಡಿಮೆ ಆಗುತ್ತಿರುವುದು ಹಾಲು ಉತ್ಪಾದನೆಯಲ್ಲಿ ರೈತರು ಎದುರಿಸುತ್ತಿರುವ ಸವಾಲು ಮತ್ತು ಆತಂಕಗಳನ್ನು ಸೂಚಿಸುತ್ತದೆ. ಪ್ರೋತ್ಸಾಹ ಧನವನ್ನು ಕನಿಷ್ಠ 10 ರೂ. ಜಾಸ್ತಿ ಮಾಡುವುದರಿಂದ ಗ್ರಾಮೀಣ ಜನರ ಆರ್ಥಿಕತೆ ಉದ್ದೀಪನವಾಗಿ ಹಾಲು ಉತ್ಪಾದನೆ ಜಾಸ್ತಿಯಾಗಿ ಹಣದುಬ್ಬರ ಕಡಿಮೆಯಾಗ ಬಹುದು. ಈ ಮೂಲಕ ಹೈನುಗಾರಿಕೆಗೆ ಜೀವ ಕಳೆಯನ್ನು ತುಂಬಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯ ಸರಕಾರ ಹಾಲಿನ ಸಹಕಾರಿ ಸಂಘಗಳಿಗೆ ಏಕರೂಪದ ಉಪನಿಬಂಧನೆ ತಂದು ಹಾಲು ಉತ್ಪಾದಕರ ಸಹಕಾರಿ ಸಂಘದ ಬದಲಾಗಿ ಹೈನುಗಾರರ ಸಹಕಾರಿ ಸಂಘ ಎಂದು ಪರಿವರ್ತಿಸಬೇಕು. ದೀಪಾವಳಿ ನಂತರ ಏಳು ತಾಲೂಕು ಸಮಾವೇಶಗಳನ್ನು ಆಯೋಜಿಸಿ ಹೈನುಗಾರಿಕೆಯ ಸಮಸ್ಯೆ ಮತ್ತು ಸವಾಲುಗಳ ಬಗ್ಗೆ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಹಕಾರ ಭಾರತಿ ಹಾಲು ಪ್ರಕೋಷ್ಠದ ಸಂಚಾಲಕ ಸಾಣೂರು ನರಸಿಂಹ ಕಾಮತ್, ಮೋಹನ್ ಕುಮಾರ್ ಕುಂಬ್ಳೆಕರ್, ಹಾಲು ಪ್ರಕೋಷ್ಠದ ಪ್ರಮುಖ ಕಮಲಾಕ್ಷ ಹೆಬ್ಬಾರ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಉಪಸ್ಥಿತರಿದ್ದರು.