×
Ad

ಕಾರ್ಮಿಕರಿಗೆ ಉಚಿತ ಬಸ್ ಪಾಸ್: ಕೆಎಸ್ಸಾರ್ಟಿಸಿ ಅಧ್ಯಕ್ಷ ಚಂದ್ರಪ್ಪ

Update: 2022-10-11 17:59 IST

ಮಂಗಳೂರು, ಅ.11: ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಕರ್ನಾಟಕ ರಾಜ್ಯ ನೋಂದಾಯಿತ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯಲ್ಲಿ ನೋಂದಣಿಯಾಗಿರುವ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಮಾತ್ರ ಬಸ್ ಪಾಸ್ ವಿತರಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ)ಅಧ್ಯಕ್ಷ ಎಂ.ಚಂದ್ರಪ್ಪ  ಹೇಳಿದರು.

ಮಂಗಳೂರಿನ ಕೆಎಸ್ಸಾರ್ಟಿಸಿ ವಿಭಾಗಕ್ಕೆ ಮಂಗಳವಾರ ಭೇಟಿ ನೀಡಿದ ವೇಳೆ ಅಧಿಕಾರಿ, ಸಿಬ್ಬಂದಿ ಜತೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸುಮಾರು 1 ಲಕ್ಷ ಕಾರ್ಮಿಕರಿಗೆ ಪ್ರಥಮ ಹಂತದಲ್ಲಿ ಬಸ್ ಪಾಸ್ ವಿತರಿಸಲಾಗುವುದು. ರಾಜ್ಯದಲ್ಲಿ 37 ಲಕ್ಷ ಕಟ್ಟಡ ಕಾರ್ಮಿಕರಿದ್ದಾರೆ. ಫಲಾನುಭವಿ ಕಾರ್ಮಿಕರು ಅವರು ಪಾಸ್‌ನಲ್ಲಿ ನಮೂದಿಸುವ 45 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಿಯೂ ಸಂಚರಿಸಲು ಅವಕಾಶ ಇದೆ. ಪ್ರತಿ ಮೂರು ತಿಂಗಳಿಗೊಮ್ಮೆ ಪಾಸ್‌ನ್ನು ನವೀಕರಿಸಬೇಕಾಗುತ್ತದೆ. ರಾಜ್ಯದ ಯಾವುದೇ ವಿಭಾಗದಿಂದ ಬಸ್ ಪಾಸ್ ಮಾಡಿಸಲು ಕಾರ್ಮಿಕರಿಗೆ ಅವಕಾಶ ಇದೆ. ಕಾರ್ಮಿಕ ಇಲಾಖೆ ಈ ಬಸ್ ಪಾಸ್ ನೀಡುತ್ತದೆ. ಇದಕ್ಕಾಗಿ ಪ್ರತಿ ಕಾರ್ಮಿಕನ ಪರವಾಗಿ ನಿರ್ದಿಷ್ಟ ಮೊತ್ತವನ್ನು ಕೆಎಸ್ಸಾರ್ಟಿಸಿಗೆ ಕಾರ್ಮಿಕ ಇಲಾಖೆ ಪಾವತಿಸುತ್ತದೆ ಎಂದು ಚಂದ್ರಪ್ಪ ಹೇಳಿದರು.

ಮಂಗಳೂರು ವಿಭಾಗದಲ್ಲಿ ಒಟ್ಟು 672 ಕಾರ್ಮಿಕರಿದ್ದು, 296 ಪಾಸ್ ಸಿದ್ಧವಾಗಿದ್ದು, 376 ಪಾಸ್ ವಿತರಣೆಗೆ ಬಾಕಿ ಇದೆ. ಪುತ್ತೂರು ವಿಭಾಗದಲ್ಲಿ 1,268 ಮಂದಿಯಲ್ಲಿ 366 ಪಾಸ್‌ಗಳು ಸಿದ್ಧವಾಗಿದ್ದು, 902 ಪಾಸ್ ವಿತರಣೆಗೆ ಬಾಕಿ ಇದೆ. ಮಂಗಳೂರಲ್ಲಿ 370, ಉಡುಪಿ 60 ಹಾಗೂ ಕುಂದಾಪುರದಲ್ಲಿ 242 ಕಾರ್ಮಿಕರಿದ್ದು, ಇವರೆಲ್ಲರಿಗೆ ಬಸ್ ಪಾಸ್ ನೀಡಲಾಗುವುದು. ಪುತ್ತೂರಲ್ಲಿ 647, ಮಡಿಕೇರಿ 235, ಸುಳ್ಯ 71, ಬಿ.ಸಿ.ರೋಡ್ 236 ಹಾಗೂ ಧರ್ಮಸ್ಥಳ 79 ಮಂದಿ ಕಾರ್ಮಿಕರಿದ್ದಾರೆ ಎಂದವರು ತಿಳಿಸಿದರು.

ಕರಾವಳಿಯಲ್ಲಿ ಪ್ಯಾಕೆಜ್ ಟೂರ್ 

ಕರಾವಳಿಯಲ್ಲಿ ವಾರಾಂತ್ಯ ಹಾಗೂ ಹಬ್ಬದ ದಿನಗಳಲ್ಲಿ ಪ್ಯಾಕೆಜ್ ಟೂರ್ ಏರ್ಪಡಿಸುವ ಬಗ್ಗೆ ಕೆಎಸ್ಸಾರ್ಟಿಸಿ ವಿಭಾಗೀಯ ಅಧಿಕಾರಿಗಳಿಗೆ ಅಧ್ಯಕ್ಷ ಚಂದ್ರಪ್ಪ  ಸೂಚನೆ ನೀಡಿದರು.

ಅ.21ರಿಂದ 27ರ ವರೆಗೆ ದೀಪಾವಳಿ ಟೂರ್ ಪ್ಯಾಕೆಜ್ ಮಾಡಲಾಗುವುದು. ಮಂಗಳೂರು, ಉಡುಪಿ ಹಾಗೂ ಕುಂದಾಪುರ ವಿಭಾಗದಲ್ಲಿ ದೇವಸ್ಥಾನಗಳಿಗೆ ಒಂದೇ ದಿನದಲ್ಲಿ ಬಂದುಹೋಗುವ ಪ್ಯಾಕೆಜ್ ಹಮ್ಮಿಕೊಳ್ಳಲಾಗು ವುದು. ಈಗಾಗಲೇ ದಸರಾ ಟೂರ್ ಪ್ಯಾಕೆಜ್‌ನಿಂದ ಭಾರಿ ಯಶಸ್ಸು ಸಿಕ್ಕಿದ್ದು, ಇದನ್ನು ಮುಂದುವರಿಸುವಂತೆ ಸೂಚಿಸಲಾಗಿದೆ. ವಾರಾಂತ್ಯದಲ್ಲೂ ವಿಶೇಷ ಟೂರ್ ಪ್ಯಾಕೆಜ್ ಒದಗಿಸಲಾಗುವುದು. ಎರಡು ದಿನಗಳ ದೇವಸ್ಥಾನ ಟೂರ್‌ಗೂ ಅವಕಾಶ ಕಲ್ಪಿಸಲಾಗುವುದು ಎಂದು ಅಧ್ಯಕ್ಷ ಚಂದ್ರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News