ಪೊಲೀಸರೆದುರು ವಿಚಾರಣೆಗೆ ಹಾಜರಾದ ದಿಲ್ಲಿ ಮಾಜಿ ಸಚಿವ
ಹೊಸದಿಲ್ಲಿ.ಅ.11: ಧಾರ್ಮಿಕ ಮತಾಂತರ ಕಾರ್ಯಕ್ರಮವೊಂದರಲ್ಲಿ ತನ್ನ ಉಪಸ್ಥಿತಿಗಾಗಿ ವಿವಾದದ ಕೇಂದ್ರಬಿಂದುವಾಗಿರುವ ದಿಲ್ಲಿಯ ಮಾಜಿ ಸಚಿವ ರಾಜೇಂದ್ರ ಪಾಲ್ ಗೌತಮ (Rajendra Pal Gautama)ಅವರು ಮಂಗಳವಾರ ದಿಲ್ಲಿ ಪೊಲೀಸರೆದುರು ವಿಚಾರಣೆಗೆ ಹಾಜರಾಗಿದ್ದರು.
ಅಂಬೇಡ್ಕರ್ ಭವನ(Ambedkar Bhavan)ದಲ್ಲಿ ನಡೆದಿದ್ದ ಕಾರ್ಯಕ್ರಮ ಮತ್ತು ಆ ಕುರಿತು ದೂರಿಗೆ ಸಂಬಂಧಿಸಿದಂತೆ ಗೌತಮರನ್ನು ವಿಚಾರಣೆಗಾಗಿ ಪಹಾಡಗಂಜ್ ಠಾಣೆಗೆ (Pahadaganj Station)ಕರೆಸಲಾಗಿತ್ತು. ಅದು ಮಾಮೂಲು ವಿಚಾರಣೆಯಾಗಿತ್ತು ಎಂದು ಡಿಸಿಪಿ ಶ್ವೇತಾ ಚೌಹಾಣ (DCP Shweta Chauhan)ಸುದ್ದಿಗಾರರಿಗೆ ತಿಳಿಸಿದರು.
ಅ.8ರಂದು ಸಾವಿರಾರು ಜನರು ಬೌದ್ಧಧರ್ಮಕ್ಕೆ ಮತಾಂತರಗೊಂಡಿದ್ದ ಕಾರ್ಯಕ್ರಮದಲ್ಲಿ ಗೌತಮ ಶಪಥಗ್ರಹಣ ಮಾಡುವುದನ್ನು ವೀಡಿಯೊ ತುಣುಕು ತೋರಿಸಿದೆ. ‘ನಾನು ಬ್ರಹ್ಮ,ವಿಷ್ಣು ಮತ್ತು ಮಹೇಶ್ವರರಲ್ಲಿ ನಂಬಿಕೆಯಿಡುವುದಿಲ್ಲ,ಅವರನ್ನು ಪೂಜಿಸುವುದೂ ಇಲ್ಲ ’ಎಂದು ಗೌತಮ ಶಪಥದಲ್ಲಿ ಹೇಳಿದ್ದರು.
ಅವರ ಶಪಥವು ರಾಜಕೀಯ ವಿವಾದವನ್ನು ಹುಟ್ಟುಹಾಕಿದ್ದು, ಕಾರ್ಯಕ್ರಮದಲ್ಲಿ ಅವರ ಉಪಸ್ಥಿತಿಯನ್ನು ‘ಧಾರ್ಮಿಕವಾಗಿ ವಿಭಜನಕಾರಿ’ಎಂದು ಬಿಜೆಪಿ ಬಣ್ಣಿಸಿದೆ. ಅವರ ಆಪ್ ಮತ್ತು ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಹಿಂದು ವಿರೋಧಿಗಳಾಗಿದ್ದಾರೆ ಎಂದೂ ಅದು ಆರೋಪಿಸಿದೆ. ರವಿವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಗೌತಮ,ತನ್ನಿಂದಾಗಿ ಕೇಜ್ರಿವಾಲ್ ಮತ್ತು ಪಕ್ಷ ತೊಂದರೆಗೊಳಗಾಗುವುದನ್ನು ತಾನು ಬಯಸುವುದಿಲ್ಲ ಎಂದು ಹೇಳಿದ್ದರು.