ದಿಲ್ಲಿ ಗಲಭೆಗಳ ಸಂದರ್ಭ ಸುದ್ದಿಯಾಗಿದ್ದ ನ್ಯಾಯಾಧೀಶರ ವರ್ಗಾವಣೆಗೆ ಇನ್ನೂ ಒಪ್ಪಿಗೆ ನೀಡದ ಕೇಂದ್ರ ಸರಕಾರ
ಹೊಸದಿಲ್ಲಿ: ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿರುವ ನ್ಯಾಯಮೂರ್ತಿ ಎಸ್. ಮುರಳೀಧರ್ Justice S Muralidhar ಅವರ ಹೆಸರನ್ನು ಕೇಂದ್ರ ಸರಕಾರ ಇನ್ನೂ ಅನುಮೋದಿಸಿಲ್ಲ. ಸೆಪ್ಟೆಂಬರ್ 28 ರ ನಿರ್ಣಯದ ಮೂಲಕ ಕೊಲಿಜಿಯಂ ವರ್ಗಾವಣೆಗೆ ಸೂಚಿಸಿದ್ದ ಇನ್ನೊಂದು ಹೆಸರನ್ನು ಸರಕಾರ ಇಂದು ಅನುಮೋದಿಸಿದೆ.
ಜಮ್ಮು-ಕಾಶ್ಮೀರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪಂಕಜ್ ಮಿಥಾಲ್ ಶೀಘ್ರದಲ್ಲೇ ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆದರೆ ನ್ಯಾಯಮೂರ್ತಿ ಮುರಳೀಧರ್ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಈ ಹಿಂದೆ ನ್ಯಾಯಮೂರ್ತಿ ಮುರಳೀಧರ್ ಅವರನ್ನು ದಿಲ್ಲಿ ಹೈಕೋರ್ಟ್‌ನಿಂದ ಪಂಜಾಬ್-ಹರ್ಯಾಣ ಹೈಕೋರ್ಟ್‌ಗೆ ವರ್ಗಾವಣೆ ಮಾಡಿರುವುದು ಭಾರೀ ಸುದ್ದಿಯಾಗಿತ್ತು. ದಿಲ್ಲಿ ವಕೀಲರ ಸಂಘದ ತೀವ್ರ ವಿರೋಧ, ಖಂಡನೆಯ ನಡುವೆಯೇ ಮಧ್ಯರಾತ್ರಿ ವರ್ಗಾವಣೆ ನಡೆದಿತ್ತು.
ದಿಲ್ಲಿ ಹಿಂಸಾಚಾರದ ಸಂದರ್ಭದಲ್ಲಿ ಬಿಜೆಪಿಯ ಅನುರಾಗ್ ಠಾಕೂರ್, ಪರ್ವೇಶ್ ವರ್ಮಾ, ಅಭಯ್ ವೇಮಾ ಹಾಗೂ ಕಪಿಲ್ ಮಿಶ್ರಾ ಅವರು ಮಾಡಿದರೆನ್ನಲಾದ ಪ್ರಚೋದಕ ಭಾಷಣಗಳ ಮೇಲೆ ಪೊಲೀಸ್ ಕ್ರಮಕ್ಕೆ ನ್ಯಾಯಾಧೀಶ ಮುರಳೀಧರರ್ ಆದೇಶಿಸಿದ ಒಂದು ದಿನದ ನಂತರ ಫೆಬ್ರವರಿ 2020 ರಲ್ಲಿ ಅವರಿಗೆ ವರ್ಗಾವಣೆ ಪತ್ರ ಬಂದಿತು.
"1984 ರಂತಹ ಮತ್ತೊಂದು ಘಟನೆ ಈ ದೇಶದಲ್ಲಿ ನಡೆಯಲು ನಾವು ಬಿಡುವುದಿಲ್ಲ" ಎಂದು ನ್ಯಾಯಾಧೀಶ ಮುರಳೀಧರ್ ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದರು.
ಮುರಳೀಧರ್ ವರ್ಗಾವಣೆ ಖಂಡಿಸಿ ದಿಲ್ಲಿ ಹೈಕೋರ್ಟ್‌ನಲ್ಲಿ ವಕೀಲರು ಒಂದು ದಿನ ಕೆಲಸಕ್ಕೆ ಗೈರಾಗಿದ್ದರು ಹಾಗೂ ಅಂತರರಾಷ್ಟ್ರೀಯ ವಕೀಲರ ಗುಂಪು ಅಂದಿನ ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಅವರಿಗೆ ಈ ವಿಷಯದ ಬಗ್ಗೆ ಪತ್ರ ಬರೆದಿತ್ತು.