×
Ad

ಕರಾವಳಿಯ ಯಕ್ಷಗಾನ ವೇಷತೊಟ್ಟು ಕುಣಿದ ನಟ ರಮೇಶ್ ಅರವಿಂದ್

Update: 2022-10-12 20:00 IST

ಉಡುಪಿ, ಅ.12: ಕಳೆದ ವಾರ ಕರಾವಳಿಯ ಉಡುಪಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಕನ್ನಡ ಖ್ಯಾತ ನಟ, ನಿರ್ದೇಶಕ, ಲೇಖಕ, ನಿರೂಪಕ ರಮೇಶ್ ಅರವಿಂದ್ ಅವರು ಇಲ್ಲಿನ ಗಂಡುಕಲೆ ಯಕ್ಷಗಾನದ ವೇಷದ ವೇಷತೊಟ್ಟು ‘ಸುರಸುಂದರ’ನಂತೆ ಕಂಗೊಳಿಸುತ್ತಾ ಕುಣಿದ ವೀಡಿಯೊ ಈಗ ಭಾರೀ ವೈರಲ್ ಆಗಿದೆ.

ಛಾಯಾಗ್ರಹಣದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದು ಹಲವು ಪ್ರಶಸ್ತಿಯನ್ನು  ಗೆದ್ದಿರುವ ಉಡುಪಿಯ ಫೋಕಸ್ ರಘು, ರಮೇಶ್‌ಗೆ ಯಕ್ಷಗಾನದ ಕೇದಗೆ ಮುಂದಲೆ ವೇಷ ತೊಡಿಸಿ ಕರಾವಳಿ ಶೈಲಿಯಲ್ಲೇ ಫೋಟ್ ಶೂಟ್ ಮಾಡಿದ್ದು,  ಯಕ್ಷಗಾನದ ಬಣ್ಣ ಹಚ್ಚಿ, ಗೆಜ್ಜೆ ಕಟ್ಟಿ, ಸಂಪೂರ್ಣ ವೇಷಭೂಷಣದೊಂದಿಗೆ   ಭಾಗವತರ ಸುಮಧುರ ಕಂಠದ ಭಾಗವತಿಕೆಗೆ ಹೆಜ್ಜೆಯನ್ನೂ ಹಾಕುವ ಮೂಲಕ ಕರಾವಳಿಯ ಯಕ್ಷಗಾನ ಪ್ರಿಯರ ಮನಸೂರೆಗೊಂಡಿದ್ದಾರೆ.

ಆ.10ರಂದು ಕೋಟದಲ್ಲಿ ಈ ವರ್ಷದ ಕಾರಂತ ಹುಟ್ಟೂರ ಪ್ರಶಸ್ತಿಗೆ ಭಾಜನರಾದ ರಮೇಶ್ ಅರವಿಂದ್, ಮರುದಿನವೇ ಕಾರಂತರ ಆಸಕ್ತಿಯ ಕ್ಷೇತ್ರವಾಗಿದ್ದು, ಅವರಿಂದ ಹಲವು ಪ್ರಯೋಗಗಳಿಗೂ ಒಳಗಾದ ಯಕ್ಷಗಾದ ವೇಷ ಧರಿಸಿ ವಿಶೇಷ ರೀತಿಯಲ್ಲಿ ಕೃತಜ್ಞತೆ ಸಮರ್ಪಿಸಿದ್ದಾರೆ. ಯಕ್ಷಗಾನ ಪೋಷಾಕಿನಲ್ಲಿ ವಿಶೇಷ ರೀತಿಯ ಪೋಸ್‌ಗಳನ್ನು ನೀಡಿ ರೋಮಾಂಚನ ಗೊಳಿಸಿದ್ದಾರೆ. ರಮೇಶ್‌ರ ಈ ‘ಯಕ್ಷಾವತಾರ’ದ ವೀಡಿಯೊ ಈಗ ವೈರಲ್ ಆಗಿದೆ.

ವೇಷ ಧರಿಸಿ ಕುಣಿದ ಬಗ್ಗೆ ಮಾತನಾಡಿದ ರಮೇಶ್, ಮೊತ್ತ ಮೊದಲ ಬಾರಿಗೆ ಯಕ್ಷಗಾನದ ವೇಷ ತೊಟ್ಟ ನನ್ನಲ್ಲಿ ದಿವ್ಯತೆಯ ಭಾವ ಬೆಳೆದಿದೆ. ಎಂಟಡಿ, ನೂರೈವತ್ತು ಕೆ.ಜಿ ಬೆಳೆದವನಂತೆ ಅನಿಸುತ್ತಿದೆ. ನಾನಿವತ್ತು ಬಹಳವೇ ಶಕ್ತಿ ಶಾಲಿ, ಎದುರಿಗೇನಾದರೂ ರಾಕ್ಷಸರು ಬಂದರೆ ಹೊಡೆದುರುಳಿಸಿ ಬಿಡುತ್ತೇನೆ ಅನ್ನುವಷ್ಟು ಆತ್ಮ ವಿಶ್ವಾಸ ಬೆಳೆಯುತ್ತಿದೆ ಎಂದರು.

ರಮೇಶ್ ಅರವಿಂದ್, ಛಾಯಾಗ್ರಾಹಕ ಫೋಕಸ್ ರಾಘು ಒಡೆತನದ ಕುದ್ರು ನೆಸ್ಟ್ ಹೋಮ್ ಸ್ಟೇಯಲ್ಲಿ  ಯಕ್ಷಗಾನದ ವೇಷ ಧರಿಸಿ ಮಾತನಾಡಿದರು. ಪ್ರಶಸ್ತಿ ಪಡೆಯಲು ಹೋಗಿದ್ದಾಗ ಕೋಟ ಶಿವರಾಮ ಕಾರಂತ ಥೀಂ ಪಾರ್ಕಿನಲ್ಲಿ ಕಾರಂತರು ಸ್ವತಃ ಯಕ್ಷಗಾನ ವೇಷ ಹಾಕಿದ್ದ ಚಿತ್ರ ಕಂಡು ರೋಮಾಂಚಿತನಾದೆ. ಅವರೊಂದು ಬತ್ತದ ಕುತೂಹಲ. ಯಕ್ಷಗಾನ ಕಲಾವಿದರಿಗೆ ಪ್ರತ್ಯೇಕ ಮೇಕಪ್ ಆರ್ಟಿಸ್ಟ್ ಗಳು ಇರುವುದಿಲ್ಲ. ಸ್ವತಃ ತಾವೇ ಬಣ್ಣ ಹಚ್ಚಿ, ಬಟ್ಟೆ ತೊಟ್ಟು, ಹೆಜ್ಜೆ ಕಟ್ಟುವ ರೀತಿಗೆ ಬೆರಗಾದೆ ಎಂದರು.

ಮಂಗಳೂರಿನಿಂದ ಕಾರವಾರದವರೆಗೂ, ಕನ್ನಡ ಕರಾವಳಿಯಾದ್ಯಂತ ಅನೇಕ ಸಿನಿಮಾಗಳನ್ನು ಮಾಡಿದ್ದೇನೆ. ಆ ಹೊತ್ತಿಗೆಲ್ಲ, ಯಕ್ಷಗಾನವನ್ನು ಗಮನಿಸುತ್ತಿದ್ದೆ. ಆರೇಳು ಗಂಟೆ ಏರು ಧ್ವನಿಯಲ್ಲಿ ಹಾಡುವ ಭಾಗವತರ ಶಕ್ತಿಯ ಬಗ್ಗೆ ಆಶ್ಚರ್ಯವಾಗುತ್ತದೆ. ಕಲಾವಿದರನ್ನು ಕಂಡು ನಾನೂ ಒಮ್ಮೆ ಯಕ್ಷಗಾನದ ಬಣ್ಣ ಹಚ್ಚಬೇಕೆಂಬ ಆಸೆ ಇತ್ತು. ಕ್ರಿಯಾಶೀಲ ಛಾಯಾಗ್ರಾಕ ಫೋಕಸ್ ರಾಘು ನನ್ನ ಕನಸನ್ನು ನನಸಾಗಿಸಿದ್ದಾರೆ. ಶೈಲೇಶ್ ತೀರ್ಥಹಳ್ಳಿ ಯಕ್ಷಗಾನದ ವೇಷ ತೊಡಿಸಿದ್ದಾರೆ. ಇಡೀ ಯಕ್ಷಗಾನ ವರ್ಗಕ್ಕೆ ನನ್ನ ನಮನಗಳು ಎಂದು ಅವರು ಹೇಳಿದರು. 

ಉಡುಪಿಯ ಪ್ರಸಿದ್ಧ ಮನೋವೈದ್ಯ, ಲೇಖಕ ಡಾ. ವಿರೂಪಾಕ್ಷ ದೇವರುಮನೆ ಈ ಸಂದರ್ಭ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News