×
Ad

‘ಸಾಗರಮಾಲಾ’ ಮೂಲಕ 800ಕ್ಕೂ ಅಧಿಕ ಯೋಜನೆ: ಸಚಿವ ಸರ್ಬಾನಂದ ಸೋನೊವಾಲ್

Update: 2022-10-13 22:53 IST

ಮಂಗಳೂರು, ಅ.13: ಬಂದರುಗಳ ಸಾಮರ್ಥ್ಯ ಸುಧಾರಣೆಗಾಗಿ ‘ಸಾಗರಮಾಲಾ’ ಮೂಲಕ ದೇಶಾದ್ಯಂತ 800ಕ್ಕೂ ಅಧಿಕ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಹಂತ ಹಂತವಾಗಿ ಅವುಗಳನ್ನು ಪೂರ್ಣಗೊಳಿಸಲಾಗುತ್ತಿದೆ ಎಂದು ಕೇಂದ್ರ ನೌಕಾಯಾನ ಸಚಿವ ಸರ್ಬಾನಂದ ಸೋನೊವಾಲ್ ಹೇಳಿದ್ದಾರೆ.

ನವಮಂಗಳೂರು ಬಂದರು ಪ್ರಾಧಿಕಾರ ಹಾಗೂ ಮರ್ಮಗೋವಾ ಬಂದರು ಪ್ರಾಧಿಕಾರಗಳ ವಿವಿಧ ಯೋಜನೆಗಳ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ವರ್ಚುವಲ್ ವೇದಿಕೆಯಲ್ಲಿ ಗುರುವಾರ ನೆರವೇರಿಸಿ ಅವರು ಮಾತನಾಡಿದರು.

ದೇಶದ ಅಭಿವೃದ್ಧಿಯಲ್ಲಿ ಬಂದರುಗಳ ಕೊಡುಗೆ ಅಪಾರವಾಗಿದೆ. ಅದನ್ನು ಆಧರಿಸಿ ಪ್ರಧಾನಿ ನರೇಂದ್ರ ಮೋದಿಯವರು ಹಾಕಿಕೊಂಡ ‘ಸಾಗರಮಾಲಾ’ದಡಿ ನಡೆಯುವ 802 ಯೋಜನೆಗಳ ಪೈಕಿ 200ಕ್ಕೂ ಅಧಿಕ ಪೂರ್ಣಗೊಂಡಿವೆ. ಬಂದರುಗಳ ಆಧುನೀಕರಣವೂ ನಡಯುತ್ತಿದೆ. ಬಂದರುಗಳ ಹಾಗೂ ಕರಾವಳಿಯ ಅಭಿವೃದ್ಧಿ, ನೌಕಾಯಾನ ಮತ್ತು ಜಲಮಾರ್ಗಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಸಚಿವ ಸರ್ಬಾನಂದ ಸೋನೊವಾಲ್ ಹೇಳಿದರು.

ಸರಕು ನಿರ್ವಹಣೆಯಲ್ಲಿ ಪ್ರಗತಿ ಕಂಡುಬರುತ್ತಿವೆ. ಆಧುನಿಕ ತಂತ್ರಜಾನದ ಅಳವಡಿಕೆಯಿಂದಾಗಿ ಜಗತ್ತಿನ ಅತೀ ದೊಡ್ಡ ಬಂದರುಗಳ ಜೊತೆ ದೇಶದ ಬಂದರುಗಳು ಪೈಪೋಟಿಯೊಡ್ಡುತ್ತಿವೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸಚಿವ ಶ್ರೀಪಾದ ಯಸ್ಸೊ ನಾಯಕ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ರಾಜ್ಯಸಭಾ ಸದಸ್ಯ ವಿಜಯ್ ತೆಂಡುಲ್ಕರ್ ಮತ್ತಿತರರಿದ್ದರು. ಎನ್‌ಎಂಪಿಎ ಹಾಗೂ ಮರ್ಮಗೋವಾ ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ.ಎ.ವಿ.ರಮಣ ಸ್ವಾಗತಿಸಿದರು.
 
*ಬಂದರು ಪ್ರಾಧಿಕಾರದ ಮುಖ್ಯ ಗೇಟ್‌ನಿಂದ ಕುದುರೆಮುಖ ಜಂಕ್ಷನ್‌ವರೆಗೆ 700 ಮೀಟರ್ ಉದ್ದದ ಸರ್ವಿಸ್ ರಸ್ತೆಯನ್ನು ಅಗಲಗೊಳಿಸಿ 3.75 ಕೋ.ರೂ. ಮೌಲ್ಯದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು.

*ಕಸ್ಟಂಸ್‌ ಹೌಸ್ ಸಮೀಪ ಈಗಿರುವ ಟ್ರಕ್ ಟರ್ಮಿನಲ್‌ನ್ನು 3.71 ಕೋ.ರೂ. ವೆಚ್ಚದಲ್ಲಿ ಅತ್ಯಾಧುನಿಕ ಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು.

*ಮುಖ್ಯಪ್ರವೇಶ ದ್ವಾರವಾದ ಯು.ಎಸ್.ಮಲ್ಯ ಗೇಟ್‌ನ್ನು 2 ಲೇನ್‌ನಿಂದ 4ಲೇನ್ ಆಗಿ ಪರಿವರ್ತಿಸಲಾಗಿದೆ. 3.30 ಕೋ.ರೂ ವೆಚ್ಚದಲ್ಲಿ ಇದನ್ನು ಸುಧಾರಣೆಗೊಳಿಸಲಾಗಿದೆ. ಪರಿಸರ ನಿರ್ವಹಣೆಯ ಉದ್ದೇಶದೊಂದಿಗೆ 50 ಲಕ್ಷ ರೂ. ವೆಚ್ಚದಲ್ಲಿ ತ್ಯಾಜ್ಯ ನಿರ್ವಹಣಾ ಘಟಕವನ್ನೂ ನಿರ್ಮಿಸಲಾಗಿದೆ. ಈ ಎರಡೂ ಸೌಲಭ್ಯಗಳನ್ನೂ ಲೋಕಾರ್ಪಣೆಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News