ಮಾನಸಿಕ ಆರೋಗ್ಯ ಬಹು ಮುಖ್ಯ: ನ್ಯಾ. ಶೋಭಾ
ಮಂಗಳೂರು, ಅ.13: ಮಾನಸಿಕ ಆರೋಗ್ಯ ಸರಿಯಿಲ್ಲದಿದ್ದರೆ ಇತರ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ. ಹಾಗಾಗಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜಿ. ಅವರು ಹೇಳಿದರು.
ವಿವಿಧ ಇಲಾಖೆಗಳ ಆಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯುತ್‌ನ ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮತ್ತು ೨೩ನೇ ವಿಶ್ವ ದೃಷ್ಠಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಖಿನ್ನತೆ, ಭಯದಿಂದ ಅನೇಕರಲ್ಲಿ ಮಾನಸಿಕ ಸ್ಥೆ ರ್ಯ ಕುಗ್ಗುತ್ತದೆ. ಆರಂಭಿಕ ಹಂತದಲ್ಲಿಯೇ ಸಮಾಲೋಚನೆಯಿಂದ ಇದನ್ನು ತಡೆಯಲು ಸಾಧ್ಯ ಎಂದು ಅವರು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ಡಾ. ಕುಮಾರ ಮಾತನಾಡಿ, ಮನಸ್ಸಿನ ಆರೋಗ್ಯಕ್ಕೆ ನಾವು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಮನಸ್ಸು, ಕಣ್ಣು ನಮ್ಮ ದೇಹಕ್ಕೆ ಸಂಬಂಧಿಸಿದ ಬಹುಮುಖ್ಯ ಅಂಗಗಳು. ಈ ಅಂಗಗಳ ಬಗ್ಗೆ ಕಾಳಜಿ ವಹಿಸುವುದು ನಮ್ಮ ಕರ್ತವ್ಯ ಎಂದರು.
ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಜಾಸ್ತಿಯಾಗುತ್ತಿದೆ. ಅದರಲ್ಲೂ ಶಾಲಾ-ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ತಮ್ಮ ಮನಸ್ಸನ್ನು ಕೇಂದ್ರೀಕೃತವಾಗಿ ಇಡುವಲ್ಲಿ ಕುಗ್ಗಿ ಹೋಗುತ್ತಿದ್ದಾರೆ. ಅತಿಯಾದ ಆಸೆ, ಆಕಾಂಕ್ಷೆ, ನಿರಾಸೆಯೂ ಇದಕ್ಕೆ ಕಾರಣವಾಗುತ್ತಿದೆ ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ಅವರು ಪ್ರಸ್ತಾವಿಕ ಮಾತನಾಡಿದರು.
ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪಾಪಭೋವಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಗದೀಶ್ ಇದ್ದರು.
ಇಂಡಿಯನ್ ಸೈಕ್ಯಾಟ್ರಿಕ್ ಸೊಸೈಟಿ ಕರ್ನಾಟಕ ಚಾಪ್ಟರ್ ಪ್ರಾಧ್ಯಾಪಕ ಹಾಗೂ ಮನೋರೋಗ ತಜ್ಞ ಡಾ. ಕಿರಣ್ ಕುಮಾರ್ ಪಿ.ಕೆ., ವಕೀಲ ಶುಕರಾಜ್ ಎಸ್. ಕೊಟ್ಟಾರಿ, ಮನೋರೋಗ ತಜ್ಞೆ ಡಾ. ಸುಪ್ರಿಯ ಮತ್ತು ಮನಃಶಾಸ್ತ್ರಜ್ಞೆ ಡಾ. ವಸುಧಾ ಕೆ.ಜಿ. ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ. ಸುದರ್ಶನ್ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ನಿರೂಪಿಸಿ, ವಂದಿಸಿದರು.