ಶಾಸಕ ಹರೀಶ್ ಪೂಂಜಾ ಕಾರನ್ನು ಬೆನ್ನಟ್ಟಿದ ಪ್ರಕರಣ: ಆರೋಪಿ ವಶಕ್ಕೆ

Update: 2022-10-14 15:31 GMT
 ಶಾಸಕ ಹರೀಶ್ ಪೂಂಜಾ

ಬಂಟ್ವಾಳ, ಅ.14: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ (Harish Poonja) ಅವರ ಕಾರನ್ನು ಇನ್ನೊಂದು ಕಾರಿನಲ್ಲಿ ಬೆನ್ನಟ್ಟಿ, ಅವರಿಗೆ ಬೈದು ಆಯುಧ ತೋರಿಸಿ ಪರಾರಿಯಾದ ಘಟನೆಯ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

ತಾಲೂಕಿನ ಫರಂಗಿಪೇಟೆಯಲ್ಲಿ ಈ ಘಟನೆ ನಡೆದಿದೆ ಎಂದು ಆರೋಪಿಸಿ ಶಾಸಕ ಹರೀಶ್ ಪೂಂಜಾ ಅವರ ಕಾರು ಚಾಲಕ ನವೀನ್ ಎಂಬವರು ಗುರುವಾರ ರಾತ್ರಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿ ಮಂಗಳೂರು ಫಳ್ನೀರ್ ನಿವಾಸಿ ರಿಯಾಝ್ (38) ಎಂಬಾತನನ್ನು ಶುಕ್ರವಾರ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. 

ಆರೋಪಿ ಬಳಸಿದ್ದ ಎನ್ನಲಾದ ಸ್ಕಾರ್ಪಿಯೋ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿ ಮತ್ತು ಕಾರನ್ನು ದೂರುದಾರರು ಗುರುತಿಸಿದ್ದಾರೆ. ಆರೋಪಿಯ ವಿರುದ್ಧ ಯಾವುದೇ ಪೊಲೀಸ್ ಠಾಣೆಯಲ್ಲಿ ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿಲ್ಲ ಮತ್ತು ಆತನಲ್ಲಿ ಯಾವುದೇ ಆಯುಧ ಪತ್ತೆಯಾಗಿಲ್ಲ. ಓವರ್‌ ಟೇಕ್ ಮಾಡಲು ಆರೋಪಿಯ ಕಾರಿಗೆ ರಸ್ತೆ ಬಿಟ್ಟು ಕೊಡದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದ್ದು ಬೇರೆ ಯಾವುದೇ ದುರುದ್ದೇಶ ಇರಲಿಲ್ಲ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. 

ಗುರುವಾರ ರಾತ್ರಿ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ಶಾಸಕ ಹರೀಶ್ ಪುಂಜಾ, ಮಂಗಳೂರಿನಿಂದ ಬೆಳ್ತಂಗಡಿಗೆ ತೆರಳುತ್ತಿದ್ದಾಗ ಬಿಳಿ ಸ್ಕ್ವಾರ್ಪಿಯೋ ಕಾರಿನಲ್ಲಿ ಪಡೀಲ್ ನಿಂದ ಫರಂಗಿಪೇಟೆ ವರೆಗೆ ಬೆನ್ನಟ್ಟಿದ ದುಷ್ಕರ್ಮಿ ಶಾಸಕರ ಕಾರನ್ನು ಅಡ್ಡಗಟ್ಟಲು ಪ್ರಯತ್ನಿಸಿದ್ದಾನೆ. ಫರಂಗಿಪೇಟೆಯಲ್ಲಿ ಸ್ಕಾರ್ಪಿಯೋ ಕಾರು ಚಾಲಕ ಶಾಸಕರಿಗೆ ಅವಾಚ್ಯವಾಗಿ ಬೈದು ಆಯುಧ ತೋರಿಸಿ ಬಿ.ಸಿ.ರೋಡ್ ಕಡೆ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News