ಟ್ರೈನ್ಡ್ ನರ್ಸಸ್ ಅಸೋಸಿಯೇಷನ್ ರಾಷ್ಟ್ರ ಮಟ್ಟದ ಸಮ್ಮೇಳನ
ಮಂಗಳೂರು, ಅ.15: ಭಾರತದಲ್ಲಿ ಪ್ರತಿ 10 ಸಾವಿರ ಜನಸಂಖ್ಯೆಗೆ ಶೇ 17.3ರಷ್ಟು ಮಾತ್ರ ನರ್ಸ್‌ಗಳು ಇದ್ದಾರೆ. ಫಿಲಿಪೈನ್ಸ್ ನಂತರ ಭಾರತದ ದಾದಿಯರಿಗೆ ವಿಶ್ವದೆಲ್ಲೆಡೆ ಬೇಡಿಕೆ ಇದೆ ಎಂದು ಅಖಿಲ ಭಾರತ ದಾದಿಯರ ಪರಿಷತ್ ನವದೆಹಲಿಯ ಅಧ್ಯಕ್ಷ ಡಾ.ಟಿ. ದಿಲೀಪ್ ಕುಮಾರ್ ಹೇಳಿದರು.
ಟ್ರೈನ್ಡ್ ನರ್ಸಸ್ ಅಸೋಸಿಯೇಷನ್ ಆಫ್ ಇಂಡಿಯಾದ ರಾಜ್ಯ ಶಾಖೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನರ್ಸಿಂಗ್ ಕಾಲೇಜುಗಳು ಜಂಟಿಯಾಗಿ ಶನಿವಾರ ಇಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂಟರ್ ನ್ಯಾಷನಲ್ ಕೌನ್ಸಿಲ್ ಫಾರ್ ನರ್ಸಸ್ ಸಂಘಟನೆಯು ಶುಶ್ರೂಷೆ ಕ್ಷೇತ್ರಕ್ಕೆ ಸಂಬಂಧಿಸಿ ‘ಬದಲಾವಣೆಗಾಗಿ ನಾಯಕತ್ವ’ ಕಾರ್ಯಕ್ರಮ ರೂಪಿಸಿದೆ. ಭಾರತದಲ್ಲೂ ಈ ಕಾರ್ಯಕ್ರಮವನ್ನು ಜಾರಿಗೊಳಿಸಿ, ಪ್ರತಿ ರಾಜ್ಯದಿಂದ ಒಬ್ಬರಂತೆ 40 ಜನರನ್ನು ಆಯ್ಕೆ ಮಾಡಿ, ವಿಶೇಷ ತರಬೇತಿ ನೀಡಲಾಗುವುದು ಎಂದು ಡಾ. ಟಿ. ದಿಲೀಪ್ ಕುಮಾರ್ ತಿಳಿಸಿದರು.
ಮಣಿಪಾಲ ಮಾಹೆಯ ವೈಸ್ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು.
ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಜಯಕುಮಾರ್, ನಿಟ್ಟೆ ವಿಶ್ವವಿದ್ಯಾಲಯದ ಪ್ರೊ.ವೈಸ್ ಚಾನ್ಸಲರ್ ಡಾ. ಎಂ.ಎಸ್.ಮೂಡಿತ್ತಾಯ, ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಪತಿ ಡಾ.ಸಿ.ಎ ರಾಘವೇಂದ್ರ ರಾವ್, ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸ್ ನಿರ್ದೇಶಕ ಅಬ್ದುಲ್ ರೆಹಮಾನ್, ಲಕ್ಷ್ಮಿ ಮೆಮೊರಿಯಲ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಡಾ.ಎ.ಜೆ.ಶೆಟ್ಟಿ, ಟಿಎನ್‌ಎಐ ಕರ್ನಾಟಕ ವಿಭಾಗದ ಅಧ್ಯಕ್ಷ ಡಾ. ಎಟಿಎಸ್ ಗಿರಿ, ಕಾರ್ಯದರ್ಶಿ ಡಾ. ಹಿಮ ಊರ್ಮಿಳಾ ಶೆಟ್ಟಿ ಉಪಸ್ಥಿತರಿದ್ದರು. ಉಪಾಧ್ಯಕ್ಷೆ ಡಾ. ಲಾರಿಸಾ ಮಾರ್ತಾ ಸ್ಯಾಮ್ಸ್ ಸ್ವಾಗತಿಸಿದರು.