×
Ad

ಓದುವ ಹವ್ಯಾಸ ಬೆಳೆಸಿಕೊಂಡರೆ ಜ್ಞಾನದ ಬಾಗಿಲು ತೆರೆದಂತೆ: ಡಿಸಿ ಡಾ. ರಾಜೇಂದ್ರ

Update: 2022-10-15 22:35 IST

ಸುಳ್ಯ: ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಜ್ಞಾನದ ಬಾಗಿಲು ತೆರೆದಂತೆ. ಜ್ಞಾನ ವೃದ್ಧಿಯಾದರೆ ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಉದ್ಯೋಗದ ಬಾಗಿಲೂ ತೆರೆದಂತಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದರು.

ಮಂಡೆಕೋಲಿನಲ್ಲಿ ಶನಿವಾರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಗ್ರಾಮ ಪಂಚಾಯಿತಿಯ ಗ್ರಂಥಾಲಯದಲ್ಲಿ 'ಅಮ್ಮನಿಗೊಂದು ಪುಸ್ತಕ' ಯೋಜನೆಯ ಯಶಸ್ವಿ ನಡೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. 'ಅಮ್ಮನಿಗೊಂದು ಪುಸ್ತಕ' ಯೋಜನೆ ಇದೇ ಗ್ರಾಮದಲ್ಲಿ ಪ್ರಾರಂಭಗೊಂಡು ಇದೀಗ ರಾಜ್ಯವ್ಯಾಪಿಯಾಗಿರುವುದು ಸಂತಸದ ವಿಚಾರ. ಪುಸ್ತಕ ಓದುವುದರಿಂದ ಮಕ್ಕಳು ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ ಎಂದರು.

ಇದೇ ವೇಳೆ ಮಕ್ಕಳು ಹಾಗೂ ಪೋಷಕರು ಗ್ರಂಥಾಲಯದಲ್ಲಿ ಜರುಗುವ ವಿವಿಧ ಚಟುವಟಿಕೆಗಳ ಬಗ್ಗೆ ವಿವರಿಸಿ ಅದರಿಂದ ತಮಗುಂಟಾದ ವಿವಿಧ ಪ್ರಯೋಜನಗಳ ಬಗ್ಗೆ ವಿವರಿಸಿದರು.

ಇದಕ್ಕೂ ಮೊದಲು ಜಿಲ್ಲಾಧಿಕಾರಿ ಮಂಡೆಕೋಲು ಗ್ರಾ.ಪಂ ಆವರಣದಲ್ಲಿ ಸುಮಾರು ೧೦ ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಗ್ರಂಥಾಲಯದ ನೂತನ ಕಟ್ಟಡಕ್ಕೆ ಚಾಲನೆ ನೀಡಿದರು.

ಬಳಿಕ ಮಕ್ಕಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಸುಳ್ಯ ತಹಶೀಲ್ದಾರ್ ಕು. ಅನಿತಾಲಕ್ಷ್ಮಿ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್ ಕುಮಾರ್, ಸಹಾಯಕ ಕಮಿಷನರ್ ಗಿರೀಶ್ ನಂದನ್, ಗ್ರಾ.ಪಂ ಅಧ್ಯಕ್ಷೆ ವಿನುತಾ ಪಾತಿಕಲ್ಲು, ಉಪಾಧ್ಯಕ್ಷ ಅನಿಲ್ ತೋಟಪ್ಪಾಡಿ, ಪಂ.‌ಅಭಿವೃದ್ಧಿ ಅಧಿಕಾರಿ ರಮೇಶ್ ಕೆ, ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿರಾಮ್ ಕಣೆಮರಡ್ಕ ಮೊದಲಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News