×
Ad

ನ್ಯಾಯ ಪಡೆಯುವಲ್ಲಿ ವಿಳಂಬ ದೇಶದ ಜನರು ಎದುರಿಸುತ್ತಿರುವ ಅತಿ ದೊಡ್ಡ ಸವಾಲು: ಪ್ರಧಾನಿ ಮೋದಿ

Update: 2022-10-15 22:57 IST

ಕೆವಡಿಯಾ (ಗುಜರಾತ್), ಅ. 15: ನ್ಯಾಯ ಪಡೆಯುವಲ್ಲಿ ವಿಳಂಬ ದೇಶದ ಜನರು ಎದುರಿಸುತ್ತಿರುವ ಅತಿ ದೊಡ್ಡ ಸವಾಲು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ. ಸಮರ್ಥ ದೇಶ ಹಾಗೂ ಸಾಮರಸ್ಯದ ಸಮಾಜಕ್ಕೆ ಸೂಕ್ಷ್ಮ ನ್ಯಾಯಾಂಗ ವ್ಯವಸ್ಥೆ ಅತ್ಯಗತ್ಯ ಎಂದು ಅವರು ತಿಳಿಸಿದರು.

ಕಾನೂನಿನ ಅಸ್ಪಷ್ಟತೆ ಸಂಕೀರ್ಣತೆಯನ್ನು ಸೃಷ್ಟಿಸುತ್ತದೆ, ನೂತನ ಕಾನೂನುಗಳನ್ನು ಸ್ಪಷ್ಟವಾಗಿ ಬರೆಯಬೇಕು. ನ್ಯಾಯಾಂಗದ ಕಲಾಪಗಳು ಪ್ರಾದೇಶಿಕ ಭಾಷೆಯಲ್ಲಿ ನಡೆಯಬೇಕು. ಇದರಿಂದ ಬಡ ಜನರು ಕೂಡ ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಗುಜರಾತ್‌ನ ‘ಏಕತಾ ಪ್ರತಿಮೆ’ಯ ಸಮೀಪದ ಕೇವಾಡಿಯಾದ ಏಕ್ತಾ ನಗರ್‌ನಲ್ಲಿ ಎರಡು ದಿನಗಳ ‘‘ಅಖಿಲ ಭಾರತ ಕಾನೂನು ಸಚಿವರ ಹಾಗೂ ಕಾನೂನು ಕಾರ್ಯದರ್ಶಿಗಳ ಸಮಾವೇಶ’’ದ ಉದ್ಘಾಟನಾ ಅಧಿವೇಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಕಳೆದ ಎಂಟು ವರ್ಷಗಳಲ್ಲಿ ತನ್ನ ಸರಕಾರ 1,500ಕ್ಕೂ ಅಧಿಕ ಹಳೆಯ, ಬಳಕೆಯಲ್ಲಿಲ್ಲದ ಹಾಗೂ ಅಪ್ರಸ್ತುತ ಕಾನೂನುಗಳನ್ನು ರದ್ದುಗೊಳಿಸಿದೆ ಎಂದು ಅವರು ತಿಳಿಸಿದರು.

‘‘ನ್ಯಾಯ ಪಡೆಯುವುದರಲ್ಲಿ ವಿಳಂಬವಾಗುತ್ತಿರುವ  ಸಮಸ್ಯೆಗಳನ್ನು ಪರಿಹರಿಸಲು ನಮ್ಮ ನ್ಯಾಯಾಂಗ ವ್ಯವಸ್ಥೆ ಗಂಭೀರವಾಗಿ ಕಾರ್ಯ ನಿರ್ವಹಿಸಬೇಕು. ಈ ಅಮೃತ ಘಳಿಗೆಯಲ್ಲಿ ಸಮಸ್ಯೆಗಳನ್ನು ಪರಿಹರಿಸಲು ನಾವು ಸಂಘಟಿತರಾಗಿ ಕಾರ್ಯ ನಿರ್ವಹಿಸಬೇಕು’’ ಎಂದು ಅವರು ಹೇಳಿದರು.

ನ್ಯಾಯಾಲಯಗಳ ಹೊರೆ ಕಡಿಮೆ ಮಾಡಲು ಹಾಗೂ ಬಡ ಜನರು ಸುಲಭವಾಗಿ ನ್ಯಾಯ ಪಡೆಯಲು ಪರ್ಯಾಯ ವಿವಾದ ಪರಿಹಾರ ಹಾಗೂ ಲೋಕ ಅದಾಲತ್‌ನಂತಹ ವ್ಯವಸ್ಥೆಗಳು ನೆರವಾಗಲಿವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News