ಅಂಡಮಾನ್ -ನಿಕೋಬಾರ್ ನ ಮಾಜಿ ಮುಖ್ಯ ಕಾರ್ಯದರ್ಶಿ ವಿರುದ್ಧ ಸಾಮೂಹಿಕ ಅತ್ಯಾಚಾರ ಆರೋಪ
ಪೋರ್ಟ್ ಬ್ಲೇರ್, ಅ. 15: ಅಂಡಮಾನ್ ಹಾಗೂ ನಿಕೋಬಾರ್ ಕೇಂದ್ರಾಡಳಿತ ಪ್ರದೇಶದ ರಾಜಧಾನಿ ಪೋರ್ಟ್ ಬ್ಲೇರ್‌ನಲ್ಲಿ 21 ವರ್ಷದ ಯುವತಿಯ ಮೇಲೆ ಕೇಂದ್ರಾಡಳಿತ ಪ್ರದೇಶದ ಮಾಜಿ ಮುಖ್ಯ ಕಾರ್ಯದರ್ಶಿ ಹಾಗೂ ಕಾರ್ಮಿಕ ಆಯುಕ್ತರು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಅಂಡಮಾನ್ ಹಾಗೂ ನಿಕೋಬಾರ್ ಕೇಂದ್ರಾಡಳಿತ ಪ್ರದೇಶದ ಮಾಜಿ ಮುಖ್ಯ ಕಾರ್ಯದರ್ಶಿ, ದಿಲ್ಲಿ ಹಣಕಾಸು ನಿಗಮ (ಸಿಎಂಡಿ)ದ ಹಾಲಿ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ (ಸಿಎಂಡಿ) ಜಿತೇಂದ್ರ ನರೈನ್, ಕಾರ್ಮಿಕ ಆಯುಕ್ತ ಆಲ್.ಎಲ್. ರಿಷಿ ಅವರ ವಿರುದ್ಧ ದಕ್ಷಿಣ ಅಂಡಮಾನ್‌ನ ಅಬೇರ್ದೀನ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ.
ಅಂಡಮಾನ್ ಹಾಗೂ ನಿಕೋಬಾರ್ ಕೇಂದ್ರಾಡಳಿತ ಪ್ರದೇಶದ ಡಿಜಿಪಿ ಅವರಲ್ಲಿ ಸಂತ್ರಸ್ತ ಮಹಿಳೆ ಆಗಸ್ಟ್ 22ರಂದು ದೂರು ಸಲ್ಲಿಸಿದ ಬಳಿಕ ಅಕ್ಟೋಬರ್ 1ರಂದು ಎಫ್‌ಐಆರ್ ದಾಖಲಿಸಲಾಗಿದೆ ಹಾಗೂ ಆಕೆಯ ಆರೋಪದ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ.
ತಾನು ಉದ್ಯೋಗ ಹುಡುಕುತ್ತಿದ್ದ ಸಂದರ್ಭ ಹೊಟೇಲ್ ಮಾಲಕರೋರ್ವರು ತನ್ನನ್ನು ಕಾರ್ಮಿಕ ಆಯುಕ್ತ ರಿಷಿ ಅವರಿಗೆ ಪರಿಚಯಿಸಿದರು. ರಿಷಿ ಸರಕಾರಿ ಉದ್ಯೋಗ ನೀಡುವ ಭರವಸೆಯೊಂದಿಗೆ ತನ್ನನ್ನು ನರೈನ್ ಅವರ ನಿವಾಸಕ್ಕೆ ಕರೆದೊಯ್ದರು. ಅಲ್ಲಿ ತನಗೆ ಮದ್ಯ ನೀಡಿದರು. ಆದರೆ, ತಾನು ನಿರಾಕರಿಸಿದೆ. ಅನಂತರ ಅವರಿಬ್ಬರೂ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಎರಡು ವಾರಗಳ ಬಳಿಕ ತನ್ನನ್ನು ಮುಖ್ಯ ಕಾರ್ಯದರ್ಶಿ ಅವರ ನಿವಾಸಕ್ಕೆ ಬರುವಂತೆ ತಿಳಿಸಲಾಯಿತು. ಅಲ್ಲಿ ತನ್ನ ಮೇಲೆ ಮತ್ತೊಮ್ಮೆ ಅತ್ಯಾಚಾರ ಎಸಗಿದರು. ಈ ಸಂದರ್ಭ ‘‘ಘಟನೆಗೆ ಬಗ್ಗೆ ಯಾರಿಗಾದರೂ ತಿಳಿಸಿದರೆ ಭೀಕರ ಪರಿಣಾಮ ಎದುರಿಸಬೇಕಾದೀತು’’ ಎಂದು ಬೆದರಿಕೆಯನ್ನು ಕೂಡ ಅವರು ಒಡ್ಡಿದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಆರೋಪವನ್ನು ನಿರಾಕರಿಸಿ ನರೈನ್ ಅವರು ಪ್ರಧಾನ ಮಂತ್ರಿ ಕಚೇರಿ, ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಹಾಗೂ ಇತರರಿಗೆ ವಿಸ್ತೃತ ಪತ್ರ ಬರೆದಿದ್ದಾರೆ ಎಂದು ನರೈನ್ ಅವರ ನಿಕಟವರ್ತಿ ಮೂಲಗಳು ತಿಳಿಸಿವೆ ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.