ಅ.20: ಕೇರಳದಿಂದ ಸೈಕಲ್‌ನಲ್ಲಿ ಮಕ್ಕಾ ಯಾತ್ರೆ ಹೊರಡಲಿರುವ ವಿಟ್ಲದ ಅಹ್ಮದ್ ಸಾಬಿತ್
ಮಂಗಳೂರು, ಅ.15: ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಬೈರಿಕಟ್ಟೆ ನಿವಾಸಿ ಅಹ್ಮದ್ ಸಾಬಿತ್ ಸೈಕಲ್ ಮೂಲಕ ಪವಿತ್ರ ಮಕ್ಕಾ ಯಾತ್ರೆ ಹಾಗೂ ಈಜಿಪ್ಟ್ ನಲ್ಲಿ ಉನ್ನತ ಧಾರ್ಮಿಕ ಶಿಕ್ಷಣ ಪಡೆಯುವ ಉದ್ದೇಶದಿಂದ 15,000 ಕಿ.ಮೀ. ಕ್ರಮಿಸುವ ಸೈಕಲ್ ಯಾತ್ರೆ ಕೈಗೊಳ್ಳಲಿದ್ದಾರೆ.
ಅ.20ರಂದು ಕೇರಳದ ತಿರುವನಂತಪುರದಿಂದ ಯಾತ್ರೆ ಹೊರಡಲಿದ್ದಾರೆ ಎಂದು ಎಂ. ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ತಿಳಿಸಿದ್ದಾರೆ.
ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಿರುವನಂತಪುರದಿಂದ ಪ್ರಾರಂಭಗೊಳ್ಳುವ ಈ ಯಾತ್ರೆ 2 ಖಂಡಗಳು, 10 ದೇಶಗಳ ಮೂಲಕ ಸಾಗಿ ಪವಿತ್ರ ಮದೀನಾ ತಲುಪಿ ಈಜಿಪ್ಟ್‌ನಲ್ಲಿ ಕೊನೆಗೊಳ್ಳಲಿದೆ. ಸುಮಾರು 15,000 ಕಿ.ಮೀ. ಸಂಚರಿಸುವ ಅವರು ಈಜಿಪ್ಟ್‌ನ ಅಲ್ ಅಝರ್ ಯುನಿವರ್ಸಿಟಿಯಲ್ಲಿ 2 ವರ್ಷಗಳ ಧಾರ್ಮಿಕ ಶಿಕ್ಷಣ ಪಡೆಯುವ ಗುರಿ ಹೊಂದಿದ್ದಾರೆ. ಯಾತ್ರೆಯ ಮಧ್ಯೆ ಪವಿತ್ರ ಉಮ್ರಾ ಕರ್ಮ ನಿರ್ವಹಿಸುವ ಇರಾದೆ ಹೊಂದಿದ್ದಾರೆ ಎಂದು ತಿಳಿಸಿದರು.
ಯಾತ್ರೆಯು ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ರಾಜಸ್ತಾನ, ಹರ್ಯಾಣ, ಪಂಜಾಬ್, ಜಮ್ಮು-ಕಾಶ್ಮೀರ, ಲಡಾಖ್ ಮಾರ್ಗವಾಗಿ ಸಾಗಲಿದೆ. ಮುಂದಕ್ಕೆ ಪಾಕಿಸ್ತಾನ, ಇರಾನ್, ಇರಾಕ್, ಕುವೈತ್, ಸೌದಿ ಅರೇಬಿಯಾ, ಯುಎಇ, ಒಮನ್, ಜೋರ್ಡಾನ್, ಇಸ್ರೇಲ್ ಹಾಗೂ ಈಜಿಪ್ಟ್ ದೇಶಗಳಲ್ಲಿ ಈ ಸೈಕಲ್ ಯಾತ್ರೆಯು ಸಂಚರಿಸಲಿದೆ. ಇದೊಂದು ಆಧ್ಯಾತ್ಮಿಕ ಯಾತ್ರೆಗೆ ಸೀಮಿತಗೊಳ್ಳದೆ ಶೈಕ್ಷಣಿಕ ಹಾಗೂ ಅಧ್ಯಯನ ಯಾತ್ರೆಯೂ ಆಗಿರಲಿದೆ ಎಂದರು.
ಅಹ್ಮದ್ ಸಾಬಿತ್ ಮಾತನಾಡಿದ ‘ಈ ಹಿಂದೆ ಕೇರಳದಾದ್ಯಂತ ಸೈಕಲ್ ಯಾತ್ರೆಯನ್ನು ಕೈಗೊಂಡಿದ್ದೆ. ಅದರಿಂದ ಸ್ಫೂರ್ತಿ ಪಡೆದು ಸುಮಾರು 200 ದಿನಗಳ ಈ ಯಾತ್ರೆಗೆ ತೀರ್ಮಾನಿಸಿದ್ದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಬೂಬಕರ್ ಉಪ್ಪಿನಂಗಡಿ, ಉಬೈದ್ ವಿಟ್ಲ ಉಪಸ್ಥಿತರಿದ್ದರು.