2036ರಲ್ಲಿ ಸಾಗರಗಳಲ್ಲಿ 60 ಕೋಟಿ ಟನ್ ಪ್ಲಾಸ್ಟಿಕ್ ತ್ಯಾಜ್ಯ!

Update: 2022-10-16 04:18 GMT
ಸಾಂದರ್ಭಿಕ ಚಿತ್ರ (Source: PTI)

ಕೆಲವು ದೇಶಗಳು ಪ್ಲಾಸ್ಟಿಕ್ ಚಟವನ್ನು ತೊರೆದರೂ, ಜಗತ್ತಿನ ಬೇರೆ ಭಾಗಗಳಲ್ಲಿ ಪ್ಲಾಸ್ಟಿಕ್‌ಗೆ ಬೇಡಿಕೆ ಹೆಚ್ಚಿದರೆ, ಅದರ ಜಾಗತಿಕ ಪರಿಣಾಮದಲ್ಲಿ ಏನೂ ವ್ಯತ್ಯಾಸವಾಗುವುದಿಲ್ಲ. ವರ್ಲ್ಡ್ ಇಕನಾಮಿಕ್ ಫೋರಂ (ಡಬ್ಲುಇಎಫ್) ‘ನೂತನ ಪ್ಲಾಸ್ಟಿಕ್ಸ್ ಆರ್ಥಿಕತೆ’ ಎಂಬ ತನ್ನ 2016ರ ವರದಿಯಲ್ಲಿ, 2014ರಲ್ಲಿ ಜಾಗತಿಕ ಪ್ಲಾಸ್ಟಿಕ್ ಉತ್ಪಾದನೆಯು 31.1 ಕೋಟಿ ಟನ್‌ಗೆ ತಲುಪಿದೆ ಎಂದು ಹೇಳಿತ್ತು. 1964ರಲ್ಲಿ ಪ್ಲಾಸ್ಟಿಕ್ ಉತ್ಪಾದನೆ ಕೇವಲ 1.5 ಕೋಟಿ ಟನ್ ಆಗಿತ್ತು. ಅಷ್ಟೇ ಅಲ್ಲದೆ, 2036ರ ವೇಳೆಗೆ, ಒಟ್ಟು ಜಾಗತಿಕ ಪ್ಲಾಸ್ಟಿಕ್ ಉತ್ಪಾದನೆಯು ದುಪ್ಟಟ್ಟು ಆಗುತ್ತದೆ, ಅಂದರೆ 60 ಕೋಟಿ ಟನ್‌ನ್ನೂ ಮೀರುತ್ತದೆ ಎಂಬುದಾಗಿಯೂ ಡಬ್ಲುಇಎಫ್ ಅಭಿಪ್ರಾಯಪಟ್ಟಿದೆ.


ಖಾಸಗಿ ಸಾರಿಗೆ ಕ್ಷೇತ್ರದ ಗಮನವು ಬ್ಯಾಟರಿಗಳು, ಜೈವಿಕ ಇಂಧನಗಳು ಮತ್ತು ಹಸಿರು ಜಲಜನಕದತ್ತ ಹರಿದಿರುವಂತೆಯೇ, ಸಾಂಪ್ರದಾಯಿಕ ಪೆಟ್ರೋಲಿಯಮ್ ಇಂಧನದಲ್ಲಿ ತಮ್ಮ ಹಿತಾಸಕ್ತಿಗಳನ್ನು ಹೊಂದಿರುವವರು ಪೆಟ್ರೋಕೆಮಿಕಲ್ ಉದ್ದಿಮೆಯಲ್ಲಿ, ಅದರಲ್ಲೂ ಮುಖ್ಯವಾಗಿ ಪ್ಲಾಸ್ಟಿಕ್ ಉದ್ಯಮದಲ್ಲಿ ಹಣ ಮಾಡುವ ಹೊಸ ದಾರಿಗಳನ್ನು ಶೋಧಿಸುತ್ತಿದ್ದಾರೆ. ಇದು, ಈಗಾಗಲೇ ಪ್ಲಾಸ್ಟಿಕ್ ಮಾಲಿನ್ಯದಲ್ಲಿ ಅಕ್ಷರಶಃ ತೇಲಾಡುತ್ತಿರುವ ಜಗತ್ತಿಗೆ ಕೆಟ್ಟ ಸುದ್ದಿಯಾಗಿದೆ. ಉತ್ಪನ್ನಗಳ ತಯಾರಕರು ಮತ್ತು ಉದ್ಯಮಕ್ಕೆ ಸಂಬಂಧಿಸಿದ ಇತರ ಶಕ್ತಿಗಳು ಪೆಟ್ರೋಕೆಮಿಕಲ್ ಉದ್ಯಮದ ಈ ಪ್ರವೃತ್ತಿಯನ್ನು ಹಿಮ್ಮುಖವಾಗಿಸಲು ಸಾಧ್ಯವಿದೆ. ಆದರೆ, ನೀತಿ ನಿರೂಪಕರು, ಮತದಾರರು ಮತ್ತು ಬಳಕೆದಾರರನ್ನು ಜೊತೆಗಿಟ್ಟುಕೊಂಡು, ಬಳಕೆ ನಂತರದ ಮರುಬಳಕೆಯ ಏಕೈಕ ಗುರಿಯನ್ನು ಮೀರಿ ಯೋಚಿಸಲು ಸಾಧ್ಯವಾದರೆ ಮಾತ್ರ ಅವರಿಗೆ ಇದು ಸಾಧ್ಯವಾಗಬಹುದು.

ಪ್ಲಾಸ್ಟಿಕ್.. ಎಲ್ಲೆಲ್ಲೂ ಪ್ಲಾಸ್ಟಿಕ್
ಈ ನಿಟ್ಟಿನಲ್ಲಿ ಬದಲಾವಣೆಯ ಲಕ್ಷಣಗಳು ಗೋಚರಿಸುತ್ತಿವೆ. ಪ್ಲಾಸ್ಟಿಕ್ ಮಾಲಿನ್ಯ ಬಿಕ್ಕಟ್ಟಿನ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚುತ್ತಿದೆ. ಒಮ್ಮೆ ಮಾತ್ರ ಬಳಸುವ ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸುವುದು ಮತ್ತು ಮರುಬಳಕೆ ಪ್ರಮಾಣವನ್ನು ಹೆಚ್ಚಿಸುವುದು ಮುಂತಾದ ಪ್ಲಾಸ್ಟಿಕ್ ಮಾಲಿನ್ಯವನ್ನು ಕಡಿಮೆ ಮಾಡುವ ಕ್ರಮಗಳನ್ನು ಬೆಂಬಲಿಸಲು ಅಮೆರಿಕದಲ್ಲಿ ಶೇ. 86 ಗ್ರಾಹಕರು ಉತ್ಸುಕರಾಗಿದ್ದಾರೆ ಎನ್ನುವುದನ್ನು 2020ರಲ್ಲಿ ವರ್ಲ್ಡ್ ವೈಲ್ಡ್‌ಲೈಫ್ ಫಂಡ್ ನಡೆಸಿದ ಅಧ್ಯಯನವು ಕಂಡುಕೊಂಡಿದೆ. ಪ್ಯಾಕೇಜ್‌ಗಳಲ್ಲಿ ಪ್ಲಾಸ್ಟಿಕ್ ಬಳಸುವುದನ್ನು ಕಡಿಮೆ ಮಾಡಲು ಖಾಸಗಿ ವಲಯವು ಮಾಡುತ್ತಿರುವ ಪ್ರಯತ್ನಗಳೂ ಪರಿಣಾಮ ಬೀರಲು ಆರಂಭಿಸಿವೆ.

ಆದರೆ, ಈ ಪ್ರವೃತ್ತಿಗಳು ಜಾಗತಿಕ ಮಟ್ಟದಲ್ಲಿ ಪ್ಲಾಸ್ಟಿಕ್ ಉತ್ಪಾದನೆ ಅಥವಾ ಬಳಕೆಯ ಗತಿಯನ್ನು ಹಿಮ್ಮುಖವಾಗಿ ತಿರುಗಿಸುವುದು ಬಿಡಿ, ಅವುಗಳ ಪ್ರಸಕ್ತ ವೇಗದಲ್ಲಿ ಕೊಂಚವಾದರೂ ಕಡಿತವಾಗುವುದೂ ಅನುಮಾನ. ಉದಾಹರಣೆಗೆ; ಅಮೆರಿಕವು ಪ್ಲಾಸ್ಟಿಕ್‌ನ ಅತಿ ದೊಡ್ಡ ಉತ್ಪಾದಕ ಮತ್ತು ಜಗತ್ತಿನ ಅತಿ ದೊಡ್ಡ ಪ್ಲಾಸ್ಟಿಕ್ ತ್ಯಾಜ್ಯದ ಮೂಲವೂ ಆಗಿದೆ. ಪ್ಲಾಸ್ಟಿಕ್ ಉತ್ಪಾದನೆಯ ಪ್ರಸಕ್ತ ಸ್ಥಿತಿ ಮುಂದುವರಿದರೆ, 2060ರ ವೇಳೆಗೆ ಜಾಗತಿಕ ಮಟ್ಟದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವು ಮೂರು ಪಟ್ಟು ಹೆಚ್ಚುವುದು. ಪೆಟ್ರೋಕೆಮಿಕಲ್ ಉತ್ಪಾದಕರು ಕೂಡ ಏಶ್ಯ ಮತ್ತು ಆಫ್ರಿಕದಲ್ಲಿ ಬೆಳೆಯುತ್ತಿರುವ ಮಾರುಕಟ್ಟೆಗಳ ಮೇಲೆ ಕಣ್ಣಿಟ್ಟಿದ್ದಾರೆ.

ಕೆಲವು ದೇಶಗಳು ಪ್ಲಾಸ್ಟಿಕ್ ಚಟವನ್ನು ತೊರೆದರೂ, ಜಗತ್ತಿನ ಬೇರೆ ಭಾಗಗಳಲ್ಲಿ ಪ್ಲಾಸ್ಟಿಕ್‌ಗೆ ಬೇಡಿಕೆ ಹೆಚ್ಚಿದರೆ, ಅದರ ಜಾಗತಿಕ ಪರಿಣಾಮದಲ್ಲಿ ಏನೂ ವ್ಯತ್ಯಾಸವಾಗುವುದಿಲ್ಲ. ವರ್ಲ್ಡ್ ಇಕನಾ ಮಿಕ್ ಫೋರಂ (ಡಬ್ಲುಇಎಫ್) ‘ನೂತನ ಪ್ಲಾಸ್ಟಿಕ್ಸ್ ಆರ್ಥಿಕತೆ’ ಎಂಬ ತನ್ನ 2016ರ ವರದಿಯಲ್ಲಿ, 2014ರಲ್ಲಿ ಜಾಗತಿಕ ಪ್ಲಾಸ್ಟಿಕ್ ಉತ್ಪಾದನೆಯು 31.1 ಕೋಟಿ ಟನ್‌ಗೆ ತಲುಪಿದೆ ಎಂದು ಹೇಳಿತ್ತು. 1964ರಲ್ಲಿ ಪ್ಲಾಸ್ಟಿಕ್ ಉತ್ಪಾದನೆ ಕೇವಲ 1.5 ಕೋಟಿ ಟನ್ ಆಗಿತ್ತು. ಅಷ್ಟೇ ಅಲ್ಲದೆ, 2036ರ ವೇಳೆಗೆ, ಒಟ್ಟು ಜಾಗತಿಕ ಪ್ಲಾಸ್ಟಿಕ್ ಉತ್ಪಾದನೆಯು ದುಪ್ಟಟ್ಟು ಆಗುತ್ತದೆ, ಅಂದರೆ 60 ಕೋಟಿ ಟನ್‌ನ್ನೂ ಮೀರುತ್ತದೆ ಎಂಬುದಾಗಿಯೂ ಡಬ್ಲುಇಎಫ್ ಅಭಿಪ್ರಾಯಪಟ್ಟಿದೆ.

ಪ್ಲಾಸ್ಟಿಕ್ ಉತ್ಪಾದನೆಗೆ ಪೂರಕವಾಗಿರುವ ಒಂದು ಅಂಶವೆಂದರೆ, ಅಮೆರಿಕದಲ್ಲಿ ನೈಸರ್ಗಿಕ ಅನಿಲವು ಕಡಿಮೆ ವೆಚ್ಚದಲ್ಲಿ ಯಥೇಚ್ಛವಾಗಿ ಸಿಗುತ್ತಿರುವುದು.
ಇನ್ನೊಂದು ಅಂಶವೆಂದರೆ, ಪ್ಲಾಸ್ಟಿಕ್ ಉತ್ಪಾದನೆಯಲ್ಲಿ ಕಚ್ಚಾ ತೈಲ (ಪೆಟ್ರೋಲ್)ದ ಬದಲಿಗೆ ತೈಲದ ಬಳಕೆ ಆರಂಭಗೊಂಡಿದ್ದು. ಈಥೇನ್ ಉತ್ಪಾದನೆಯಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಂಭವಿಸಿತು. ಸಾರಿಗೆ ಕ್ಷೇತ್ರದಲ್ಲಿ ಪೆಟ್ರೋಲಿಯಮ್ ಉತ್ಪನ್ನಗಳ ಬಳಕೆ ಕಡಿಮೆಯಾದ ಮಾತ್ರಕ್ಕೆ ತೈಲ ಶುದ್ಧೀಕರಣ ಘಟಕಗಳಿಗೆ ಕಚ್ಚಾತೈಲದ ಹರಿವು ಕಡಿಮೆಯಾಗಬೇಕೆಂದೇನಿಲ್ಲ. ‘‘ಪೆಟ್ರೋಲಿಯಮ್ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದ್ದದ್ದು ಸಾರಿಗೆ ಕ್ಷೇತ್ರದಲ್ಲಿ. ಈಗ ಸಾರಿಗೆ ಕ್ಷೇತ್ರವು ಬ್ಯಾಟರಿ ಚಾಲಿತ ವಾಹನಗಳಿಗೆ ಹೆಚ್ಚೆಚ್ಚು ತೆರೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ತೈಲ ಉದ್ದಿಮೆಯು ಪ್ಲಾಸ್ಟಿಕ್‌ನತ್ತ ಕಣ್ಣು ಹಾಯಿಸುತ್ತಿದೆ. ಇತರ ಮಾರುಕಟ್ಟೆಗಳಲ್ಲಿ ತಾನು ಅನುಭವಿಸುತ್ತಿರುವ ನಷ್ಟವನ್ನು ಪ್ಲಾಸ್ಟಿಕ್ ಉದ್ದಿಮೆ ಸರಿದೂಗಿಸಬಹುದು ಎಂಬುದಾಗಿ ಅದು ಭಾವಿಸಿದೆ ಎಂದು ‘ಕಾನ್ವರ್‌ಸೇಶನ್’ನಲ್ಲಿ 2021 ನವೆಂಬರ್‌ನಲ್ಲಿ ಪ್ರಕಟಗೊಂಡಿರುವ ಲೇಖನವೊಂದು ಅಭಿಪ್ರಾಯಪಟ್ಟಿದೆ. ಅದರ ಬಳಿಕ, ತೈಲ ಶುದ್ಧೀಕರಣ ಘಟಕಗಳು ಪೆಟ್ರೋಕೆಮಿಕಲ್ ಮಾರುಕಟ್ಟೆಯನ್ನು ಹೆಚ್ಚಾಗಿ ಅವಲಂಬಿಸುತ್ತಿದೆ.
ಪ್ಲಾಸ್ಟಿಕ್ ಉತ್ಪಾದನೆ ಮತ್ತು ತ್ಯಾಜ್ಯದ ಪರಿಣಾಮಗಳು ಹಲವು. ತೈಲ ಮತ್ತು ಅನಿಲ ಬಾವಿ ತೋಡುವುದು ಮತ್ತು ತೈಲ ಶುದ್ಧೀಕರಣ ಘಟಕಗಳ ಕಾರ್ಯಾಚರಣೆಯಿಂದ ಸಂಭವಿಸುವ ಸ್ಥಳೀಯ ಪರಿಸರ ನಾಶ ಮತ್ತು ಜಾಗತಿಕ ತಾಪಮಾನಕ್ಕೆ ಕಾರಣವಾಗುವ ಅನಿಲಗಳ ಬಿಡುಗಡೆ ಒಂದೆಡೆಯಾದರೆ, ಪರಿಸರದಲ್ಲಿ ಅಪಾರ ಪ್ರಮಾಣದಲ್ಲಿ ಹೆಚ್ಚುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ಇನ್ನೊಂದೆಡೆ. ಗಾಳಿ, ನೀರು, ಮಣ್ಣು, ಆಹಾರ ಮತ್ತು ಅಂತಿಮವಾಗಿ ಮಾನವ ದೇಹದಲ್ಲೂ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಹೆಚ್ಚುತ್ತಿವೆ.
ಪ್ಲಾಸ್ಟಿಕ್ ವನ್ಯಜೀವಿಗಳು, ಅದರಲ್ಲೂ ಮುಖ್ಯವಾಗಿ ಸಾಗರ ಜೀವಿಗಳಿಗೂ ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ. ಯಾಕೆಂದರೆ, ಅಗಾಧ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯವು ಜಗತ್ತಿನ ಸಾಗರಗಳನ್ನು ಸೇರುತ್ತಿವೆ. ನಾವು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಹಾಗೂ ನಾವು ಪ್ಲಾಸ್ಟಿಕನ್ನು ಉತ್ಪಾದಿಸುವ, ಬಳಸುವ ಮತ್ತು ವಿಲೇವಾರಿ ಮಾಡುವ ವಿಧಾನಗಳನ್ನು ಬದಲಿಸದಿದ್ದರೆ, ಜಲ ಪರಿಸರ ವ್ಯವಸ್ಥೆಗಳಿಗೆ ಸೇರ್ಪಡೆಯಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯವು 2040ರ ವೇಳೆಗೆ ಮೂರು ಪಟ್ಟುಗಿಂತಲೂ ಅಧಿಕಗೊಳ್ಳಬಹುದು. ಅಂದರೆ 2016ರಲ್ಲಿದ್ದ ವರ್ಷಕ್ಕೆ 90 ಲಕ್ಷದಿಂದ 1.4 ಕೋಟಿ ಟನ್‌ನಿಂದ 2040ರ ವೇಳೆಗೆ ವರ್ಷಕ್ಕೆ 2.3 ಕೋಟಿಯಿಂದ 3.7 ಕೋಟಿ ಟನ್ ತಲುಪಬಹುದು ಎಂದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ತಿಳಿಸಿದೆ.
ಪೆಟ್ರೋಲಿಯಮ್ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಹಿತಾಸಕ್ತಿ ಹೊಂದಿರುವವರು, ಪ್ಲಾಸ್ಟಿಕ್ ಮಾಲಿನ್ಯ ನಿವಾರಣೆಗೆ ಹೊಂದಿರುವ ಪರಿಹಾರವೆಂದರೆ- ಮರುಬಳಕೆ. ಇದು ಸಮಸ್ಯೆ ಸೃಷ್ಟಿಯಾದ ಮೇಲೆ ಅದರ ನಿವಾರಣೆಗೆ ಪ್ರಯತ್ನಿಸುವ ವಿಧಾನ. ಆದರೆ, ಈ ವಿಧಾನವು ತಲೆಮಾರುಗಳಿಂದ ವೈಫಲ್ಯವನ್ನು ಅನುಭವಿಸುತ್ತಾ ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ಹೇಳುವಂತೆ, ‘‘ಈವರೆಗೆ (1950ರ ದಶಕದ ಬಳಿಕ) ಜಗತ್ತಿನಾದ್ಯಂತ ಉತ್ಪಾದನೆಯಾಗಿರುವ 700 ಕೋಟಿ ಟನ್ ಪ್ಲಾಸ್ಟಿಕ್ ತ್ಯಾಜ್ಯದ ಪೈಕಿ ಶೇ. 10ಕ್ಕಿಂತಲೂ ಕಡಿಮೆ ಪ್ರಮಾಣದ ಪ್ಲಾಸ್ಟಿಕ್‌ನ ಮರುಬಳಕೆಯಾಗಿದೆ’’. ಮರುಬಳಕೆ ತಂತ್ರಜ್ಞಾನದಲ್ಲಿ ಇತ್ತೀಚೆಗೆ ಅಗಾಧ ಪ್ರಗತಿ ಸಾಧ್ಯವಾಗಿದ್ದರೂ, ಪ್ಲಾಸ್ಟಿಕ್ ಉತ್ಪಾದನೆಯಲ್ಲಿ ಮರುಬಳಕೆ ಪ್ಲಾಸ್ಟಿಕ್‌ನ ಪ್ರಮಾಣ ಜಗತ್ತಿನಾದ್ಯಂತ ಶೋಚನೀಯವೆನಿಸುವಷ್ಟು ಕಡಿಮೆ ಪ್ರಮಾಣದಲ್ಲಿದೆ. ಕಳಪೆ ಪರಿಸರ ಕಾನೂನುಗಳನ್ನು ಹೊಂದಿರುವ ದೇಶಗಳಿಗೆ (ಮುಖ್ಯವಾಗಿ ಬಡ ದೇಶಗಳಿಗೆ) ಪ್ಲಾಸ್ಟಿಕ್ ತ್ಯಾಜ್ಯದ ಪರ್ವತಗಳೇ ಹರಿದುಬರುತ್ತಿವೆ.
ಈಗಲೂ ಮರುಬಳಕೆಯು ಮಹತ್ವದ್ದಾಗಿದೆ. ಆದರೆ, ಪ್ಲಾಸ್ಟಿಕ್ ಮಾಲಿನ್ಯ ಬಿಕ್ಕಟ್ಟಿನ ಪರಿಹಾರಕ್ಕೆ ಉತ್ಪಾದನೆಗಿಂತ ಹಲವು ಹಂತಗಳ ಮೊದಲೇ, ಅಂದರೆ ಮೂಲ ಮತ್ತು ಬೇಡಿಕೆ ಹಂತದಲ್ಲೇ ತೆಗೆದುಕೊಳ್ಳಬೇಕಾದ ಕ್ಷಿಪ್ರ ಮತ್ತು ಪ್ರಾಯೋಗಿಕ ಕ್ರಮಗಳ ಅಗತ್ಯವಿದೆ.

ಬದಲಾವಣೆಯ ಗಾಳಿ
ಪ್ಲಾಸ್ಟಿಕ್ ತ್ಯಾಜ್ಯವನ್ನು ಮೂಲದಲ್ಲೇ ಇಲ್ಲವಾಗಿಸುವ ರಾಜಕೀಯ ಇಚ್ಛಾಶಕ್ತಿಯ ಅನುಪಸ್ಥಿತಿಯ ಹಿನ್ನೆಲೆಯಲ್ಲಿ, ಮಾಲಿನ್ಯವನ್ನು ಕಡಿಮೆಗೊಳಿಸುವ ಹೊಣೆ ಅದರ ನಂತರದಲ್ಲಿ ಬರುವ ಪೂರೈಕೆದಾರರು ಮತ್ತು ಅಂತಿಮವಾಗಿ ಬಳಕೆದಾರರ ಮೇಲಿದೆ.
ಇದು ಅಸಾಧ್ಯವಾದುದೇನೂ ಅಲ್ಲ. ನೂತನ ವ್ಯಾಪಾರ ಮಾದರಿಗಳನ್ನು ಅವಲಂಬಿಸುವ ಕಂಪೆನಿಗಳ ಲಾಭಾಂಶ ಹೆಚ್ಚಿದಾಗ ಸಹಜವಾಗಿಯೇ ಜಾಗತಿಕ ಆರ್ಥಿಕತೆಯು ಇಂಥ ಕಂಪೆನಿಗಳನ್ನು ಅವಲಂಬಿಸಲು ಆರಂಭಿಸುತ್ತದೆ. ಇದು ಸಾಧ್ಯವಾಗಬೇಕಾದರೆ ಸರಕಾರದ ನೀತಿಗಳು ಹಾಗೂ ಮತದಾರರು, ಬಳಕೆದಾರರು ಮತ್ತು ಉದ್ದಿಮೆಗಳಲ್ಲಿ ಹಿತಾಸಕ್ತಿ ಹೊಂದಿರುವವರ ಬೆಂಬಲದ ಅಗತ್ಯವಿದೆ.
ಸಾಗರಗಳನ್ನು ಪ್ಲಾಸ್ಟಿಕ್ ತ್ಯಾಜ್ಯ ಆವರಿಸಿರುವ ವಿಷಯದಲ್ಲಿ ಜನರಲ್ಲಿ ಜಾಗೃತಿಯ ಮಟ್ಟ ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಪ್ಲಾಸ್ಟಿಕ್‌ನಿಂದ ಅವರಿಸಿರುವ ಆಮೆಗಳು ಮತ್ತು ಇತರ ಸಾಗರ ಜೀವಿಗಳು ಜನರಲ್ಲಿ ಭಾವಾವೇಶವನ್ನು ಹುಟ್ಟಿಸಬಹುದು. ಇಂಥ ಚಿತ್ರಗಳು ರಸ್ತೆಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಮತ್ತು ತ್ಯಾಜ್ಯ ಗುಂಡಿಗಳಲ್ಲಿರುವ ಪ್ಲಾಸ್ಟಿಕ್ ರಾಶಿಗಿಂತ ಹೆಚ್ಚಾಗಿ ಜನರ ಗಮನವನ್ನು ಸೆಳೆಯಬಹುದು. ಸಾಗರಗಳಲ್ಲಿ ರಾಶಿ ಬಿದ್ದಿರುವ ಪ್ಲಾಸ್ಟಿಕ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವಲ್ಲಿ ಪ್ರವಾಸೋದ್ಯಮ, ಹೊಟೇಲ್ ಉದ್ಯಮ ಮತ್ತು ಮತ್ಸೋದ್ಯಮದಲ್ಲಿ ತೊಡಗಿರುವ ವ್ಯಕ್ತಿಗಳು ಹೆಚ್ಚಿನ ಹಿತಾಸಕ್ತಿಯನ್ನು ಹೊಂದಿದ್ದಾರೆ.
ನೂತನ ಮರುಬಳಕೆ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸುದ್ದಿಯೂ ಈಗ ಚಾಲ್ತಿಯಲ್ಲಿದೆ. ಈ ತಂತ್ರಜ್ಞಾನದ ಸಹಾಯದಿಂದ ಪ್ಲಾಸ್ಟಿಕ್ ಉತ್ಪಾದಕರು ಸಾಗರದಿಂದ ಸಂಗ್ರಹಿಸಲಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿ ಹೊಸ ಪ್ಲಾಸ್ಟಿಕ್ ಉತ್ಪನ್ನಗಳನ್ನು ಉತ್ಪಾದಿಸಬಹುದಾಗಿದೆ. ಆದರೆ, ಪ್ಲಾಸ್ಟಿಕ್ ಮತ್ತೊಮ್ಮೆ ಸಾಗರಗಳನ್ನು ತಲುಪುವುದನ್ನು ತಡೆಯುವುದಕ್ಕಾಗಿ, ಈ ತಂತ್ರಜ್ಞಾನವನ್ನು ಆರಂಭದಿಂದ ಕೊನೆಯವರೆಗೆ ಹಾಗೂ ಕೊನೆಯಿಂದ ಮತ್ತೆ ಆರಂಭದವರೆಗೆ ಸಮಗ್ರವಾಗಿ ಅನುಷ್ಠಾನಗೊಳಿಸಬೇಕಾಗುತ್ತದೆ.
ಇದೇ ಮಾದರಿಯಲ್ಲಿ, ಉತ್ಪಾದಕರು ಇಂಗಾಲದ ಡೈ ಆಕ್ಸೈಡ್ ಮರುಬಳಕೆಯ ನೂತನ ತಂತ್ರಜ್ಞಾನವನ್ನು ಬಳಸಬಹುದಾಗಿದೆ. ಹೀಗೆ ಮಾಡುವುದರಿಂದ, ಉದ್ಯಮಿಗಳು ಪರಿಸರ ಸುಧಾರಣೆಗೆ ದೇಣಿಗೆ ನೀಡುವುದರ ಜೊತೆಗೆ, ತಮ್ಮ ಮೇಲಿನ ಜನರ ನಿಷ್ಠೆಯನ್ನು ಹೆಚ್ಚಿಸಬಹುದಾಗಿದೆ. ಇಂಗಾಲದ ಡೈ ಆಕ್ಸೈಡ್ ಮರುಬಳಕೆ ಕ್ಷೇತ್ರದಲ್ಲಿ ಲಾಂಝಾಟೆಕ್ ಎಂಬ ಕಂಪೆನಿ ಉತ್ತಮ ಪ್ರಗತಿಯನ್ನು ಸಾಧಿಸಿದೆ. ಕೈಗಾರಿಕೆಗಳ ತ್ಯಾಜ್ಯ ಅನಿಲಗಳು ಮತ್ತು ಜೈವಿಕ ಅನಿಲವನ್ನು ಅರಗಿಸಿಕೊಳ್ಳಲು ಕಂಪೆನಿಯು ತನ್ನ ಸೂಕ್ಷ್ಮಾಣುಜೀವಿಗಳನ್ನು ರೂಪಿಸಿದೆ.

ತಮ್ಮ ಉತ್ಪಾದನೆಯಲ್ಲಿ ಮರುಬಳಕೆಯ ಪ್ಲಾಸ್ಟಿಕನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರಿಸಿಕೊಳ್ಳಲು ಉತ್ಪಾದಕರನ್ನು ಉತ್ತೇಜಿಸುವ ನೂತನ ತಂತ್ರಜ್ಞಾನಗಳು ಹೆಚ್ಚೆಚ್ಚು ಬರುತ್ತಿರುವುದು ನೂತನ ಪ್ರವೃತ್ತಿಯಾಗಿದೆ. ಹಿಂದೆ, ಮರುಬಳಕೆಯ ಪ್ಲಾಸ್ಟಿಕ್‌ಗಳಿಂದ ತಯಾರಿಸಲಾದ ಬಾಟಲಿಗಳು ಮತ್ತು ಇತರ ಉತ್ಪನ್ನಗಳು ಬಾಳಿಕೆ ವಿಚಾರದಲ್ಲಿ ವಿಫಲವಾಗುತ್ತಿದ್ದವು. ಈಗಿನ ತಂತ್ರಜ್ಞಾನದಲ್ಲಿ, ಪ್ಲಾಸ್ಟಿಕ್ ಉತ್ಪಾದಕರು ಮರುಬಳಕೆಯ ಪ್ಲಾಸ್ಟಿಕ್‌ಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ. ಯಾಕೆಂದರೆ ಮರುಬಳಕೆಯ ಪ್ಲಾಸ್ಟಿಕ್ ಮೂಲ ಕಚ್ಚಾವಸ್ತುವಿನಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿದೆ.
ಈ ಎಲ್ಲಾ ಪ್ರವೃತ್ತಿಗಳು ಈಗ ಬದಲಾವಣೆಯ ಪ್ರಮುಖ ಹರಿಕಾರನಾಗಿ ಹೊರಹೊಮ್ಮಲು ಆರಂಭಿಸಿವೆ. ಆದರೆ, ಇಲ್ಲೊಂದು ಸಮಸ್ಯೆಯಿದೆ. ಪೆಟ್ರೋಲಿಯಮ್ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಹಿತಾಸಕ್ತಿ ಹೊಂದಿರುವವರನ್ನು ಅದರಿಂದ ಹೊರಬರಲು ಪ್ರೇರೇಪಿಸುವ ಯಾವುದೇ ಉತ್ತೇಜಕಗಳಿಲ್ಲ.
ವಾಸ್ತವವಾಗಿ, ಪೆಟ್ರೋಕೆಮಿಕಲ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕೆಲವು ಕಂಪೆನಿಗಳಿಗೆ ನವೀಕರಿಸಬಹುದಾದ ಇಂಧನ ಕ್ಷೇತ್ರವೆನ್ನುವುದು ತಮ್ಮ ಪೆಟ್ರೋಕೆಮಿಕಲ್ ಕ್ಷೇತ್ರದ ಚಟುವಟಿಕೆಗಳನ್ನು ಸಹ್ಯವಾಗಿಸುವ ಉಪಕ್ರಮಗಳೆಂಬಂತೆ ಕಂಡುಬರುತ್ತಿದೆ. ಇದಕ್ಕೆ ಉದಾಹರಣೆ ಅಮೆರಿಕದ ಶೆಲ್ ತೈಲ ಕಂಪೆನಿ. ಅದು ಗಾಳಿ ವಿದ್ಯುತ್ ಮತ್ತು ಸೌರ ವಿದ್ಯುತ್‌ನ ಹೆಸರಿನಲ್ಲಿ ತನ್ನ ಪೆಟ್ರೋಕೆಮಿಕಲ್ ಚಟುವಟಿಕೆಗಳನ್ನು ವಿಸ್ತರಿಸುತ್ತಿದೆ. ಇದಕ್ಕೆ ಇನ್ನೊಂದು ದೊಡ್ಡ ಉದಾಹರಣೆಯೆಂದರೆ ಎಕ್ಸಾನ್‌ಮೊಬೈಲ್. ಅದು ನಿರಂತರವಾಗಿ ತನ್ನ ಭವಿಷ್ಯದ ಆ್ಯಲ್ಜಿ (ಪಾಚಿ) ಜೈವಿಕ ಇಂಧನದ ಬಗ್ಗೆ ಮಾತನಾಡುತ್ತಾ ಪೆಟ್ರೋಕೆಮಿಕಲ್ ಕ್ಷೇತ್ರದ ಕಾರ್ಯಾಚರಣೆಯನ್ನು ಮುಂದುವರಿಸುತ್ತಿದೆ. ಹಾವಸೆ ಜೈವಿಕ ಇಂಧನದ ವಾಣಿಜ್ಯ ಉತ್ಪಾದನೆಗೆ ಇನ್ನೂ ದಶಕಗಳ ಕಾಲಾವಕಾಶ ಬೇಕು.

ಜನರ ಮತ್ತು ಭೂಮಿಯ ಆರೋಗ್ಯದ ಮೇಲೆ ಪ್ಲಾಸ್ಟಿಕ್ ಯಾವುದೇ ದುಷ್ಟರಿಣಾಮಗಳನ್ನು ಬೀರಿದರೂ, ಪೆಟ್ರೋಕೆಮಿಕಲ್ ಉದ್ಯಮವು ಜನರ ಪ್ಲಾಸ್ಟಿಕ್ ಅವಲಂಬನೆಯನ್ನು ಹೆಚ್ಚಿಸುತ್ತಲೇ ಹೋಗುತ್ತದೆ. ಪ್ಲಾಸ್ಟಿಕ್ ಮಾಲಿನ್ಯವನ್ನು ಮೂಲದಲ್ಲೇ ಇಲ್ಲದಂತೆ ಮಾಡಲು ನೀತಿ ನಿರೂಪಕರು, ಮತದಾರರು ಮತ್ತು ಬಳಕೆದಾರರು ಒಂದಾಗಿ ಕೈಗಳನ್ನು ಎತ್ತಬೇಕಾಗಿದೆ.

 ಕೃಪೆ: countercurrents.org

Writer - ಟೀನಾ ಕ್ಯಾಸಿ

contributor

Editor - ಟೀನಾ ಕ್ಯಾಸಿ

contributor

Similar News