ಜಗತ್ತಿನ ಹಲವು ರಾಷ್ಟ್ರಗಳಲ್ಲಿರುವಂತೆ ಖಾಸಗಿ ರಂಗದಲ್ಲಿ ನಮ್ಮಲ್ಲೂ ಮೀಸಲಾತಿ ಬೇಕು

Update: 2022-10-16 06:15 GMT

ಇತ್ತೀಚೆಗೆ ರಾಜ್ಯ ಸರಕಾರ ಎಸ್‌ಸಿ, ಎಸ್‌ಟಿ ಮೀಸಲಾತಿ ಪ್ರಮಾಣದ ಹೆಚ್ಚಳದ ಬಗ್ಗೆ ನಿರ್ಧಾರ ಮಾಡಿದೆ. ರಾಜ್ಯದೆಲ್ಲೆಡೆ ಮೀಸಲಾತಿ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದ್ದು, ನಾಡಿನ ಹಿರಿಯ ಚಿಂತಕರಾದ ಎನ್. ಅನಂತ ನಾಯ್ಕ್ ತಮ್ಮ ಅಭಿಪ್ರಾಯವನ್ನಿಲ್ಲಿ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರಕಾರ ನ್ಯಾ. ನಾಗಮೋಹನ್ ದಾಸ್ ಅವರ ಆಯೋಗದ ವರದಿಯನ್ನು ಯಥಾವತ್ತಾಗಿ ಅಂಗೀಕರಿಸಿ ಸಚಿವ ಸಂಪುಟದಲ್ಲಿ ನಿರ್ಣಯವನ್ನು ಮಾಡಿದೆ. ಅದಕ್ಕೂ ಮೊದಲು ಸರ್ವಪಕ್ಷಗಳ ಸಭೆಯಲ್ಲಿ ಒಮ್ಮತವನ್ನು ಪಡೆದದ್ದನ್ನೂ ನೋಡಿದ್ದೇವೆ. ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಯಾಗಬೇಕೆಂದು ರಾಜನಳ್ಳಿ ವಾಲ್ಮೀಕಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಯವರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿ ಸತ್ಯಾಗ್ರಹವನ್ನು ಮಾಡುತ್ತಿದ್ದರು. ಜಿಲ್ಲೆ ತಾಲೂಕು ಮಟ್ಟದಲ್ಲಿ ಹೋರಾಟವನ್ನು ಕಟ್ಟಿದ್ದಲ್ಲದೆ, ವಾಲ್ಮೀಕಿ ಜಯಂತಿಯನ್ನು ಬಹಿಷ್ಕರಿಸಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡುವುದಕ್ಕೆ ತೀರ್ಮಾನ ಮಾಡಿದ್ದರು. ಅವರ ಹೋರಾಟಕ್ಕೆ ಮಣಿದು ಸರಕಾರ ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಜಾರಿಮಾಡುವ ನಿರ್ಣಯವನ್ನು ತೆಗೆದುಕೊಂಡಿದೆ.

ಆ ತೀರ್ಮಾನದ ಭಾಗವಾಗಿ ಅಧಿಸೂಚನೆ ಹೊರಡಿಸಬೇಕಾಗಿದೆ. ಅಧಿಸೂಚನೆಯನ್ನು ಹೊರಡಿಸಿದರಷ್ಟೇ ಸಾಕಾಗುವುದಿಲ್ಲ. ಈ ಮೀಸಲಾತಿ ಹೆಚ್ಚಳದ ಪ್ರಕ್ರಿಯೆಗೆ ಒಂದು ಸಾಂವಿಧಾನಿಕವಾದ ಸಂರಕ್ಷಣೆ ಕೊಡಬೇಕೆಂದಾದರೆ ವಿಧಾನಸಭೆ ಅಧಿವೇಶನವನ್ನು ಕರೆದು, ಅಲ್ಲಿ ನಿರ್ಣಯವನ್ನು ಕಾನೂನನ್ನಾಗಿ ಮಾಡಿ, ಕೇಂದ್ರ ಸರಕಾರಕ್ಕೆ ಅದನ್ನು ಶಿಫಾರಸು ಮಾಡಿ ಸಂವಿಧಾನದ 9ನೇ ಷೆಡ್ಯೂಲ್‌ನಲ್ಲಿ ಇದನ್ನು ಸೇರಿಸುವುದರ ಮುಖಾಂತರ ಒಂದು ಶಾಶ್ವತವಾದ ಪರಿಹಾರ ಮತ್ತು ಸಂರಕ್ಷಣೆಯನ್ನು ನೀಡಬೇಕಾಗುತ್ತದೆ. ಹಾಗಾದರೆ ರಾಜ್ಯ ಸರಕಾರ ಮಾಡಿದ ಈ ಶಿಫಾರಸನ್ನು ಬಿಜೆಪಿಯದ್ದೇ ಆದ ಕೇಂದ್ರ ಸರಕಾರ ಒಪ್ಪಿಕೊಳ್ಳುತ್ತದೆಯೆ? ಸಂವಿಧಾನದ 9ನೇ ಷೆಡ್ಯೂಲ್‌ನಲ್ಲಿ ಸೇರಿಸುತ್ತದೆಯೆ? ಇದನ್ನು ಮುಂದಿನ ದಿನಗಳಲ್ಲಿ ನೋಡಬೇಕು.

 ಆದರೆ ಈ ಮಧ್ಯೆ ಚರ್ಚಿತವಾಗುತ್ತಿರುವ ಒಂದು ವಿಚಾರವಿದೆ. 1992, 93, 94ರಲ್ಲಿ ಈ ದೇಶದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡಬೇಕೆಂಬ ದೊಡ್ಡ ಚರ್ಚೆ ನಡೆಯಿತು. ಆ ಸಂದರ್ಭದಲ್ಲಿ ಮಂಡಲ್ ಆಯೋಗದ ಶಿಫಾರಸನ್ನು ಕೇಂದ್ರ ಸರಕಾರ ಒಪ್ಪಿಹಿಂದುಳಿದ ವರ್ಗದವರಿಗೆ ಶೇ.27 ಮೀಸಲಾತಿಯನ್ನು ನೀಡಿತು. ಆ ಸಂದರ್ಭ ದಲ್ಲಿ ಇಂದ್ರಾ ಸಹಾನಿ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಚರ್ಚೆಗೆ ಬಂತು. ಮೀಸಲಾತಿಯನ್ನು ಈ ಪ್ರಕರಣದಲ್ಲಿ ಬಹಳ ವಿಶಾಲ ದೃಷ್ಟಿಯಿಂದ ಚರ್ಚೆ ಮಾಡಿದ ಸುಪ್ರೀಂ ಕೋರ್ಟ್, ಮೀಸಲಾತಿಯ ಪ್ರಮಾಣ ಶೇ.50 ಮೀರಬಾರದು ಎಂಬ ತೀರ್ಪು ಕೊಟ್ಟಿತು. ಈಗ ದೇಶದೊಳಗಿರುವ ಚರ್ಚೆ, ಶೇ.50 ಮೀಸಲಾತಿ ಮಾತ್ರ ಎಸ್‌ಸಿ, ಎಸ್‌ಟಿ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಇರಬೇಕು, ಇನ್ನು ಶೇ.50 ಮೀಸಲಾತಿ ಸಾಮಾನ್ಯ ವರ್ಗಕ್ಕೆ ಇರಬೇಕು ಎಂಬುದು. ಹೀಗಿದ್ದಾಗಲೂ ಕೂಡ ತಮಿಳುನಾಡು, ಜಾರ್ಖಂಡ್ ಉತ್ತರಾಖಂಡ ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಾಗಿದೆ. ತಮಿಳುನಾಡಿನಲ್ಲಿ ಶೇ.69 ಮೀಸಲಾತಿಯಿದೆ. ಜಾರ್ಖಂಡ್‌ನಲ್ಲಿ ಶೇ.72 ಇದೆ.

ಚತ್ತೀಸ್‌ಗಡದಲ್ಲಿ ಶೇ.82ರಷ್ಟು ಇದೆ. ಮಹಾರಾಷ್ಟ್ರ, ಮಧ್ಯಪ್ರದೇಶಗಳಲ್ಲೂ ಮೀಸಲಾತಿ ಹೆಚ್ಚಿದೆ. ತೆಲಂಗಾಣ ಸರಕಾರವೂ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದೆ. ಶೇ.50ರ ಮಿತಿಯನ್ನು ದಾಟಿದಂತಾಯಿತಲ್ಲವೇ ಎಂಬ ಪ್ರಶ್ನೆ ಇದೆ. ಆದರೆ ಗಮನಿಸಬೇಕಾಗಿರುವ ಅಂಶವೆಂದರೆ, ಇದೇ ಇಂದ್ರಾ ಸಹಾನಿ ಪ್ರಕರಣದಲ್ಲಿಯೇ ಸುಪ್ರೀಂ ಕೋರ್ಟ್ ಮೀಸಲಾತಿ ಮಿತಿಯನ್ನು ಮೀರುವುದರ ಕುರಿತು ಮಾತನಾಡಿದೆ. ಸುಪ್ರೀಂ ಕೋರ್ಟ ಬಹಳ ಸ್ಪಷ್ಟವಾಗಿ ಹೇಳುತ್ತದೆ: ‘‘ಶೇ.50ರ ಮಿತಿಯೆಂಬ ನಿಯಮ ಇದ್ದಾಗಲೂ ಕೂಡ ಈ ದೇಶ ಮತ್ತು ಜನತೆಯಲ್ಲಿ ಹಾಸುಹೊಕ್ಕಾಗಿರುವ ಅತಿ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ. ವಿಶೇಷ ಸಂದರ್ಭಗಳಲ್ಲಿ ಈ ನಿಯಮವನ್ನು ಮೀರಬಹುದು. ದೂರದಲ್ಲಿ, ದೇಶದ ಅಂಚಿನ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ವಂಚಿತವಾಗಿ ಬದುಕುತ್ತಿರುವ ಜನಸಮುದಾಯಗಳನ್ನು ಅಲ್ಲಿನ ವಿಲಕ್ಷಣ ಪರಿಸ್ಥಿತಿಗಳು ಮತ್ತು ಅವರ ವಿಶಿಷ್ಟತೆಗಳು ಮತ್ತು ರಾಷ್ಟ್ರದ ಮುಖ್ಯ ವಾಹಿನಿಯಿಂದ ದೂರ ಉಳಿದಿರುವ ಕಾರಣಕ್ಕಾಗಿ, ಅವರನ್ನು ಮುಖ್ಯ ವಾಹಿನಿಗೆ ತರಲು ಈ ಶೇ.50 ಮೀಸಲಾತಿಯ ಮಿತಿಯನ್ನು ಮೀರಬಹುದು.

ಅವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ, ಅವರಿಗೆ ಪ್ರಾತಿನಿಧ್ಯವನ್ನು ಕೊಡುವುದಕ್ಕೆ ಈ ಮಿತಿಯನ್ನು ಮೀರಲು ಸಾಧ್ಯವಿದೆ.’’ ಹೀಗಿದ್ದಾಗ ಸುಪ್ರೀಂ ಕೋರ್ಟ್‌ನ ಅಡೆತಡೆ ಇಲ್ಲ ಅನ್ನುವುದು ಸ್ಪಷ್ಟವಾಗುತ್ತದೆ. ಹಾಗಿದ್ದರೂ ಈ ಚರ್ಚೆ ಮುನ್ನೆಲೆಗೆ ಬಂದಿರುವುದರಿಂದ ರಾಜ್ಯ ಸರಕಾರದ ನಿರ್ಣಯ ಏನಾದೀತು ಎನ್ನುವುದನ್ನು ಕಾದುನೋಡಬೇಕಾಗುತ್ತದೆ. ರಾಜ್ಯ ಸರಕಾರ ಇಂದ್ರಾ ಸಹಾನಿ ಕೇಸ್‌ನ ತೀರ್ಪನ್ನು ಉಲ್ಲೇಖಿಸುವ ಮೂಲಕ ಮೀಸಲಾತಿ ಒಂದು ಮೂಲಭೂತ ಹಕ್ಕು, ಸಂವಿಧಾನದ ಮೂಲತತ್ವ ಎಂದು ಹೇಳಿ ಕೇಂದ್ರ ಸರಕಾರಕ್ಕೆ ಮತ್ತು ಲೋಕಸಭೆಗೆ, ನ್ಯಾಯಾಲಯಕ್ಕೆ ಅದನ್ನು ಅರ್ಥ ಮಾಡಿಸಬೇಕಾಗುತ್ತದೆ. ಸಂವಿಧಾನದ ಮೂಲತತ್ವಗಳ ಭಾಗವಾಗಿ ಸಾಮಾಜಿಕ ನ್ಯಾಯವೂ ಒಂದು. ಸಾಮಾಜಿಕ ನ್ಯಾಯದ ಭಾಗವಾಗಿ ಮೀಸಲಾತಿಯೂ ಅಗತ್ಯದ ಮತ್ತು ಪ್ರಾತಿನಿಧ್ಯದ ಅವಕಾಶ. ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಪ್ರಾತಿನಿಧ್ಯದ ಕಾರಣಕ್ಕಾಗಿ ಸಂವಿಧಾನದ ಮೂಲತತ್ವವೆಂದು ಸರಕಾರವು ನ್ಯಾಯಾಲಯದೆದುರು ಮತ್ತು ಕೇಂದ್ರ ಸರಕಾರದೆದುರು ಹೇಳುವ ಮೂಲಕ ಈ ನಾಡಿನ ದಲಿತ ಪರಿಶಿಷ್ಟ ಜಾತಿ ಪಂಗಡದ ಸಮುದಾಯಗಳ ಹಿತರಕ್ಷಣೆಯನ್ನು ಮಾಡೀತಾ ಎನ್ನುವ ಪ್ರಶ್ನೆ ನಮ್ಮೆದುರು ಇದೆ. ಮೀಸಲಾತಿ ಎನ್ನುವುದು ಭಿಕ್ಷೆಯಲ್ಲ.

ಯಾವುದೋ ಕೃಪಾಕಟಾಕ್ಷದ ದಾನವಲ್ಲ. ಮೀಸಲಾತಿ ಈ ನೆಲಮೂಲದ ಸಮುದಾಯಗಳ ಹಕ್ಕು. ಅವರಿಗೆ ಸಾಂವಿಧಾನಿಕವಾಗಿ ಕೊಡಬೇಕಿರುವ ಪ್ರಾತಿನಿಧ್ಯವನ್ನು ಕೊಡದೇ ಇರುವ ಕಾರಣಕ್ಕಾಗಿ ಅದನ್ನು ಕೊಡಬೇಕಾಗುತ್ತದೆ. ತಲೆತಲಾಂತರಗಳಿಂದ ಜಾತಿಶ್ರೇಷ್ಠತೆಯ ಕಾರಣಕ್ಕಾಗಿ ಜಾತಿ ತಾರತಮ್ಯಗಳನ್ನು, ದೌರ್ಜನ್ಯ, ದಬ್ಬಾಳಿಕೆಗಳನ್ನು, ಮಾಡುತ್ತ ಅವರನ್ನು ಅವಕಾಶಗಳಿಂದ ದೂರ ಇಟ್ಟಿರುವುದಕ್ಕಾಗಿ ಮತ್ತೆ ಅವರನ್ನು ಮುಖ್ಯವಾಹಿನಿಗೆ ತಂದು ಸರಕಾರದ ಸೇವೆಯ ಮತ್ತು ಸಮಾಜದ ಮುಖ್ಯ ವಾಹಿನಿಯ ಎಲ್ಲ ಅವಕಾಶಗಳಲ್ಲಿ ಅವರು ಇರಬೇಕು ಎನ್ನುವ ಕಾರಣಕ್ಕೆ ಅದನ್ನು ಕೊಡಬೇಕು. ಇಲ್ಲಿ ಈ ಸಮುದಾಯಗಳ ಬಗ್ಗೆ ನಿಖರ ಅಧ್ಯಯನದ ಅಗತ್ಯ ಇದೆ. ಬಹುಶಃ ಈ ದೇಶದೊಳಗೆ ಬ್ರಿಟಿಷರ ಕಾಲದಲ್ಲಿ ಈ ಸಮುದಾಯಗಳ ಜಾತಿ ಸಮೀಕ್ಷೆಯನ್ನು, ಆರ್ಥಿಕ ಸಮೀಕ್ಷೆಯನ್ನು, ಶೈಕ್ಷಣಿಕ ಸ್ಥಿತಿಗತಿಗಳನ್ನು, ಆದಾಯದ ಮೂಲಗಳನ್ನು, ಭೂಮಿಯ ಒಡೆತನವನ್ನು ಅಧ್ಯಯನ ಮಾಡುವ ಸಣ್ಣ ಪ್ರಯತ್ನ ನಡೆದಿತ್ತು. ಆದರೆ ಇಲ್ಲಿಯವರೆಗೂ ಆನಂತರದ ಅವಧಿಯಲ್ಲಿ ಸಮೀಕ್ಷೆಗಳೇ ಆಗಲಿಲ್ಲ. ಈ ಸಮುದಾಯಗಳ ನಿಜವಾದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳೇನು, ಇವರು ಯಾವ ಪ್ರಮಾಣದಲ್ಲಿ ಹಿಂದುಳಿದಿದ್ದಾರೆ ಎಂಬುದು ನಿಗೂಢವಾಗಿಯೇ ಇದೆ.

ಸಿದ್ದರಾಮಯ್ಯನವರ ಸರಕಾರ ಕಾಂತರಾಜು ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದಾಗ ಅವರ ನೇತೃತ್ವದಲ್ಲಿ ಸಮೀಕ್ಷೆಯನ್ನು ಮಾಡಿತು. ಆ ಸಮೀಕ್ಷೆ ವರದಿಯನ್ನು ಈವರೆಗೂ ಬಹಿರಂಗಗೊಳಿಸುವ ಕೆಲಸವನ್ನು ರಾಜ್ಯ ಸರಕಾರಗಳು ಮಾಡಲಿಲ್ಲ. ರಾಜಕೀಯ ಕಾರಣಗಳಿಗಾಗಿ ಆ ವರದಿ ಧೂಳು ತಿನ್ನುತ್ತಿದೆ. ಹೀಗೆ ಈ ಸಮುದಾಯಗಳ ಸ್ಥಿತಿಗತಿ ಏನೆಂಬುದು ಯಾರಿಗೂ ತಿಳಿಯದಂತಾಗಿದೆ. ಇದರಿಂದಾಗಿಯೇ ಇಂದು ಮೀಸಲಾತಿಯ ಪ್ರಶ್ನೆಗಳನ್ನು ಇತ್ಯರ್ಥಗೊಳಿಸಲು ಆಗುತ್ತಿಲ್ಲ. ಸಮುದಾಯಗಳ ಮಧ್ಯೆ ಯಾರಿಗೆ ಎಷ್ಟು ಅವಕಾಶ ಸಿಕ್ಕಿದೆ, ಯಾರಿಗೆ ಸಿಕ್ಕಿಲ್ಲ, ಯಾಕೆ ಸಿಕ್ಕಿಲ್ಲ, ಸಿಕ್ಕಿರುವುದಕ್ಕೆ ಮತ್ತು ಸಿಗದಿರುವುದಕ್ಕೆ ಕಾರಣಗಳೇನು, ಸರಕಾರದ ನ್ಯೂನತೆಗಳೇನು ಇವನ್ನೆಲ್ಲ ತಿಳಿದುಕೊಳ್ಳಲು ಈ ವರದಿ ಬಹಿರಂಗಗೊಳ್ಳಬೇಕಾಗಿದೆ. ವರದಿ ಬಹಿರಂಗಗೊಳ್ಳದೆ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತಿದೆ. ಭಡ್ತಿ ಮೀಸಲಾತಿಯ ಪ್ರಶ್ನೆ ಉಲ್ಬಣಗೊಂಡಿದ್ದು, ಒಳಮೀಸಲಾತಿ ವರ್ಗೀಕರಣದ ಪ್ರಶ್ನೆ ಇನ್ನೂ ಇತ್ಯರ್ಥವಾಗದಿದ್ದುದು, ಅನಗತ್ಯವಾಗಿ ಒಂದು ಗುಂಪಿನ ವಿರುದ್ಧ ಮತ್ತೊಂದು ಗುಂಪಿನವರು ಕಿರುಚಾಡುವಂತಾಗಿರುವುದು, ದಾಳಿ, ಟೀಕೆ ಮಾಡುವುದು, ಈ ಕಾರಣದಿಂದಾಗಿಯೇ. ವಸ್ತುನಿಷ್ಠವಾಗಿ ವೈಜ್ಞಾನಿಕವಾಗಿ ಪ್ರಾತಿನಿಧ್ಯ ಕೊಡಬೇಕೆಂದಾದರೆ ಈ ಸಮುದಾಯಗಳ ಸ್ಥಿತಿಗತಿ ತಿಳಿಯಲೇಬೇಕು. ಇದೆಲ್ಲ ಕಾರಣಕ್ಕಾಗಿ ಆ ವರದಿ ಬಹಿರಂಗಗೊಳ್ಳಬೇಕು.

ಮೀಸಲಾತಿ ಎಂದೊಡನೆ ಸರಕಾರಿ ವಲಯದ ಮೀಸಲಾತಿಯ ಬಗ್ಗೆ ಮಾತನಾಡುತ್ತೇವೆ. ಕೇಂದ್ರ ಸರಕಾರದ ನ್ಯಾಯಾಂಗ ಇಲಾಖೆಯಲ್ಲಿ ಸುಪ್ರೀಂ ಕೋರ್ಟ್ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳನ್ನು ನೇಮಕ ಮಾಡುವುದರಲ್ಲಿ ಮೀಸಲಾತಿ ಅನ್ಯಯಿಸುವುದಿಲ್ಲ. ಕೇಂದ್ರ ಸರಕಾರದ ಸಚಿವಾಲಯದ ಮೀಸಲಾತಿ ಪ್ರಮಾಣ ತೆಗೆದುಕೊಂಡರೆ ಎಸ್‌ಸಿ,ಎಸ್‌ಟಿಗಳಿಗೆ ಬೆರಳೆಣಿಕೆಯ ಹುದ್ದೆಗಳು. ಅಲ್ಲಿಯೂ ಸೂಕ್ತ ಪ್ರಾತಿನಿಧ್ಯ ಇಲ್ಲ. ಇದು ಒಂದೆಡೆಯಾದರೆ, ಇನ್ನೊಂದೆಡೆ ಸರಕಾರಿ ಸ್ವಾಮ್ಯದ ಸಂಸ್ಥೆಗಳು ತುಂಬ ಕಡಿಮೆ. ಸರಕಾರದ ಅಂಕಿಅಂಶಗಳ ಪ್ರಕಾರ, ಇಂದು ಶೇ.2 ಮಾತ್ರ ಸರಕಾರಿ ಉದ್ಯಮಗಳಿವೆ. ಶೇ.98 ಖಾಸಗಿ ಉದ್ಯಮಗಳು. ಖಾಸಗಿ ಉದ್ಯೋಗಗಳಲ್ಲಿ ಎಲ್ಲಿಯೂ ಸಾಮಾಜಿಕ ನ್ಯಾಯ ಇಲ್ಲ. ಖಾಸಗಿ ವಲಯದಲ್ಲಿ ಸಂಘಟಿತ ಮತ್ತು ಅಸಂಘಟಿತ ಖಾಸಗಿ ವಲಯ ಎಂದು ಎರಡು ಬಗೆ.

ಸಂಘಟಿತ ಖಾಸಗಿ ವಲಯದಲ್ಲಿ ಮೀಸಲಾತಿಯನ್ನು ಅಳವಡಿಸಿ ಹಿಂದುಳಿದ ವರ್ಗದವರಿಗೆ, ಅಲ್ಪಸಂಖ್ಯಾತರಿಗೆ, ಎಸ್‌ಸಿ, ಎಸ್‌ಟಿಗಳಿಗೆ ಪ್ರಾತಿನಿಧ್ಯವನ್ನು ಕೊಡುವ ಕಾನೂನು ತರಬೇಕಾಗುತ್ತದೆ. ಜಗತ್ತಿನ ಬೇರೆ ಬೇರೆ ದೇಶಗಳು ಖಾಸಗಿ ರಂಗದಲ್ಲಿಯೂ ಮೀಸಲಾತಿಯನ್ನು ತಂದಾಗಿದೆ. ಅಮೆರಿಕದಲ್ಲಿ ಅದು ಈಗಾಗಲೇ ಜಾರಿಯಲ್ಲಿದೆ. ದಕ್ಷಿಣ ಆಫ್ರಿಕಾದಲ್ಲಿದೆ. ಹೀಗೆ ಬೇರೆ ಬೇರೆ ದೇಶಗಳಲ್ಲಿರುವುದನ್ನು ನಮ್ಮ ದೇಶಕ್ಕೆ ಅನ್ವಯಿಸಬೇಕಾಗುತ್ತದೆ. ಇವತ್ತು ಯಾವುದೇ ಸರಕಾರದ ಇಲಾಖೆಗಳನ್ನು ತೆಗೆದುಕೊಂಡರೆ ಹೊರಗುತ್ತಿಗೆ, ಗುತ್ತಿಗೆ, ಅರೆಕಾಲಿಕ, ಅತಿಥಿ ಶಿಕ್ಷಕರು, ಅತಿಥಿ ನೌಕರರು ಈ ರೀತಿಯ ಪರಿಕಲ್ಪನೆಯೇ ಕೆಲಸ ಮಾಡುತ್ತಿದೆ. ಅಲ್ಲೆಲ್ಲೂ ಸಾಮಾಜಿಕ ನ್ಯಾಯ ಪಾಲನೆಯಾಗುತ್ತಿಲ್ಲ.

ಅಲ್ಲಿಯೂ ಈ ಪ್ರಾತಿನಿಧ್ಯವನ್ನು ಕೊಡುವುದು ಸಾಧ್ಯವಾದರೆ, ಈ ನಾಡಿನ ನೆಲಮೂಲದ ಸಂಸ್ಕೃತಿಯ ಮೂಲನಿವಾಸಿ ಸಮುದಾಯಗಳ ಪ್ರಾತಿನಿಧ್ಯಕ್ಕೆ ಅವಕಾಶ ಕೊಟ್ಟಂತಾಗುತ್ತದೆ. ಸಂಘಟಿತ ಖಾಸಗಿ ರಂಗದಲ್ಲಿ ಮೀಸಲಾತಿಗಾಗಿ ಧ್ವನಿಯೆತ್ತುವುದಷ್ಟೇ ಅಲ್ಲದೆ ರಾಜ್ಯ, ಕೇಂದ್ರ ಸರಕಾರಗಳು ಅದಕ್ಕೊಂದು ಕಾನೂನು ಮಾಡಬೇಕಾಗುತ್ತದೆ. ಆ ಕಾನೂನು ಮಾಡಲು ಅಗತ್ಯವಾದ ಒತ್ತಡಗಳನ್ನು ಈ ನಾಡಿನ ಜನಸಂಘಟನೆಗಳು ಮಾಡಬೇಕು. ಆಗ ಮಾತ್ರ ಸಾಮಾಜಿಕ ನ್ಯಾಯಕ್ಕೆ ಸಂವಿಧಾನದ ಸಾಮಾಜಿಕ ಮೌಲ್ಯಗಳಿಗೆ ಮತ್ತು ಸಮಾನತೆಯ ತತ್ವಕ್ಕೆ ನಾವು ಗೌರವ ಕೊಟ್ಟಂತಾಗುತ್ತದೆ. ಅಂಬೇಡ್ಕರರು ಬಯಸಿದಂಥ ಸಮಾನತೆ, ಸಹೋದರತೆಯ ಮತ್ತು ಬಲಿಷ್ಠ ಭಾರತದ ಕನಸನ್ನು ಸಾಕಾರಗೊಳಿಸಿದಂತಾಗುತ್ತದೆ.

Writer - ಎನ್. ಅನಂತ ನಾಯ್ಕ್

contributor

Editor - ಎನ್. ಅನಂತ ನಾಯ್ಕ್

contributor

Similar News