ವಕೀಲರ ಸಹಿತ ಸಾರ್ವಜನಿಕರಿಗೆ ಮುಚ್ಚಿದ ಮಂಗಳೂರು ನ್ಯಾಯಾಲಯ ಸಂಕೀರ್ಣದ ಮುಖ್ಯದ್ವಾರ
ಮಂಗಳೂರು, ಅ.16: ನ್ಯಾಯಾಲಯದ ಕಟ್ಟಡವು ಸಾರ್ವಜನಿಕರಿಗೆ ಮುಕ್ತ ಪ್ರವೇಶ ಹೊಂದಿರುವ ಕಟ್ಟಡವಾಗಿ ದ್ದರೂ ಕೂಡ ದ.ಕ. ಜಿಲ್ಲಾ ನ್ಯಾಯಾಧೀಶರು ನಗರದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಮುಖ್ಯದ್ವಾರವು ‘ಕೇವಲ ನ್ಯಾಯಾದೀಶರಿಗೆ ಮಾತ್ರ ಪ್ರವೇಶ’ ಎನ್ನುವ ಹೊಸ ನಿಯಮವನ್ನು ಜಾರಿಗೊಳಿಸಿರುವುದು ವಕೀಲರ ವಲಯದಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಮುಖ್ಯ ದ್ವಾರದಲ್ಲಿ ವಕೀಲರ ಸಹಿತ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದ್ದು, ಶನಿವಾರವಷ್ಟೇ ಇದು ಬೆಳಕಿಗೆ ಬಂದಿದೆ. ತಕ್ಷಣ ವಕೀಲರ ಸಂಘದ ಪದಾಧಿಕಾರಿಗಳು ನ್ಯಾಯಾಧೀಶರನ್ನು ಮುಖತಃ ಭೇಟಿ ಮಾಡಿ ವಿಷಯ ಮನದಟ್ಟು ಮಾಡಿಕೊಟ್ಟರೂ ಸ್ಪಂದನ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.
ನ್ಯಾಯಾಂಗದ ಭಾಗವಾಗಿರುವ ನ್ಯಾಯವಾದಿಗಳಿಗೂ ಪ್ರವೇಶ ನಿರ್ಬಂಧಿಸಿರುವ ಜಿಲ್ಲಾ ನ್ಯಾಯಾಧೀಶ ರವೀಂದ್ರ ಎಂ. ಜೋಶಿ ಅವರ ಕ್ರಮಕ್ಕೆ ಸಾರ್ವಜನಿಕರ ವಲಯದಿಂದಲೂ ತೀವ್ರ ಟೀಕೆ ವ್ಯಕ್ತವಾಗಿದೆ.
ಜಿಲ್ಲಾ ನ್ಯಾಯಾಲಯದಲ್ಲಿ ಸುಮಾರು 30ರಷ್ಟು ನ್ಯಾಯಾಧೀಶರಿದ್ದಾರೆ. ನ್ಯಾಯಾಲಯದ ಸಂಕೀರ್ಣವು ಸರಕಾರಿ ಕಟ್ಟಡವಾಗಿದೆ. ನ್ಯಾಯಾಧೀಶರ ಭದ್ರತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇದು ಸರಿಯಲ್ಲ. ಅದನ್ನು ಸರ್ವರಿಗೂ ಮುಕ್ತವಾಗಿ ಬಳಸಲು ಅವಕಾಶ ನೀಡಬೇಕಾಗಿದೆ. ‘ನ್ಯಾಯಾಧೀಶರಿಗೆ ಮಾತ್ರ ಮುಖ್ಯದ್ವಾರ ಪ್ರವೇಶ’ ಎಂಬ ಸೂಚನೆಯ ನಾಮಫಲಕವನ್ನು ತೆರವುಗೊಳಿಸಬೇಕು ಎಂದು ಮಂಗಳೂರು ವಕೀಲರ ಸಂಘ ಒತ್ತಾಯಿಸಿದೆ.
‘ಈ ವಿಷಯ ನಮಗೆ ಶನಿವಾರ ತಿಳಿಯಿತು. ತಕ್ಷಣ ನಾವು ಚರ್ಚೆ ನಡೆಸಿ ನ್ಯಾಯಾಧೀಶರನ್ನು ಮುಖತಃ ಭೇಟಿ ಈ ಕ್ರಮ ಸರಿಯಲ್ಲ ಎಂದೆವು. ಆದರೆ ನಮ್ಮ ಮನವಿಗೆ ಅವರಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಈ ಬಗ್ಗೆ ರಾಜ್ಯ ಹೈಕೋರ್ಟ್‌ಗೂ ಮಾಹಿತಿ ನೀಡಿದ್ದೇವೆ. ಅ.18ರಂದು ಮಧ್ಯಾಹ್ನ 1 ಗಂಟೆಗೆ ವಕೀಲರ ಸಂಘದ ಸಭೆ ಕರೆಯಲಾಗಿದೆ. ಅಲ್ಲಿ ಈ ಬಗ್ಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಮಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಎಣ್ಮಕಜೆ ಪ್ರತಿಕ್ರಿಯೆ ನೀಡಿದ್ದಾರೆ.