ಲಾರಿ-ಪಿಕಪ್ ಅಪಘಾತ: ಗಾಯಾಳು ಚಾಲಕ ಮೃತ್ಯು
ಬಂಟ್ವಾಳ, ಅ.17: ಲಾರಿ ಮತ್ತು ಪಿಕಪ್ ವಾಹನಗಳ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಗಾಯಾಳು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪುಂಜಾಲಕಟ್ಟೆಯಲ್ಲಿ ಸೋಮವಾರ ನಡೆದಿದೆ.
ಪಾಂಡವರಕಲ್ಲು ನಿವಾಸಿ ಪಿಕಪ್ ವಾಹನ ಚಾಲಕ ಶಾಹಿಲ್ (19) ಮೃತರು. ಅವರ ಜತೆಯಲ್ಲಿದ್ದ ಅವಿನಾಶ್ (19) ಹಾಗೂ ಲಾರಿ ಚಾಲಕ ಧನರಾಜ್ (22) ಅವರು ಗಂಭೀರ ಗಾಯಗೊಂಡಿದ್ದು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಸಲಾಗಿದೆ.
ಪುಂಜಾಲಕಟ್ಟೆ ಪ್ರಗತಿ ಆಸ್ಪತ್ರೆ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು ಮಂಗಳೂರು ಕಡೆಯಿಂದ ಧರ್ಮಸ್ಥಳದ ಕಡೆಗೆ ಹೋಗುತ್ತಿದ್ದ ಲಾರಿ ಪುಂಜಾಲಕಟ್ಟೆಯಿಂದ ವಗ್ಗ ಕಡೆಗೆ ಹೋಗುವ ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಪಿಕಪ್ ವಾಹನದ ಬಿಡಿ ಭಾಗಗಳು ಚೆಲ್ಲಾಪಿಲ್ಲಿಯಾಗಿ ಹರಡಿವೆ.
ಅಪಘಾತ ಸಂಭವಿಸಿದ ಕೂಡಲೇ ಪುಂಜಾಲಕಟ್ಟೆ ಆಸ್ಪತ್ರೆಯ 108 ಅಂಬ್ಯುಲೆನ್ಸ್ ಚಾಲಕ ಜಗನ್ನಾಥ ಶೆಟ್ಟಿ, ಹಾಗೂ ಶ್ರೀರಾಮ ನಗರದ ಪ್ರಶಾಂತ್ ಹೆಗ್ಡೆ ಅವರು ಗಾಯಾಳುಗಳನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸುವ ಕಾರ್ಯ ಮಾಡಿದ್ದಾರೆ. ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ಭೇಟಿ ನೀಡಿದ್ದಾರೆ.