×
Ad

ಉತ್ತರ ಕರ್ನಾಟಕ ಭಾಗದ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ನೆರವಾಗಿ: ಸೈಯದ್ ಸ್ವಾದಿಕಲಿ ಶಿಹಾಬ್ ತಂಙಳ್

Update: 2022-10-17 22:54 IST

ಮಂಗಳೂರು, ಅ.17: ಕೇರಳದಿಂದ ಹೊರತಾದ ಪ್ರದೇಶಗಳಲ್ಲಿನ ಮುಸ್ಲಿಮರ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗಾಗಿ ಜನ್ಮತಾಳಿದ ‘ನ್ಯಾಶನಲ್ ಮಿಷನ್’ ಕರ್ನಾಟಕದಲ್ಲೂ ಕೆಲವು ವರ್ಷದಿಂದ ಸಕ್ರಿಯವಾಗಿ ಕಾರ್ಯಾಚರಿಸುತ್ತಿವೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಹಲವು ಪ್ರದೇಶದ ಮುಸ್ಲಿಮರಲ್ಲಿ ಇನ್ನೂ ಧಾರ್ಮಿಕ ಪ್ರಜ್ಞೆ ಮೂಡಿಲ್ಲ. ಶೈಕ್ಷಣಿಕ ಮತ್ತು ಸಾಮಾಜಿಕವಾಗಿಯೂ ಅವರು ಹಿಂದುಳಿದಿದ್ದಾರೆ. ಹಾಗಾಗಿ ಆ ಭಾಗದ ಮುಸ್ಲಿಮರ ಸರ್ವಾಂಗೀಣ ಅಭಿವೃದ್ಧಿಗೆ ರೂಪಿಸಲಾದ ಯೋಜನೆಗೆ ಸರ್ವರೂ ನೆರವು ನೀಡಬೇಕು ಎಂದು ಮುಸ್ಲಿಂ ಲೀಗ್ ಕೇರಳ ರಾಜ್ಯಾಧ್ಯಕ್ಷ ಪಾಣಕ್ಕಾಡ್ ಸೈಯದ್ ಸ್ವಾದಿಕಲಿ ಶಿಹಾಬ್ ತಂಙಳ್ ಕರೆ ನೀಡಿದರು.

‘ನ್ಯಾಶನಲ್ ಮಿಷನ್ ಕರ್ನಾಟಕ’ ವತಿಯಿಂದ 'The Message' Renaissance of umma' ಎಂಬ ವಿಷಯದಲ್ಲಿ ನಗರದ ಮಿಲಾಗ್ರಿಸ್ ಹಾಲ್‌ನಲ್ಲಿ ಸೋಮವಾರ ನಡೆದ ಸಮಾಲೋಚನೆ ಸಭೆಯ ಅಧ್ಯಕತೆ ವಹಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಅದರಲ್ಲೂ ಟಿಪ್ಪು ಸುಲ್ತಾನ್ ಕಾಲದಲ್ಲಿ ದೇಶದ ಮುಸ್ಲಿಮರು ಉಚ್ಛ್ರಾಯ ಸ್ಥಿತಿಯಲ್ಲಿದ್ದರು. ಅನೇಕ ರಾಜರು ನಾನಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೈದಿದ್ದರು. ಶೈಕ್ಷಣಿಕವಾಗಿಯೂ ಮುಂದುವರಿದಿದ್ದರು. ಅರಬ್ ದೇಶದ ವಿದ್ಯಾರ್ಥಿಗಳೂ ಭಾರತಕ್ಕೆ ವಿದ್ಯಾಭ್ಯಾಸ ಪಡೆಯಲು ಆಗಮಿಸುತ್ತಿದ್ದರು. ಆದರೆ ವಿಭಜನೆಯ ಬಳಿಕ ದೇಶ ತೀರಾ ಹಿಂದುಳಿಯ ತೊಡಗಿತು. ಉತ್ತರ ಕರ್ನಾಟಕದ ಹಲವು ಪ್ರದೇಶಗಳ ಮುಸ್ಲಿಮರ ಸ್ಥಿತಿಗತಿ ಯಂತೂ ಶೋಚನೀಯವಾಗಿದೆ. ಆ ಭಾಗದ ಮುಸ್ಲಿಮರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ರಂಗದಲ್ಲಿ ಪರಿವರ್ತನೆ ಆಗತ್ಯವಿದೆ. ಹಾಗಾಗಿ ಮಿಷನ್ ಕರ್ನಾಟಕ ಯೋಜನೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಸೈಯದ್ ಸ್ವಾದಿಕಲಿ ಶಿಹಾಬ್ ತಂಙಳ್ ಮನವಿ ಮಾಡಿದರು.

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಪ್ರೊ.ಆಲಿಕುಟ್ಟಿ ಮುಸ್ಲಿಯಾರ್ ಉದ್ಘಾಟಿಸಿ ಮಾತನಾಡಿದರು. ಮೌಲಾನಾ ಬಿ.ಕೆ.ಅಬ್ದುಲ್ ಖಾದರ್ ಅಲ್‌ಖಾಸಿಮಿ ಬಂಬ್ರಾಣ ದುಆಗೈದರು. ಶೈಖುನಾ ಇಬ್ರಾಹೀಂ ಫೈಝಿ ತಿರೂರ್‌ಕಾಡ್ ಪ್ರಾಸ್ತಾವಿಕ ಭಾಷಣಗೈದರು. ಇಸಾಕ್ ಹಾಜಿ ತೋಡಾರು ಸ್ವಾಗತಿಸಿದರು.

ಅತಿಥಿಗಳಾಗಿ ಮೌಲಾನಾ ಉಸ್ಮಾನುಲ್ ಫೈಝಿ ತೋಡಾರ್, ಸೈಯದ್ ಹುಸೈನ್ ಬಾಅಲವಿ ತಂಳ್ ಕುಕ್ಕಾಜೆ, ಸೈಯದ್ ಅಮೀರ್ ತಂಳ್ ಕಿನ್ಯ, ಇರ್ಷಾದ್ ದಾರಿಮಿ ಮಿತ್ತಬೈಲ್, ಮೌಲಾನಾ ಮುಫ್ತಿ ರಫೀಖ್ ಅಹ್ಮದ್ ಹುದವಿ ಕೋಲಾರ, ಮೌಲಾನಾ ಅಬ್ದುಲ್ ರಝಾಕ್ ಮಲೇಷ್ಯಾ, ಮೊಯಿನ್ ಕುಟ್ಟಿ ಚೇಳಾರಿ, ಮೌಲಾನಾ ಅನೀಸ್ ಕೌಸರಿ, ಅಸ್ಲಂ ಅಝ್ಹರಿ ಕಣ್ಣೂರು, ಉಳ್ಳಾಲ ದರ್ಗಾ ಅಧ್ಯಕ್ಷ ರಶೀದ್ ಹಾಜಿ ಉಳ್ಳಾಲ, ಹಾಜಿ ಇಬ್ರಾಹೀಂ ಕೋಡಿಜಾಲ್, ಪದ್ಮಶ್ರೀ ಹರೇಕಳ ಹಾಜಬ್ಬ, ಉದ್ಯಮಿಗಳಾದ ನಸೀಮಾ ಅಬ್ದುಲ್ ರಹ್ಮಾನ್ ಹಾಜಿ, ಮುಸ್ತಫಾ ಭಾರತ್, ಮನ್ಸೂರ್ ಅಹ್ಮದ್ ಅಝಾದ್, ಎಸ್.ಎಂ. ರಶೀದ್ ಹಾಜಿ, ಮಜೀದ್ ಹಾಜಿ ಸೂರಲ್ಪಾಡಿ, ಹನೀಫ್ ಹಾಜಿ ಬಂದರ್, ರಫೀಕ್ ಹಾಜಿ ಸುಲ್ತಾನ್, ನೌಶಾದ್ ಹಾಜಿ ಸೂರಲ್ಪಾಡಿ, ಇಸ್ಮಾಯೀಲ್ ಹಾಜಿ ಕಿನ್ಯ, ಜಮಾಲ್ ಬಂದರ್ ಮತ್ತಿತರರು ಉಪಸ್ಥಿತರಿದ್ದರು.

ಕಳೆದ ಐದು ವರ್ಷದಿಂದ ಪಟ್ಟಿಕ್ಕಾಡ್ ಜಾಮಿಯಾ ನೂರಿಯಾದ ಅಧೀನದಲ್ಲಿ ಮರ್ಹೂಂ ಪಾಣಕ್ಕಾಡ್ ಸೈಯದ್ ಮುಹಮ್ಮದ್ ಅಲಿ ಶಿಹಾಬ್ ತಂಳ್‌ರ ನಾಮಧ್ಯೇಯದಲ್ಲಿ ನ್ಯಾಶನಲ್ ಮಿಷನ್ ಕರ್ನಾಟಕ ಎಂಬ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಇದು ಉತ್ತರ ಕರ್ನಾಟಕದ ಧಾರವಾಡ ಜಿಲ್ಲೆಯ ಕುಂದುಗೋಳ ತಾಲೂಕನ್ನು ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿದ್ದು, ಸುಮಾರು 25 ಮದ್ರಸ ಹಾಗೂ 1 ಕಾಲೇಜು ನಡೆಸುತ್ತಿದೆ. ಸುಮಾರು 1500ರಷ್ಟು ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದಾರೆ. ಇದನ್ನು ಇನ್ನೂ ಹೆಚ್ಚಿನ ಕಡೆಗೆ ವಿಸ್ತರಿಸುವ ಯೋಜನೆಯಿದ್ದು ಪ್ರತೀ ಹಳ್ಳಿಯಲ್ಲಿ ಮದ್ರಸ ಸ್ಥಾಪನೆ, ಮಸೀದಿ ನಿರ್ಮಾಣ, ಮಹಿಳೆಯರಿಗೆ ಶರೀಅತ್ ಕಾಲೇಜುಗಳ ಸ್ಥಾಪನೆ, ಉರ್ದು ಶಾಲೆಗಳನ್ನು ಆಧುನೀಕರಣ ಮುಂತಾದ ಸಾಮುದಾಯಿಕ ಅತ್ಯಗತ್ಯ ಕಾರ್ಯಗಳನ್ನು ಮಾಡುವ ಉದ್ದೇಶದಿಂದ ಈ ಸಮಾಲೋಚನಾ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News