ಭಾರತದ ಯುವ ಕುಸ್ತಿಪಟುಗಳಿಗೆ ವೀಸಾ ನಿರಾಕರಿಸಿದ ಸ್ಪೇನ್: ರಾಯಭಾರ ಕಚೇರಿ

Update: 2022-10-18 01:52 GMT
Antim Panghal (Twitter Photo) 

ಹೊಸದಿಲ್ಲಿ: ಈ ತಿಂಗಳ 17ರಿಂದ 23ರವರೆಗೆ ಸ್ಪೇನ್‍ನ ಪೊಂಟೆವೇದ್ರಾ (Pontevedra)ದಲ್ಲಿ ಆಯೋಜನೆ ಗೊಂಡಿರುವ 23 ವರ್ಷ ವಯೋಮಿತಿಯ ವಿಶ್ವ ಕುಸ್ತಿ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಬೇಕಿದ್ದ ಭಾರತೀಯ ಯುವ ಕುಸ್ತಿಪಟುಗಳಿಗೆ ಇಲ್ಲಿನ ಸ್ಪೇನ್ ರಾಯಭಾರ ಕಚೇರಿ ವೀಸಾ ನಿರಾಕರಿಸಿದೆ.

ಈ ನೈರುತ್ಯ ಸ್ಪೇನ್ ನಗರದಲ್ಲಿ ಅವರ ಉದ್ದೇಶಿತ ವಾಸ್ತವ್ಯ ಮತ್ತು ಸ್ಥಿತಿ ಬಗ್ಗೆ ಅನುಮಾನಗಳಿವೆ ಎಂದು ರಾಯಭಾರ ಕಚೇರಿಯ ಉನ್ನತ ಅಧಿಕಾರಿ ಇ-ಮೇಲ್‍ನಲ್ಲಿ ಹೇಳಿದ್ದಾರೆ.

ವಿಶ್ವದರ್ಜೆಯ ಕುಸ್ತಿಪಟುಗಳನ್ನು ಆಕರ್ಷಿಸುವ ಈ ಟೂರ್ನಿ ಆರು ವರ್ಷಗಳಿಂದ ನಡೆಯುತ್ತಿದ್ದು, ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತ ತಂಡದ ಅನುಪಸ್ಥಿತಿ ಇದೇ ಮೊದಲು. ಬೆಲ್ಗ್ರೇಡ್‍ (Belgrade)ನಲ್ಲಿ 2021ರಲ್ಲಿ ನಡೆದ ಟೂರ್ನಿಯಲ್ಲಿ ಭಾರತೀಯ ಕುಸ್ತಿಪಟುಗಳು 5 ಪದಕಗಳನ್ನು ಗೆದ್ದು ಗಣನೀಯ ಸಾಧನೆ ಮಾಡಿದ್ದರು. ಶಿವಾನಿ ಪವಾರ್ ಮಹಿಳೆಯರ 50 ಕೆಜಿ ವಿಭಾಗದಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದಿದ್ದರು. 2017ರ ಆರಂಭಿಕ ಟೂರ್ನಿಯ ಬಳಿಕ 2021ರ ಸಾಧನೆ ಭಾರತದ ಗಣನೀಯ ಸಾಧನೆಯಾಗಿತ್ತು.

45 ಮಂದಿಯ ಭಾರತೀಯ ತಂಡದಲ್ಲಿ 30 ಮಂದಿ ಪುರುಷ ಹಾಗೂ ಮಹಿಳಾ ಪಟುಗಳು ಫ್ರೀಸ್ಟೈಲ್ ಮತ್ತು ಗ್ರೀಕೊ ರೋಮನ್ ವರ್ಗಗಳಲ್ಲಿ ಭಾಗವಹಿಸಲು ಭಾರತದ ಕುಸ್ತಿ ಫೆಡರೇಷನ್‍ನಿಂದ ಆಯ್ಕೆಯಾಗಿದ್ದರು.

53 ಕೆಜಿ ಮಹಿಳಾ ವಿಭಾಗದಲ್ಲಿ ಯು-20 ವಿಶ್ವಚಾಂಪಿಯನ್ ಅಂತಿಮ್ ಪಂಘಲ್, ವಿಶ್ವ ಕೆಡೆಟ್ ಚಾಂಪಿಯನ್ ಸಾಗರ್ ಜಗ್ಲಾನ್ (ಪುರುಷರ 74 ಕೆಜಿ), ಏಷ್ಯನ್ ಕೆಡೆಟ್ ಕಂಚಿನ ಪದಕ ವಿಜೇತೆ ರೀತಿಕಾ ಹೂಡಾ (ಮಹಿಳೆಯರ 72 ಕೆ.ಜಿ) ಮತ್ತು ಕಿರಿಯರ ವಿಶ್ವ ಬೆಳ್ಳಿಪದಕ ವಿಜೇತೆ ಭಾತೇರಿ (ಮಹಿಳೆಯರ 65 ಕೆಜಿ) ಅವರು ತಂಡದಲ್ಲಿದ್ದರು.

ಸಾಮಾನ್ಯ ವರ್ಗದಲ್ಲಿ ಅಕ್ಟೋಬರ್ 4ರಂದು ವೀಸಾಗೆ ಅರ್ಜಿ ಸಲ್ಲಿಸಲಾಗಿತ್ತು ಹಾಗೂ ಇದಕ್ಕೆ ಅನುಸಾರವಾಗಿ ಟಿಕೆಟ್ ಕಾಯ್ದಿರಿಸಲಾಗಿತ್ತು. ಅಕ್ಟೋಬರ್ 16ರಂದು ತಂಡ ಸ್ಪೇನ್‍ಗೆ ತೆರಳಬೇಕಿತ್ತು. ಈ ಕೂಟಕ್ಕೆ ಈಗಾಗಲೇ ತೆರಳಿರುವ 9 ಮಂದಿಯನ್ನು ಹೊರತುಪಡಿಸಿ ಉಳಿದ 21 ಮಂದಿಯ ವೀಸಾ ಅರ್ಜಿ ತಿರಸ್ಕರಿಸಲಾಗಿದೆ ಎಂದು  ರಾಯಭಾರ ಕಚೇರಿ ಹೇಳಿದ್ದಾಗಿ ಭಾರತದ ಕುಸ್ತಿ ಫೆಡರೇಷನ್ ಸಹಾಯಕ ಕಾರ್ಯದರ್ಶಿ ವಿನೋದ್ ಥೋಮರ್ ಹೇಳಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News