ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರಿಗೆ 'ಬೆದರಿಕೆ' ಪ್ರಕರಣ: ತನಿಖೆ ಸಿಐಡಿಗೆ ಒಪ್ಪಿಸಿದ ಸರಕಾರ

Update: 2022-10-18 04:24 GMT

ಬೆಳ್ತಂಗಡಿ, ಅ.18: ಓವರ್ ಟೇಕ್ ವಿಚಾರವಾಗಿ ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ಅಡ್ಡಗಟ್ಟಿ 'ಬೆದರಿಕೆ' ಹಾಕಿದ  ಪ್ರಕರಣವನ್ನು ಸಿಐಡಿ ತನಿಖೆಗೆ ಹಸ್ತಾಂತರಿಸಿ ರಾಜ್ಯ ಸರಕಾರ ಆದೇಶಿಸಿದೆ.

ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ತಕ್ಷಣದಿಂದ ಅನ್ವಯವಾಗುವಂತೆ ಸಿಐಡಿಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

ಅ.13ರಂದು ರಾತ್ರಿ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ಇನ್ನೊಂದು ಕಾರಿನಲ್ಲಿ ವ್ಯಕ್ತಿಯೋರ್ವ ಬೆನ್ನಟ್ಟಿ ಅಡ್ಡಗಟ್ಟಿ ತಲವಾರು ತೋರಿಸಿ ಬೆದರಿಸಿರುವುದಾಗಿ ಶಾಸಕರ ಕಾರು ಚಾಲಕ ಪೊಲೀಸ್ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಮಂಗಳೂರು ಫಳ್ನೀರ್ ನಿವಾಸಿ ರಿಯಾಝ್(38) ಎಂಬವರನ್ನು ಬಂಧಿಸಿದ್ದರು. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಸ್ಪಷ್ಟನೆ ನೀಡಿ, ಆರೋಪಿಗೆ ಕಾರು ಓವರ್ ಟೇಕ್ ಮಾಡಲು ರಸ್ತೆ ಬಿಟ್ಟು ಕೊಡದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಇದರ ಹಿಂದೆ ಬೇರೆ ಯಾವುದೇ ಉದ್ದೇಶ ಇಲ್ಲ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಹೇಳಿದ್ದರು. ಬಂಧಿತ ರಿಯಾಝ್ ಅವರಿಗೆ ಅ.16ರಂದು ಬಂಟ್ವಾಳ ಪ್ರಥಮ ದರ್ಜೆ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.

ಬಳಿಕ ಪ್ರಕರಣದ ಬಗ್ಗೆ ಸಚಿವರು, ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್ ಸೇರಿದಂತೆ ಸೇರಿದಂತೆ ಹಲವು ಸಂಘಟನೆಗಳು ತನಿಖೆಗೆ ಒತ್ತಾಯಿಸಿದ್ದವು. ಈ ನಡುವೆ ಘಟನೆ ಕುರಿತಂತೆ ಶಾಸಕ ಹರೀಶ್ ಪೂಂಜಾ ನೀಡಿರುವ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿ ಮಾರ್ಪಟ್ಟಿತ್ತು. ಇದೀಗ ರಾಜ್ಯ ಸರಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿ ಆದೇಶ ನೀಡಿದ್ದು, ಇಂದಿನಿಂದಲೇ ತನಿಖೆ ಆರಂಭಗೊಳ್ಳಲಿದೆ.

ಇದನ್ನೂ ಓದಿ: ಫರಂಗಿಪೇಟೆ: ಬೆಳ್ತಂಗಡಿ ಶಾಸಕರ ಕಾರು ಅಡ್ಡಗಟ್ಟಿ ತಲವಾರು ಝಳಪಿಸಿದ ದುಷ್ಕರ್ಮಿಗಳು; ಪ್ರಕರಣ ದಾಖಲು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News