ಸೋಲು ಖಚಿತವಾದ ಬಳಿಕ ಬಿಜೆಪಿ ಸ್ಪರ್ಧೆಯಿಂದ ಹಿಂದೆ ಸರಿದಿದೆ: ಉದ್ಧವ್ ಠಾಕ್ರೆ

Update: 2022-10-18 09:18 GMT
Photo:PTI

ಮುಂಬೈ: ಅಂಧೇರಿ ಪೂರ್ವ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುರ್ಜಿ ಪಟೇಲ್ ಅವರು ತಮ್ಮ ಸೋಲು ಖಚಿತ ಎಂಬುದನ್ನು ಮನಗಂಡು ಹಿಂದೆ ಸರಿದಿದ್ದಾರೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ ಇಂದು ಹೇಳಿದೆ.

ಆದರೆ ಈ "ಸುರಕ್ಷಿತ ಮಾರ್ಗ" ದ ನಂತರವೂ ಬಿಜೆಪಿ ಅವಮಾನವನ್ನು ಅನುಭವಿಸಿದೆ ಎಂದು ಠಾಕ್ರೆ ಬಣವು ತನ್ನ ಮುಖವಾಣಿ 'ಸಾಮ್ನಾ'ದಲ್ಲಿ ಬರೆದುಕೊಂಡಿದೆ.

"(ಬಿಜೆಪಿ) ಅಭ್ಯರ್ಥಿಯ ಹಿಂಪಡೆಯುವಿಕೆಯು ನಾವು ನೋಡಿದಷ್ಟು  ಸರಳವಾಗಿಲ್ಲ. ಶಿವಸೇನೆಯ (ಠಾಕ್ರೆ ಬಣ) ಗೆಲುವು ಸನ್ನಿಹಿತವಾಗಿದೆ ಎಂಬುದನ್ನು ಬಿಜೆಪಿಯೂ ಅರಿತುಕೊಂಡಿರಬೇಕು. ಪಟೇಲ್ ಅವರ ನಾಮಪತ್ರಗಳಲ್ಲಿನ ಕೆಲವು ವೈಪರೀತ್ಯಗಳಿಂದಾಗಿ ಅದು ತಿರಸ್ಕತವಾಗುವ ಬಲವಾದ ಸಾಧ್ಯತೆಯಿತ್ತು. ಅವರ (ಬಿಜೆಪಿ-ಶಿಂಧೆ ಗುಂಪಿನ) ಕಾರು ಅಪಾಯಕಾರಿ ತಿರುವಿನಲ್ಲಿತ್ತು. ಅದು ಅಪಘಾತಕ್ಕೆ ಒಳಗಾಗುವ ಸಾಧ್ಯತೆಯಿದೆ. ಈ ಅಪಘಾತವನ್ನು ತಪ್ಪಿಸಲು ಅವರು ಬ್ರೇಕ್ ಹಾಕಿದರು ಮತ್ತು ಯು-ಟರ್ನ್ ತೆಗೆದುಕೊಂಡರು" ಎಂದು  'ಸಾಮ್ನಾ'ದ ಸಂಪಾದಕೀಯ ಹೇಳಿದೆ.

ಮರಾಠಿ ದೈನಿಕದ ಮುಖಪುಟವು ಉಪಚುನಾವಣೆಯ ಕುರಿತು "ಕಮಲಾಬಾಯಿ ಅಂಧೇರಿಯಿಂದ ಹಿಮ್ಮೆಟ್ಟಿತು" ಎಂಬ ಶೀರ್ಷಿಕೆಯೊಂದಿಗೆ ಲೇಖನವನ್ನು ಪ್ರಕಟಿಸಿತು.

ಟೀಮ್ ಠಾಕ್ರೆ ಆಡಳಿತಾರೂಢ ಬಿಜೆಪಿಯನ್ನು 'ಕಮಲಾಬಾಯಿ' ಎಂದು ಕರೆದಿದೆ.  ಇದು ಬಿಜೆಪಿಯ ಚುನಾವಣಾ ಚಿಹ್ನೆ  ಕಮಲವನ್ನು ಉಲ್ಲೇಖಿಸುತ್ತದೆ.

ನವೆಂಬರ್ 3 ರಂದು ನಿಗದಿಯಾಗಿದ್ದ ಅಂಧೇರಿ ಪೂರ್ವ ಉಪಚುನಾವಣೆಯು ಈ ವರ್ಷದ ಆರಂಭದಲ್ಲಿ ಶಿವಸೇನಾ ಶಾಸಕ ರಮೇಶ್ ಲಟ್ಕೆ ಅವರ ನಿಧನದ ಕಾರಣ ಅನಿವಾರ್ಯವಾಗಿದೆ.

ಠಾಕ್ರೆ ನೇತೃತ್ವದ ಸೇನಾ ಬಣವು ರಮೇಶ್ ಲಟ್ಕೆ ಅವರ ಪತ್ನಿ ರುತುಜಾ ಲಟ್ಕೆ ಅವರನ್ನು ಕಣಕ್ಕಿಳಿಸಿದೆ.  ಆದರೆ ಬಿಜೆಪಿ ಪಟೇಲ್ ಅವರನ್ನು ನಾಮನಿರ್ದೇಶನ ಮಾಡಿತ್ತು.ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಸೋಮವಾರ ಬಿಜೆಪಿ ತನ್ನ ಅಭ್ಯರ್ಥಿಯನ್ನು ಹಿಂಪಡೆದುಕೊಂಡಿತ್ತು.

ಏಳು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಆದರೆ ರುತುಜಾ ಲಟ್ಕೆ ಗೆಲುವು ಖಚಿತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News