×
Ad

ಇಂಡೊನೇಶ್ಯಾ: ಕಿಡ್ನಿ ವೈಫಲ್ಯದಿಂದ 99 ಮಕ್ಕಳು ಮೃತ್ಯು

Update: 2022-10-19 23:04 IST

ಜಕಾರ್ತ, ಅ.19: ಇಂಡೋನೇಶ್ಯಾ(Indonesia)ದಲ್ಲಿ ಮೂತ್ರಪಿಂಡದ ವೈಫಲ್ಯದ ಸಮಸ್ಯೆ(ಎಕೆಐ)ಯಿಂದ ಈ ವರ್ಷ ಸುಮಾರು 100 ಮಕ್ಕಳು ಮೃತಪಟ್ಟಿದ್ದು, ಈ ಸಮಸ್ಯೆ ದಿಢೀರ್ ಏರಿಕೆಯಾಗಲು ಕಾರಣವೇನು ಎಂಬ ಬಗ್ಗೆ ತಜ್ಞರ ತಂಡವೊಂದು ತನಿಖೆ ನಡೆಸಲಿದೆ ಎಂದು ಇಂಡೋನೇಶ್ಯಾದ ಆರೋಗ್ಯ ಇಲಾಖೆ ಬುಧವಾರ ಹೇಳಿದೆ.

ಮೂತ್ರಪಿಂಡ(ಕಿಡ್ನಿ)ಗಳು ಇದ್ದಕ್ಕಿದ್ದಂತೆ ಸರಿಯಾಗಿ ಕೆಲಸ ಮಾಡುವುದನ್ನು ನಿಲ್ಲಿಸುವುದು ಎಕೆಐ ಸಮಸ್ಯೆಯ ಲಕ್ಷಣವಾಗಿದೆ. ಗಾಂಬಿಯಾ ದೇಶದಲ್ಲಿ ಜ್ವರಬಾಧಿತ ಮಕ್ಕಳಿಗೆ ಔಷಧವಾಗಿ ಬಳಸಲಾಗುತ್ತಿದ್ದ ಪ್ಯಾರಸೆಟಮಲ್ ಸಿರಪ್ನಿಂದ(From paracetamol syrup) ಎಕೆಐ ಸಮಸ್ಯೆ ಕಂಡುಬಂದು ಸುಮಾರು 70 ಮಕ್ಕಳು ಮೃತಪಟ್ಟ ವರದಿಯ ಬೆನ್ನಲ್ಲೇ ಇಂಡೊನೇಶ್ಯಾದಲ್ಲಿ ಇಂತಹ ಪ್ರಕರಣ ವರದಿಯಾಗಿದೆ. ಆದರೆ ಇಂತಹ ಔಷಧ ಇಂಡೋನೇಶ್ಯಾದಲ್ಲಿ ಲಭ್ಯವಿಲ್ಲ ಮತ್ತು ಈ ಅಂಶವನ್ನು ಒಳಗೊಂಡ ಔಷಧದ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಕ್ಟೋಬರ್ 18ರವರೆಗೆ 206 ಮಕ್ಕಳಲ್ಲಿ ಎಕೆಐ ಪ್ರಕರಣ ವರದಿಯಾಗಿದ್ದು 99 ಮಕ್ಕಳು ಮೃತಪಟ್ಟಿದ್ದಾರೆ. ಇವುಗಳಲ್ಲಿ 65%ದಷ್ಟು ಪ್ರಕರಣಗಳಿಗೆ ಜಕಾರ್ತದಲ್ಲೇ ಚಿಕಿತ್ಸೆ ಒದಗಿಸಲಾಗಿದೆ. ಸಮಸ್ಯೆಯನ್ನು  ತಡೆಗಟ್ಟುವ ಕ್ರಮವಾಗಿ, ನಮ್ಮ ಸಂಶೋಧನೆ ಮತ್ತು ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ದ್ರವ ಅಥವಾ ಸಿರಪ್ ಔಷಧವನ್ನು ಶಿಫಾರಸು ಮಾಡುವುದನ್ನು ಅಥವಾ ಒದಗಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಎಲ್ಲಾ ಆರೋಗ್ಯ ಕೇಂದ್ರ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಕಿಡ್ನಿ ವೈಫಲ್ಯದ ಕಾಯಿಲೆಯಲ್ಲಿ ದಿಢೀರ್ ಹೆಚ್ಚಳವಾಗಿರುವ ಬಗ್ಗೆ ತನಿಖೆ ನಡೆಯುತ್ತಿದ್ದು, ಈ ಕಾಯಿಲೆಗೆ ತಜ್ಞ ಔಷಧವನ್ನು ಖರೀದಿಸಲಾಗಿದೆ   ಎಂದು ಆರೋಗ್ಯ ಇಲಾಖೆಯ ವಕ್ತಾರ ಮುಹಮ್ಮದ್ ಸ್ಯಾಹ್ರಿಲ್(Muhammad Sahril) ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ಮಕ್ಕಳಲ್ಲಿ ಎಕೆಐ ಕಾಯಿಲೆ ದಿಢೀರ್ ಹೆಚ್ಚಳದ ಬಗ್ಗೆ ತನಿಖೆ ನಡೆಸಲು ಸ್ಥಳೀಯ ಆರೋಗ್ಯ ಅಧಿಕಾರಿಗಳು, ಮಕ್ಕಳ ತಜ್ಞರು ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳನ್ನು ಒಳಗೊಂಡ ತಜ್ಞರ ಸಮಿತಿಯನ್ನು   ಇಂಡೊನೇಶ್ಯಾ ಸರಕಾರ ರೂಪಿಸಿದ್ದು, ಗಾಂಬಿಯಾದಲ್ಲಿ ಇಂತಹ ಪ್ರಕರಣಗಳನ್ನು ನಿರ್ವಹಿಸಿದ್ದ ವಿಶ್ವ ಆರೋಗ್ಯ ಸಂಸ್ಥೆ ತಜ್ಞರ ಸಲಹೆಯನ್ನೂ ಪಡೆಯಲು  ನಿರ್ಧರಿಸಲಾಗಿದೆ.

ಅಕ್ಟೋಬರ್ 18ರಂದು ಆರೋಗ್ಯ ಇಲಾಖೆ ರವಾನಿಸಿರುವ ಪತ್ರದಲ್ಲಿ ಎಕೆಐ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ಮಕ್ಕಳಿಗೆ ಒದಗಿಸಲಾದ ಔಷಧಗಳನ್ನು ಸಂಗ್ರಹಿಸುವಂತೆ ಆರೋಗ್ಯ ಕೇಂದ್ರಗಳಿಗೆ  ಮತ್ತು ಮುಂದಿನ ಸೂಚನೆಯವರೆಗೆ ಸಿರಪ್ ಆಧಾರಿತ ಔಷಧದ ಮಾರಾಟವನ್ನು ನಿಲ್ಲಿಸುವಂತೆ ಔಷಧ ಮಾರಾಟಗಾರರಿಗೆ  ಸೂಚಿಸಲಾಗಿದೆ ಎಂದು `ರಾಯ್ಟರ್ಸ್' ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News