ಪೊಲೀಸರಿಗೆ ದಿಲ್ಲಿ ಮಹಿಳಾ ಆಯೋಗದ ನೋಟಿಸ್

Update: 2022-10-19 18:13 GMT

ಹೊಸದಿಲ್ಲಿ,ಅ.19: ಇತ್ತೀಚಿಗೆ ನಡೆದಿದ್ದ 38ರ ಹರೆಯದ ಮಹಿಳೆಯೋರ್ವಳ ಮೇಲಿನ ಕ್ರೂರ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ದಿಲ್ಲಿ ಮಹಿಳಾ ಆಯೋಗ (ಡಿಸಿಡಬ್ಲು)ವು ಗಾಝಿಯಾಬಾದ್ ಪೊಲೀಸರಿಗೆ ನೋಟಿಸ್ ಹೊರಡಿಸಿದ್ದು,ಈ ದಾಳಿಯು ನಿರ್ಭಯಾ ಪ್ರಕರಣವನ್ನು ನೆನಪಿಸಿದೆ ಎಂದು ಹೇಳಿದೆ.

ದಿಲ್ಲಿ ನಿವಾಸಿ ಮಹಿಳೆಯು ಸಣಬಿನ ಚೀಲದಲ್ಲಿ ಸುತ್ತಲಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು,ಕೈಕಾಲುಗಳನ್ನು ಕಟ್ಟಲಾಗಿತ್ತು ಮತ್ತು ಖಾಸಗಿ ಅಂಗದಲ್ಲಿ ಕಬ್ಬಿಣದ ಸರಳನ್ನು ತೂರಿಸಲಾಗಿತ್ತು ಎಂದು ಡಿಸಿಡಬ್ಲು ಹೇಳಿದೆ.

ಅದು ತಿಳಿಸಿರುವಂತೆ ಮಹಿಳೆಯು ಅ.16ರಂದು ತನ್ನ ಸೋದರನ ಹುಟ್ಟುಹಬ್ಬಕ್ಕೆ ತೆರಳಲು ಗಾಝಿಯಾಬಾದ್‌ನಲ್ಲಿ ಆಟೋರಿಕ್ಷಾಕ್ಕಾಗಿ ಕಾಯುತ್ತಿದ್ದಾಗ ಕಾರಿನಲ್ಲಿ ಬಂದಿದ್ದ ನಾಲ್ವರು ವ್ಯಕ್ತಿಗಳು ಆಕೆಯನ್ನು ಅಪಹರಿಸಿದ್ದರು. ಈ ನಾಲ್ವರು ಇನ್ನೋರ್ವ ವ್ಯಕ್ತಿಯೊಂದಿಗೆ ಸೇರಿಕೊಂಡು ಎರಡು ದಿನಗಳ ಕಾಲ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು ಮತ್ತು ಚಿತ್ರಹಿಂಸೆ ನೀಡಿದ್ದರು.

ದಿಲ್ಲಿ ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದ್ದು,ಆಕೆಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಡಿಸಿಡಬ್ಲು ತಿಳಿಸಿದೆ.

ಕ್ರಮಾನುಷ್ಠಾನ ವರದಿ,ಎಫ್‌ಐಆರ್‌ನ ಪ್ರತಿ ಮತ್ತು ಬಂಧನಗಳ ವಿವರಗಳನ್ನು ಸಲ್ಲಿಸುವಂತೆ ಡಿಸಿಡಬ್ಲು ತನ್ನ ನೋಟಿಸಿನಲ್ಲಿ ಗಾಝಿಯಾಬಾದ್‌ನ ಎಸ್‌ಎಸ್‌ಪಿಗೆ ಸೂಚಿಸಿದೆ.

 ‘ಘಟನೆಯು ಅತ್ಯಂತ ಭಯಾನಕ ಮತ್ತು ಆತಂಕಕಾರಿಯಾಗಿದೆ. ಇದು ನಿರ್ಭಯಾ ಪ್ರಕರಣವನ್ನು ನೆನಪಿಸುತ್ತಿದೆ. ಎಲ್ಲ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು.ಮಹಿಳೆಯರು ಮತ್ತು ಮಕ್ಕಳ ಮೇಲೆ ಇನ್ನೆಷ್ಟು ಸಮಯ ಇಂತಹ ತೀವ್ರ ಕ್ರೌರ್ಯವನ್ನು ನಡೆಸಲಾಗುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ನಾನು ವಿಫಲಳಾಗಿದ್ದೇನೆ ’ ಎಂದು ಡಿಸಿಡಬ್ಲು ಅಧ್ಯಕ್ಷೆ ಸ್ವಾತಿ ಮಲಿವಾಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News